ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮೋಡ; ಖಗೋಳಾಸಕ್ತರಿಗೆ ನಿರಾಸೆ

ಜಿಲ್ಲೆಯ ಕೆಲವೇ ಸ್ಥಳಗಳಲ್ಲಿ ಗೋಚರಿಸಿದ ನಭೋಮಂಡಲದ ವಿಸ್ಮಯ, ಮಹಡಿ ಮೇಲೆ ಹತ್ತಿ ನೋಡಿದ ಮಕ್ಕಳು
Last Updated 22 ಜೂನ್ 2020, 10:07 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಪೂರ್ಣಪ್ರಮಾಣದಲ್ಲಿ ಹತೋಟಿಗೆ ಬಂದಿಲ್ಲ. ಕೊರೊನಾ ಸಂಬಂಧಿಸಿದ ಸುರಕ್ಷಿತ ನಿಯಮಗಳನ್ನು ಪಾಲಿಸಬೇಕಾದ ಕಾರಣ ಬಹುತೇಕ ಮಂದಿಗೆ ಭಾನುವಾರ ನಿರೀಕ್ಷಿತ ಪ್ರಮಾಣದಲ್ಲಿ ಸೂರ್ಯಗ್ರಹಣ ವೀಕ್ಷಿಸಲು ಸಾಧ್ಯವಾಗಲಿಲ್ಲ.

ಖಗೋಳ ವಿಸ್ಮಯಗಳು ಸಂಭವಿಸಿದಾಗಲೆಲ್ಲ ಇಲ್ಲಿನ ಕಲಬುರ್ಗಿ ವಿಜ್ಞಾನ ಕೇಂದ್ರದಲ್ಲಿ ದೂರದರ್ಶಕದ ಮೂಲಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗತಿತ್ತು. ವಿವಿಧ ವಿಜ್ಞಾನ, ಎಂಜಿನಿಯರಿಂಗ್ ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ಇದನ್ನು ಕಣ್ಣು ತುಂಬಿಕೊಳ್ಳುತ್ತಿದ್ದರು. ಆದರೆ, ಕೋವಿಡ್‌ ಪೀಡಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇರುವುದರಿಂದ, ಈ ಬಾರಿ ಎಲ್ಲಿಯೂ ಗ್ರಹಣ ವೀಕ್ಷಣೆಗೆ ಅಗತ್ಯ ಸಿದ್ಧತೆ ಮಾಡಿರಲಿಲ್ಲ.

‘ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ. ಅಲ್ಲದೇ, ಈಗ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷೆ ಕೂಡ ಹತ್ತಿರಕ್ಕೆ ಬಂದಿವೆ. ದೂರದರ್ಶಕದ ಮೂಲಕ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಕೊಟ್ಟರೆ, ಒಬ್ಬರಿಂದ ಒಬ್ಬರಿಗೆ ಅಂತರ ಕಾ‍ಪಾಡಿಕೊಳ್ಳುವುದು ಕಷ್ಟಸಾಧ್ಯ. ಈ ಕಾರಣಕ್ಕೆ ತುಂಬಾ ಎಚ್ಚರಿಕೆ ವಹಿಸಿದೆವು ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದರು.

ಹಲವು ಮಕ್ಕಳು, ಪಾಲಕರು ಟೆರೆಸ್ ಮೇಲೆ ಹತ್ತಿ ಕಪ್ಪು ಕನ್ನಡಕದ ಮೂಲಕ ಸೂರ್ಯ– ಚಂದ್ರರ ಚಲನೆ ವೀಕ್ಷಿಸಿದರು. ಆದರೆ, ಬೆಳಿಗ್ಗೆಯಿಂದಲೂ ಮೋಡ ಕವಿದ ಕಾರಣ ಬಹಳಷ್ಟು ಖಗೋಳಾಸಕ್ತರಿಗೆ ಸ್ಪಷ್ಟವಾಗಿ ಗೋಚರಿಸಲಿಲ್ಲ.

ಮನೆಯಿಂದ ಹೊರಬಾರದ ಜನ: ಗ್ರಹಣ ಆರಂಭವಾದ ಸಮಯದಿಂದ ಹಿಡಿದು ಕೊನೆಗೊಳ್ಳುವವರೆಗೆ ಜನರು ಮನೆ ಬಿಟ್ಟು ಹೊರಬರಲಿಲ್ಲ. ಇದರಿಂದ ಪ್ರಮುಖ ಮಾರುಕಟ್ಟೆ, ರಸ್ತೆ, ವೃತ್ತಗಳಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಹಲವರು ಪೂಜಾದಿ ಕಾರ್ಯ ಮಾಡುತ್ತ ಉಪವಾಸ ಆಚರಿಸಿದರು. ಬಹು‍ತೇಕ ಮಂದಿ ಗ್ರಹಣ ಮೋಕ್ಷ ಹೊಂದಿದ ಮೇಲೆ ಮಾರುಕಟ್ಟೆಗಳಿಗೆ ಬಂದು ದಿನಸಿ ಖರೀದಿಸಿದರು. ಹೋಟೆಲ್‌ಗಳಲ್ಲಿಯೂ ಮಧ್ಯಾಹ್ನ ಜನಸಂದಣಿ ಇರಲಿಲ್ಲ.

ಗ್ರಹಣ ಮುಗಿದ ಮೇಲೆ ಮಧ್ಯಾಹ್ನ 1.30ರ ನಂತರ ಹಲವು ಕಡೆ ಗೃಹಿಣಿಯರು ನೀರು ಸುರಿದ ಇಡೀ ಮನೆಯ ಆವರಣವನ್ನು ಶುಚಿಗೊಳಿಸಿದರು. ಮನೆಯಲ್ಲಿ ಸಣ್ಣಪುಟ್ಟ ಮೂರ್ತಿ ಹಾಗೂ ದೇವರ ಚಿತ್ರಗಳನ್ನು ಶುಚಿಗೊಳಿಸಿ, ಪೂಜೆ ಸಲ್ಲಿಸಿದರು.

ಆಟೊ ಮೂಲಕ ಅರಿವು: ಸೂರ್ಯಗ್ರಹಣ ಸಮಯದಲ್ಲಿ ಮೌಢ್ಯಕ್ಕೆ ಒಳಗಾಗಿ ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳನ್ನು ಮಣ್ಣಿನಲ್ಲಿ ಹೂತಿಡುವ ಕೆಟ್ಟ ಸಂಸ್ಕ್ರತಿಯನ್ನು ಆಚರಿಸದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಭಾನುವಾರ ಬೆಳಿಗ್ಗೆ ಆಟೊ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ 1098 ಕಲಬುರ್ಗಿ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಮೌಢ್ಯ ವಿರೋಧಿ ಜಾಗೃತಿ ಜಾಥಾಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಂತೋಷ ಸಪ್ಪಂಡಿ ಚಾಲನೆ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರವೀಣಕುಮಾರ, ಚೈಲ್ಡ್‌ಲೈನ್ ಸಹ ನಿರ್ದೇಶಕಿ ಡಾ.ರೇಣುಕಾ ಗುಬ್ಬೇವಾಡ, ಡಾನ್ ಬಾಸ್ಕೋ ಸಂಸ್ಥೆಯ ಫಾದರ್ ಸಜಿತ್ ಜಾರ್ಜ್, ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ್, ಸಂಸ್ಕಾರ ಪ್ರತಿಷ್ಠಾನದ ನಿರ್ದೇಶಕ ವಿಠಲ ಚಿಕಣಿ, ಎನ್.ಸಿ.ಎಲ್.ಪಿ. ಯೋಜನಾ‌ ನಿರ್ದೇಶಕ ಸಂತೋಷ ಕುಲಕರ್ಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಡಕದ ಕಾನೂನು ಪ್ರರಿವೀಕ್ಷಣಾಧಿಕಾರಿ ಭರತೇಶ್ ಶೀಲವಂತ, ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ಬಸವರಾಜ ಟೆಂಗಳಿ, ಡಾನ್ ಬಾಸ್ಕೋ ಸಂಸ್ಥೆಯ ಮಕ್ಕಳ ಸಹಾಯವಾಣಿ ಸಂಯೋಜಕ ಮಲ್ಲಯ್ಯ ಗುತ್ತೇದಾರ ಮತ್ತು ರಾಜಕುಮಾರ್ ದೇವರಮನಿ ಇದ್ದರು.

ವಿವಿಧೆಡೆ ಹೋಮ, ಹವನ

ಸೂರ್ಯಗ್ರಹಣದ ಸಂದರ್ಭ ಜಿಲ್ಲೆಯ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಭಾನುವಾರ ನವಗ್ರಹ, ಮೃತ್ಯುಂಜಯ ಹೋಮ ಮಾಡಲಾಯಿತು. ದೇವಲ ಗಾಣಗಾಪುರ, ಸನ್ನತಿ, ಮಳಖೇಡ ಸೇರಿ ವಿವಿಧ ಕಡೆಗಳಿಗೆ ಭಕ್ತರು ತೆರಳಿ ನದಿಗಳಲ್ಲಿ ಪುಣ್ಯ ಸ್ನಾನ ಮಾಡಿದರು.

ಹಲವರು ನೀರು, ಊಟ. ಉಪಾಹಾರ ಸೇವಿಸಿದೇ ಪೂಜಾ ವಿಧಿ ಅನುಸರಿಸಿದರು. ಜಗತ್‌ ವೃತ್ತದಲ್ಲಿ ಸೇರಿದ ಜ್ಞಾನ– ವಿಜ್ಞಾನ ಸಮಿತಿ ಪದಾಧಿಕಾರಿಗಳು ಊಟ ಮಾಡಿ, ಬಾಳೆಹಣ್ಣು ತಿಂದು ಗ್ರಹಣ ಸಮಯದಲ್ಲೇ ಮೌಢ್ಯದ ಬಗ್ಗೆ ಅರಿವು ಮೂಡಿಸಿದರು.

ನಗರದ ಜೇವರ್ಗಿ ಕಾಲನಿ ರಾಯರ ಮಠ, ಬಿದ್ದಾಪುರ ಕಾಲೊನಿ ರಾಘವೇಂದ್ರ ಸ್ವಾಮಿಗಳ ಮಠ ಹಾಗೂ ಬ್ರಹ್ಮಪುರದ ಉತ್ತರಾದಿ ಮಠ, ಜಯತೀರ್ಥ ನಗರದ ಶ್ರೀಲಕ್ಷ್ಮೀ ನಾರಾಯಣ ಮಂದಿದರಲ್ಲಿ ವಿಶೇಷ ಹೋಮ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT