ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಬಾದ್‌: ನಿರ್ಮಾಣ ಹಂತದಲ್ಲೇ ಹದಗೆಟ್ಟ ರಾಜ್ಯ ಹೆದ್ದಾರಿ

Last Updated 2 ಸೆಪ್ಟೆಂಬರ್ 2020, 7:40 IST
ಅಕ್ಷರ ಗಾತ್ರ

ಶಹಾಬಾದ್‌: ನಗರದ ಮೂಲಕ ಹಾದುಹೋಗುವ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಾಜ್ಯ ಹೆದ್ದಾರಿ ತೀವ್ರ ಹದಗೆಟ್ಟಿದೆ. ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿ ದ್ದು, ಮಳೆ ಬಂದರೆ ಸಾಕು ನೀರು ತುಂಬಿ ಕೆಸರು ಗದ್ದೆಯಾಗುತ್ತಿದೆ.

ನಗರೋತ್ಥಾನ ಯೋಜನೆಯಡಿ ರಸ್ತೆ ವಿಸ್ತರಣೆಗಾಗಿ ಹಣ ನೀಡಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ ಇನ್ನೂ ಪೂರ್ಣಗೊಳ್ಳುವ ಹಂತದಲ್ಲೇ ಅನೇಕ ಗುಂಡಿಗಳು ಬಿದ್ದಿವೆ.

ರಸ್ತೆ ವಿಸ್ತರಣೆ ಮಾಡಲು ಹೋಗಿ ಉತ್ತಮ ಗುಣಮಟ್ಟದಿಂದ ಕೂಡಿದ್ದ ಮೊದಲಿನ ರಸ್ತೆ ಸಂಪೂರ್ಣ ಹಾಳಾಗಿದೆ. ಅನೇಕ ಕಡೆಗಳಲ್ಲಿ ಬಿರುಕು ಮೂಡಿ ರಸ್ತೆ ಕಿತ್ತು ಹೋಗಿದೆ. ಇತ್ತೀಚೆಗೆ ‘ಟೂತ್‌ ಪಾಲಿಷ್’ ಮಾಡಲಾಗಿದೆ. ಆದರೆ ಅದು ಕೂಡ ಕಳಚಿ ಹೋಗಿ ಸಾರ್ವಜನಿಕರಿಗೆ ಕುತ್ತಾಗಿ ಪರಿಣಮಿಸಿದೆ. ರಸ್ತೆ ಸುಧಾರಣೆಗೆ ಮಾಡಿದ ಖರ್ಚಿನ ಮಾಹಿತಿಯೂ ಸಿಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಕೇವಲ 1 ಕಿ.ಮೀ ರಸ್ತೆಯ ಮಧ್ಯೆ ನೂರಾರು ಹೊಂಡ ನಿರ್ಮಾಣವಾಗಿರುವುದರಿಂದ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ತುಂಬೆಲ್ಲಾ ನೀರು ತುಂಬಿಕೊಂಡು ತಗ್ಗು ಕಾಣದೆ ದ್ವಿಚಕ್ರ ವಾಹನಗಳು ಬಿದ್ದ ಘಟನೆಗಳೂ ನಡೆದಿವೆ.

‘ಈ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಈ ರಸ್ತೆಯನ್ನು ಹೊಸದಾಗಿ ನಿರ್ಮಾಣ ಮಾಡಲು ಮುಂದಾಗಬೇಕು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಜನರು ಒತ್ತಾಯಿಸಿದ್ದಾರೆ.

‘ಬಸ್ ನಿಲ್ದಾಣದಿಂದ ಹೊರಡುವ ಬಸ್‍ಗಳು ರಿಂಗ್ ರೋಡ್ ಮೂಲಕ ಹಾದು ಹೋಗದೆ ಮುಖ್ಯ ಬಜಾರಿನ ಮೂಲಕ ಸಾಗುತ್ತಿವೆ. ಇದರಿಂದ ಹೊನಗುಂಟಾ ವೃತ್ತ, ಅಶೋಕ ನಗರ, ಶರಣ ನಗರ ಸೇರಿದಂತೆ ಜೇವರ್ಗಿಗೆ ಹೋಗುವ ಜನರಿಗೆ ಬಸ್ ಸಿಗದೆ ಎಲ್ಲಿಲ್ಲದ ತೊಂದರೆ ಉಂಟಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಮಹ್ಮದ್ ಇರ್ಫಾನ್ ದೂರಿದರು.

‘ಹೊನಗುಂಟಾ ರಸ್ತೆಯ ಮಧ್ಯೆ ಬೀದಿ ದೀಪಗಳನ್ನು ಅಳವಡಿಕೆಗೆ ಕಾಯ್ದಿರಿಸಿದ ಅನುದಾನವನ್ನು ರದ್ದುಗೊಳಿಸಿ ಮತ್ತೆ ಅದೇ ರಸ್ತೆಯ ವಿಸ್ತರಣೆಗಾಗಿ ವಿನಿಯೋಗಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು’ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಜಮಹ್ಮದ್ ರಾಜಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT