ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಗ್ರಾಹಕರ ಏಳ್ಗೆಯೇ ಪ್ರಥಮ ಆದ್ಯತೆ’

ಯೂನಿಯನ್‌ ಬ್ಯಾಂಕ್‌ ‍ಪ್ರಾದೇಶಿಕ ಕಚೇರಿ ಉದ್ಘಾಟಿಸಿದ ಬಿ.ಶ್ರೀನಿವಾಸ ರಾವ್
Last Updated 28 ಜನವರಿ 2021, 17:12 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಲಬುರ್ಗಿ ನಗರದಲ್ಲಿ ಯೂನಿಯನ್ ಬ್ಯಾಂಕ್‌ನ ನೂತನ ಪ್ರಾದೇಶಿಕ ಕಚೇರಿ ತೆರೆಯಲಾಗಿದ್ದು, ಈ ಭಾಗದ ಜನರ ಆರ್ಥಿಕ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ’ ಎಂದು ಬ್ಯಾಂಕ್‌ನ ಬೆಂಗಳೂರಿನ ಕ್ಷೇತ್ರ ಮಹಾಪ್ರಬಂಧಕ ಬಿ.ಶ್ರೀನಿವಾಸ ರಾವ್‌ ತಿಳಿಸಿದರು.

‘ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಜನರು ಈವರೆಗೂ ಬೆಳಗಾವಿಯಲ್ಲಿರುವ ಪ್ರಾದೇಶಿಕ ಕಚೇರಿಯನ್ನೇ ಅವಲಂಬಿಸಬೇಕಿತ್ತು. ಇದು ದೂರ ಮತ್ತು ವೆಚ್ಚದಾಯಕ ಆಗುವ ಕಾರಣ ಗ್ರಾಹಕರ ಅನುಕೂಲಕ್ಕೆ ಇಲ್ಲಿ ದೊಡ್ಡ ಶಾಖೆ ಆರಂಭಿಸಲಾಗಿದೆ. ಕಲಬುರ್ಗಿ, ಯಾದಗಿರಿ, ಬೀದರ್‌, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳ ಗ್ರಾಹಕರು ಈ ಶಾಖೆಯ ವ್ಯಾಪ್ತಿಗೆ ಒಳಪಡುತ್ತಾರೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಲಬುರ್ಗಿಯು ತೊಗರಿ ನಾಡಾಗಿದ್ದು, ಇಲ್ಲಿನ ದಾಲ್‌ಮಿಲ್‌ಗಳ ಪುನಶ್ಚೇತನಕ್ಕೆ ಬ್ಯಾಂಕ್‌ ವಿಶೇಷ ಗಮನ ಹರಿಸಲಿದೆ. ಅದೇ ರೀತಿ ರಾಯಚೂರು ಅಕ್ಕಿ ಕಣಜವಾಗಿದ್ದು, ಅಲ್ಲಿ ಅಕ್ಕಿ ಗಿರಣಿಗಳೇ ಹೆಚ್ಚು. ವಿಜಯಪುರದಲ್ಲಿ ಆಹಾರೋತ್ಪನ್ನ, ಕೃಷಿ ಪರಿಕರ ಹಾಗೂ ದ್ರಾಕ್ಷಿ ಬೆಳೆಗೆ ಸಂಬಂಧಿಸಿದ ಉದ್ಯಮವಿದೆ. ಹೀಗೆ ಆಯಾ ಜಿಲ್ಲೆಗಳ ಗ್ರಾಹಕರು ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಬೆಳೆ ಬೆಳೆಯಲು ಬೇಕಾದ ಅವಶ್ಯಕ ಸೌಲಭ್ಯ ಬ್ಯಾಂಕ್‌ ನೀಡಲಿದೆ’ ಎಂದರು.

‘ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್‌ ಬ್ಯಾಂಕ್‌ಗಳು ಯೂನಿಯನ್‌ ಬ್ಯಾಂಕ್‌ನಲ್ಲಿ ವಿಲೀನಗೊಂಡ ನಂತರ ನಮ್ಮ ಬ್ಯಾಂಕ್‌ನ ವ್ಯಾಪ್ತಿ ವಿಶಾಲವಾಗಿದೆ. ಒಟ್ಟು ₹ 15.37 ಲಕ್ಷ ಕೋಟಿ ಮೊತ್ತದ ವ್ಯವಹಾರ ಬ್ಯಾಂಕ್‌ ನಿರ್ವಹಿಸುತ್ತಿದೆ. ಒಟ್ಟು 9590 ಶಾಖೆಗಳನ್ನು ಹೊಂದಿದ್ದು, 12 ಕೋಟಿಗೂ ಹೆಚ್ಚು ಗ್ರಾಹಕರು ಇದ್ದಾರೆ. ₹ 8.86 ಲಕ್ಷ ಕೋಟಿ ಠೇವಣಿ ಹೊಂದಿದೆ. 6.51 ಲಕ್ಷ ಕೋಟಿ ಮುಂಗಡ ಜಮೆ ಹೊಂದಿದೆ’ ಎಂದರು.

‘ಕಲಬುರ್ಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ 15 ವಲಯ ಕಚೇರಿ, ಬೀದರ್‌ನಲ್ಲಿ 7 ಮತ್ತು ಯಾದಗಿರಿ ಜಿಲ್ಲೆಯಲ್ಲಿ 6 ಶಾಖೆಗಳು ಸೇರಿ ಈ ಪ್ರಾದೇಶಿಕ ಶಾಖೆ ವ್ಯಾಪ್ತಿಯಲ್ಲಿ ಒಟ್ಟು 58 ಶಾಖೆಗಳಿವೆ. ಯಾದಗಿರಿ, ಯಡ್ರಾಮಿ, ಮಸ್ಕಿ, ದೇವದುರ್ಗ, ರಾಯಚೂರು, ಕೆಂಭಾವಿ, ಸುರಪೂರ ಪಟ್ಟಣಗಳಲ್ಲೂ ಶಾಖೆ ತೆರೆಯಲು ಉದ್ದೇಶವಿದೆ’ ಎಂದರು.

‘ಕೋವಿಡ್‌ ಸಾಂಕ್ರಾಮಿಕ ಸಂಕೀರ್ಣ ಸ್ಥಿತಿಯಲ್ಲಿದ್ದಾಗಲೂ ಎಲ್ಲ ಬ್ಯಾಂಕುಗಳಂತೆ ಯೂನಿಯನ್ ಬ್ಯಾಂಕ್‌ ಕೂಡ ನಿರಂತರ ಸೇವೆ ಸಲ್ಲಿಸಿದೆ. ಜನರಿಗೆ ಆರ್ಥಿಕ ಹೊರೆಯಾಗದಂತೆ, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ನಮ್ಮದೇ ಪಾಲು ನೀಡುವಲ್ಲಿ ನಾವು ದೊಡ್ಡ ಕಾಣಿಕೆ ನೀಡಿದ್ದೇವೆ. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡುವಲ್ಲಿ ದೇಶದ ಎರಡನೇ ದೊಡ್ಡ ಬ್ಯಾಂಕ್‌ ಆಗಿದೆ. ಒಟ್ಟಾರೆ ಸಾಲ ನೀಡಿಕೆಯಲ್ಲಿ ದೇಶದ ಮೂರನೇ ಸ್ಥಾನದಲ್ಲಿದೆ’ ಎಂದರು.

ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಟಿ.ಎ. ನಾರಾಯಣನ್‌, ಉಪ ಮಹಾಪ್ರಬಂಧಕ ಎಸ್‌.ಕೆ. ಲೋನಿ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT