ಗುರುವಾರ , ಜೂನ್ 30, 2022
24 °C
ಕಲಬುರಗಿ–ಯಾದಗಿರಿ ಅವಳಿ ಜಿಲ್ಲೆಗಳಲ್ಲಿ 391 ಮತಗಟ್ಟೆಗಳು; ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಅವಕಾಶ

ವಿಧಾನ ಪರಿಷತ್‌: ಇಂದು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಶುಕ್ರವಾರ (ಇದೇ 10ರಂದು)  ನಡೆಯಲಿರುವ ಮತದಾನಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಗುರುವಾರ ಸಂಜೆ ಆಯಾ ಗ್ರಾಮ ಪಂಚಾಯಿತಿ, ತಾಲ್ಲೂಕು ಕೇಂದ್ರಗಳತ್ತ ತೆರಳಿದರು.

ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಮಸ್ಟರಿಂಗ್ ಕಾರ್ಯ ನಡೆಯಿತು. ವಿವಿಧ ಮತಗಟ್ಟೆಗಳಿಗೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳು (ಆರ್‌ಒ), ಸಹಾಯಕ ಮತಗಟ್ಟೆ ಅಧಿಕಾರಿಗಳು (ಎಆರ್‌ಒ) ಮತಪೆಟ್ಟಿಗೆಗಳು, ಮತದಾರರ ಪಟ್ಟಿಯನ್ನು ಪಡೆದುಕೊಂಡು ಎಲ್ಲವೂ ಸರಿಯಾಗಿದ್ದನ್ನು ಪರಿಶೀಲಿಸಿಕೊಂಡ ಬಳಿಕ ಮತಗಟ್ಟೆಗಳಿಗೆ ತೆರಳಿದರು. ಹೆಚ್ಚುವರಿ ಸಿಬ್ಬಂದಿಯನ್ನೂ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗಿದೆ.

ಮತದಾನವು ತಾಲ್ಲೂಕು ಪಂಚಾಯಿತಿ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಹಾನಗರ ಪಾಲಿಕೆ, ನಗರಸಭೆ ಸದಸ್ಯರು ಆಯಾ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಮತ ಚಲಾಯಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಮತ ಚಲಾಯಿಸಲು ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳು, ಎಂಸಿಸಿ ತಂಡದ ಸದಸ್ಯರು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳಿಗೆ ಸುಸೂತ್ರವಾಗಿ ಚುನಾವಣೆ ನಡೆಸುವ ಕುರಿತು ಸೂಚನೆ ನೀಡಿದರು.

ಮಾಸ್ಕ್, ಸ್ಯಾನಿಟೈಸರ್: ಮತಗಟ್ಟೆ ಸಿಬ್ಬಂದಿಗೆ ಚುನಾವಣಾ ಆಯೋಗವು ಮಾಸ್ಕ್, ಸ್ಯಾನಿಟೈಸರ್‌ಗಳನ್ನು ವಿತರಿಸಿದೆ. ಮತದಾರರ ದೇಹದ ಉಷ್ಣತೆ ಪರಿಶೀಲಿಸುವ ಉಪಕರಣವನ್ನೂ ನೀಡಲಾಗಿದೆ.

ಮೂವರು ಅಭ್ಯರ್ಥಿಗಳು: ಕಣದಲ್ಲಿ ಬಿಜೆಪಿಯ ಬಿ.ಜಿ.ಪಾಟೀಲ, ಕಾಂಗ್ರೆಸ್‌ನ ಶಿವಾನಂದ ಪಾಟೀಲ ಮರತೂರ ಹಾಗೂ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಕೋಡ್ಲಿ ಅವರು ಕಣದಲ್ಲಿದ್ದು, ಮೂವರೂ ಅಭ್ಯರ್ಥಿಗಳು ಮತದಾನದ ಹಿಂದಿನ ದಿನವಾದ ಗುರುವಾದ ಮತದಾರರನ್ನು ತಲುಪುವ ಕೊನೆಯ ಪ್ರಯತ್ನವನ್ನು ಮಾಡಿದರು.

ಪಕ್ಷದ ಮುಖಂಡರು, ಮತಗಟ್ಟೆ ಏಜೆಂಟರೊಂದಿಗೆ ಸಮಾಲೋಚನೆ ನಡೆಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳನ್ನು ಕಳಿಸಿದರು. ಕಲಬುರಗಿ ಮಹಾನಗರ ಪಾಲಿಕೆ, ಶಹಾಬಾದ್, ಯಾದಗಿರಿ ನಗರಸಭೆಗಳ ಸದಸ್ಯರು, ವಿವಿಧ ಪುರಸಭೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಕರೆ ಮಾಡಿ ಮನವೊಲಿಕೆಯಲ್ಲಿ ತೊಡಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು