ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಭಾಗಮಂಡಲ ಪಟ್ಟಣಕ್ಕೆ ತಟ್ಟಿದೆ ಜಲಾಭಾವ

ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಇಳಿಮುಖ; ತುರ್ತಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ
Published 2 ಮಾರ್ಚ್ 2024, 6:27 IST
Last Updated 2 ಮಾರ್ಚ್ 2024, 6:27 IST
ಅಕ್ಷರ ಗಾತ್ರ

ನಾಪೋಕ್ಲು: ಎರಡು ವರ್ಷಗಳಿಂದ ತಗ್ಗಿದ ಮಳೆಯ ಪ್ರಮಾಣದಿಂದ ಕಾವೇರಿ ತವರಿನಲ್ಲೂ ಇದೀಗ ಜಲಾಭಾವ ಕಾಡುತ್ತಿದೆ. ಭಾಗಮಂಡಲದಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು, ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ.

ಭಾಗಮಂಡಲ -ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಿಂದ ಸುರಿಯುವ ಮಳೆಯ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಬೇಸಿಗೆಗೂ ಮುನ್ನವೇ ಇಲ್ಲಿನ ಎಲ್ಲ ಜಲಮೂಲಗಳೂ ಬತ್ತಲಾರಂಭಿಸಿವೆ. ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಕಾಡುವಂತಾಗಿದೆ. ಕಾವೇರಿಯ ಮೂಲ ತಲಕಾವೇರಿಯಿಂದ ಹಿಡಿದು ಭಾಗಮಂಡಲ ಕೋರಂಗಾಲ, ಪುಲಿಕೋಟು ನಾಫೋಕ್ಲು, ಬಲಮುರಿ ಸೇರಿದಂತೆ ಕಾವೇರಿ ನದಿ ಹರಿವಿನ ಉದ್ದಕ್ಕೂ ಜಲಮೂಲ ಕ್ಷೀಣಿಸಿದೆ.

ಭಾಗಮಂಡಲ ಪಟ್ಟಣಕ್ಕೆ ವ್ಯವಸ್ಥಿತ ನೀರಿನ ಪೂರೈಕೆ ಇಲ್ಲದೆ ಸಮಸ್ಯೆ ಉಂಟಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ಹೊಸದಾಗಿ ತೆಗೆಸಿದ ಕೊಳವೆ ಬಾವಿಯಿಂದ ನೀರು ಪೂರೈಕೆ ಆಗುತ್ತಿಲ್ಲ. ಖಾಸಗಿ ಸ್ಥಳದಲ್ಲಿ ಜಾಕ್ ವೆಲ್ ನಿರ್ಮಿಸಿ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಅರಣ್ಯ ಇಲಾಖೆ ಇದಕ್ಕೆ ಅಡ್ಡಿಪಡಿಸಿರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ. ತುರ್ತಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಪಟ್ಟಣದ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಇಳಿಮುಖಗೊಂಡಿದೆ. ಇಲ್ಲಿ ನೀರು ಶೇಖರಣೆಗೊಂಡರೆ ಮಾತ್ರ ಭಾಗಮಂಡಲ ವ್ಯಾಪ್ತಿಯ ಬಾವಿಗಳಲ್ಲಿ ನೀರಿನ ಸಂಗ್ರಹ ಇರುತ್ತದೆ. ಇದೀಗ ತ್ರಿವೇಣಿ ಸಂಗಮದಲ್ಲಿ ಜಲಮೂಲವೂ ಕ್ಷೀಣಗೊಳ್ಳುತ್ತಿರುವುದರಿಂದ ಸುತ್ತಮುತ್ತಲಿನ ಬಾವಿಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಕಾವೇರಿಯ ಮೂಲದಲ್ಲಿ ಜನರು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಬಿಸಿಲಿನ ತಾಪಮಾನಕ್ಕೆ ಜೀವನದಿ ಕಾವೇರಿ ನದಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಹರಿವಿನ ಪ್ರಮಾಣ ಕ್ಷೀಣಿಸುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮಾನವ ಮತ್ತು ಜೀವ ಸಂಕುಲಕ್ಕೆ ಬೇಸಿಗೆ ಅವಧಿಯಲ್ಲಿ ನೀರಿನ ಕೊರತೆ ಕಾಡುವುದು ನಿಶ್ಚಿತ ಎನಿಸಿದೆ. ತಾಪಮಾನ ಹೆಚ್ಚಿರುವುದರಿಂದ ಕಾಫಿಯ ತೋಟಗಳಲ್ಲಿ ಗಿಡಗಳೂ ಬಾಡಲಾರಂಭಿಸಿವೆ. ಕಾಳು ಮೆಣಸಿನ ಬಳ್ಳಿಗಳೂ  ಒಣಗುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ನೀರಿನ ಅನುಕೂಲ ಉಳ್ಳವರು ತುಂತುರು ನೀರಾವರಿ ವ್ಯವಸ್ಥೆ ಮೂಲಕ ತೋಟಕ್ಕೆ ಕೆರೆಗಳಿಂದ ನೀರು ಹಾಯಿಸುತ್ತಿದ್ದಾರೆ.

‘ಈ ಹಿಂದಿನ ವರ್ಷಗಳಂತೆ ಸಾಕಷ್ಟು ಪ್ರಮಾಣದಲ್ಲಿ ನೀರು ಲಭಿಸುತ್ತಿಲ್ಲ ನೀರಿನ ಹರಿವು ಕ್ಷೀಣಿಸಿದೆ. ಕೆರೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಇರುವ ನೀರನ್ನೇ ಬಳಸಿಕೊಂಡು ತೋಟಗಳಿಗೆ ನೀರು ಹಾಯಿಸಬೇಕಾಗಿದೆ’ ಎಂದು ಕೋರಂಗಾಲದ ಬೆಳೆಗಾರ ಮಾದಪ್ಪ ತಿಳಿಸಿದರು.

ಭಾಗಮಂಡಲ ಗ್ರಾಮ ಪಂಚಾಯಿತಿ ಸದಸ್ಯ ಶಿರಕಜೆ ನಾಗೇಶ್ ಪ್ರತಿಕ್ರಿಯಿಸಿ, ‘ಎರಡು ದಿನಗಳಿಂದ ಭಾಗಮಂಡಲ ಪಟ್ಟಣಕ್ಕೆ ನೀರಿನ ಕೊರತೆ ಉಂಟಾಗಿದೆ. ಎರಡು ವರ್ಷಗಳಿಂದ ಕಾವೇರಿ ಮೂಲದಲ್ಲಿ ಮಳೆಯ ಕೊರತೆ ಉಂಟಾಗಿದ್ದು ವಾರ್ಷಿಕ 115 ಇಂಚು ಮಳೆ ಕಡಿಮೆಯಾಗಿದೆ. ಹೊಸದಾಗಿ ಪೈಪ್‌ಲೈನ್ ಅಳವಡಿಸಿ ನೀರು ಪೂರೈಸದಿದ್ದಲ್ಲಿ ಭಾಗಮಂಡಲ ಪಟ್ಟಣದ ಜನತೆ ಬೇಸಿಗೆಯ ಅವಧಿಯಲ್ಲಿ ತೀವ್ರ ಸಂಕಷ್ಟವನ್ನು ಎದುರಿಸಲಿದ್ದಾರೆ’ ಎಂದರು.

ಭಾಗಮಂಡಲ ಸಮೀಪದ ಕೋರಂಗಾಲ ಗ್ರಾಮದಲ್ಲಿ ತುಂತುರು ನೀರಾವರಿಯಿಂದ ಕಾಫಿಯ ಹೂಗಳು ಅರಳಿರುವುದು
ಭಾಗಮಂಡಲ ಸಮೀಪದ ಕೋರಂಗಾಲ ಗ್ರಾಮದಲ್ಲಿ ತುಂತುರು ನೀರಾವರಿಯಿಂದ ಕಾಫಿಯ ಹೂಗಳು ಅರಳಿರುವುದು
ನಾಪೋಕ್ಲು ಹೋಬಳಿಯ ಬೇತು ಗ್ರಾಮದ ತೋಟವೊಂದರಲ್ಲಿನ ಕೆರೆಯೊಂದರಲ್ಲಿ ನೀರು ಕಡಿಮೆಯಾಗುತ್ತಿದೆ
ನಾಪೋಕ್ಲು ಹೋಬಳಿಯ ಬೇತು ಗ್ರಾಮದ ತೋಟವೊಂದರಲ್ಲಿನ ಕೆರೆಯೊಂದರಲ್ಲಿ ನೀರು ಕಡಿಮೆಯಾಗುತ್ತಿದೆ
ನಾಪೋಕ್ಲು ಹೋಬಳಿಯ ಬೇತು ಗ್ರಾಮದ ತೋಟವೊಂದರಲ್ಲಿನ ಕೃಷಿ ಹೊಂಡವು ಬತ್ತುತ್ತಿದೆ
ನಾಪೋಕ್ಲು ಹೋಬಳಿಯ ಬೇತು ಗ್ರಾಮದ ತೋಟವೊಂದರಲ್ಲಿನ ಕೃಷಿ ಹೊಂಡವು ಬತ್ತುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT