ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ಕಣ್ಣಾಮುಚ್ಚಾಲೆ: ಬಾರದ ಕಾಫಿ ಹೂವು, ಆತಂಕದಲ್ಲಿ ಬೆಳೆಗಾರರು

ಲೋಕೇಶ್. ಡಿ.ಪಿ
Published 10 ಮೇ 2024, 6:04 IST
Last Updated 10 ಮೇ 2024, 6:04 IST
ಅಕ್ಷರ ಗಾತ್ರ

ಸೋಮವಾರಪೇಟೆ: ವಾಡಿಕೆಯಂತೆ ಪ್ರತೀ ವರ್ಷ ಮಾರ್ಚ್ ತಿಂಗಳು ತಪ್ಪಿದಲ್ಲಿ ಏಪ್ರಿಲ್‌ನಲ್ಲಿ ಕಾಫಿ ಹೂವಿನ ಮಾಳೆಯಾಗುವುದು ಸಾಮಾನ್ಯ. ಆದರೆ, ಪ್ರಸಕ್ತ ವರ್ಷ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಮಳೆಯಾಗದೆ, ಮಳೆ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ಅರೇಬಿಕಾ ಮತ್ತು ರೊಬಷ್ಟ ಕಾಫಿ ಬೆಳೆ ನಷ್ಟ ಅನುಭವಿಸುವಂತಾಗಿದೆ.

ಹಿಂದಿನ ಸಾಲಿನಲ್ಲಿ ಸರಿಯಾಗಿ ಮಳೆಯಾಗದೆ, ಬರಗಾಲ ಪೀಡಿತವಾಗಿದ್ದು, ಕುಡಿಯಲು ನೀರಿಗಾಗಿ ಪರಿತಪಿಸುವಂತಾಗಿದೆ. ಇದರಿಂದಾಗಿ ಹೆಚ್ಚಿನ ಕಾಫಿ ತೋಟಗಳಲ್ಲಿ ಕೊಳವೆಬಾವಿ ಇದ್ದರೂ, ನೀರು ಬತ್ತಿ ಹೋಗಿದ್ದರಿಂದ ಸರಿಯಾಗಿ ನೀರು ಹಾಯಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಬರಗಾಲದ ಹಿನ್ನೆಲೆಯಲ್ಲಿ ಹೊಳೆ, ತೋಡುಗಳಿಂದ ಕೃಷಿ ಚಟುವಟಿಕೆಗೆ ನೀರನ್ನು ಹಾಯಿಸಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿಗಳ ಆದೇಶದಿಂದಾಗಿ ಮತ್ತಷ್ಟು ಸಂಕಷ್ಟಕ್ಕಿಡಾಗಬೇಕಾಯಿತು.

ರಾಜ್ಯದಲ್ಲಿ ಅರೇಬಿಕ ಕಾಫಿಯನ್ನು ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಜಿಲ್ಲೆಯ ಸೋಮವಾರಪೇಟೆಯಲ್ಲಿ ವಾರ್ಷಿಕ ಸರಾಸರಿ 13 ಮೆಟ್ರಿಕ್ ಟನ್ ಅರೇಬಿಕಾ ಕಾಫಿ ಬೆಳೆಯಲಾಗುತಿದೆ. ತಾಲ್ಲೂಕಿನ 42 ಗ್ರಾಮಗಳಲ್ಲಿ 7405 ಹೆಕ್ಟೇರ್ ಪ್ರದೇಶದಲ್ಲಿ ಅರೇಬಿಕ ಹಾಗೂ 504 ಹೆಕ್ಟೇರ್ ಪ್ರದೇಶದಲ್ಲಿ ರೋಬಷ್ಟ ಕಾಫಿಯನ್ನು, 3045 ಚಿಕ್ಕ ಹಿಡುವಳಿದಾರರು ಹಾಗೂ 25 ದೊಡ್ಡ ಹಿಡುವಳಿದಾರರು ಕಾಫಿ ಬೆಳೆಯುತ್ತಿದ್ದಾರೆ. ಆದರೆ, ಕಳೆದ ವರ್ಷ ಸರಿಯಾಗಿ ಮಳೆಯಾಗದಿದ್ದರಿಂದ ಕಾಫಿ, ಮತ್ತು ಕಾಳು ಮೆಣಸಿನ ಫಸಲು ಹಾನಿಯಾಗಿದೆ. ಬಿಸಿಲಿನ ತಾಪಕ್ಕೆ ಹಲವೆಡೆಗಳಲ್ಲಿ ಕಾಫಿಗಿಡಗಳು ಒಣಗಿನಿಂತಿರುವುದನ್ನು ಕಾಣಬಹುದಾಗಿದೆ.

ಮಾರ್ಚ್ ಅಂತ್ಯದೊಳಗೆ 106.36 ಮಿ ಮೀ ಹೂವಿನ ಮಳೆಯಾಗಬೇಕಿತ್ತು. ಆದರೆ, ಕಿರಗಂದೂರು, ಐಗೂರು, ತಾಕೇರಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಮಾತ್ರ ತಡವಾಗಿ ಮಳೆಯಾಗಿದ್ದರೂ, ಹೆಚ್ಚಿನ ಫಸಲಿಗೆ ಹಾನಿಯಾಗಿಲ್ಲ. ಉಳಿದಂತೆ ಶನಿವಾರಸಂತೆ, ಬೇಳೂರು, ಕಾರೆಕೊಪ್ಪ, ಹೊಸಬೀಡು, ಕಿತ್ತೂರು, ಹಂಡ್ಲಿ ಸೇರಿದಂತೆ ಹಲವೆಡೆಗಳಲ್ಲಿ ಅಲ್ಪ ಸ್ವಲ್ಪ ಮಳೆಗೆ ಮೊಗ್ಗು ದೊಡ್ಡದಾದರೂ, ಸರಿಯಾದ ಸಮಯಕ್ಕೆ ಮಳೆ ಬೀಳದ ಹಿನ್ನೆಲೆಯಲ್ಲಿ ಗಿಡಗಳಲ್ಲಿ ಮೊಗ್ಗು ಸುಟ್ಟು ಉದುರುತ್ತಿದೆ.

ಒಟ್ಟಿನಲ್ಲಿ ಇವರೆಗೆ ತಾಲ್ಲೂಕಿನಲ್ಲಿ ಕೆಲವು ರೈತರ ನೀರು ಹಾಯಿಸಿ ಮತ್ತು ಇನ್ನು ಕೆಲವು ಭಾಗಗಳಲ್ಲಿ ಮಳೆಯಾದ್ದರಿಂದ ಶೇ 40 ರಷ್ಟು ಮಾತ್ರ ಸರಿಯಾದ ರೀತಿಯಲ್ಲಿ ಕಾಫಿ ಹೂ ಅರಳಿದ್ದು, ಉಳಿದ ಶೇ. 60 ಅರೇಬಿಕಾ ಕಾಫಿ ಬೆಳೆಗಾರರು ಮುಂದಿನ ಸಾಲಿನಲ್ಲಿಯೂ ಫಸಲು ನಷ್ಟು ಅನುಭವಿಸುವಂತಾಗಿದೆ.

‘ಹೂವು ಒಣಗುವ ಚಿಂತೆ’


ಪ್ರಸಕ್ತ ಸೋಮವಾರಪೇಟೆ ಪಟ್ಟಣ ಸೇರಿದಂತೆ ಹೆಚ್ಚಿನ ಸ್ಥಳಗಳಲ್ಲಿ ಇಂದಿಗೂ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಕೆಲವು ಕಡೆಗಳಲ್ಲಿ ಸುರಿದ ಅಲ್ಪ ಮಳೆಗೆ ಕಾಫಿ ತೋಟಗಳಲ್ಲಿ ನೆರಳು ಹೆಚ್ಚಿರುವ ಪ್ರದೇಶಗಳಲ್ಲಿ ಹೂ ಅರಳಿದೆ. ಅದು ಎಷ್ಟರ ಮಟ್ಟಿಗೆ ಉಳಿಯುತ್ತದೆ ಎಂದು ಹೇಳುವುದು ಕಷ್ಟ. ಈಗಾಗಲೇ ಮುಂದಿನ ಸಾಲಿನ ಫಸಲಿಗೆ ಮತ್ತು ಗಿಡಗಳು ಸುಟ್ಟುಹೋಗಿರುವುದರಿಂದ ಬೆಳೆಗಾರರಿಗೆ ನಷ್ಟವಾಗಿದೆ. ಮುಂದೆ ಮಳೆಯಾದರೂ, ಅದು ಕುಡಿಯುವ ನೀರಿಗೆ ಅನುಕೂಲವಾಗುತ್ತದೆಯಷ್ಟೆ ಎಂದು ತಾಲ್ಲೂಕು ಕಾಫೀ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಹೇಳಿದರು.

ಈ ಭಾರಿಯ ಕಾಫಿ ಹೂವಿನ ಮಳೆ ತಡವಾಗಿದೆ. ಕೆಲವೆಡೆ ಅಲ್ಪಸ್ವಲ್ಪ ಮಳೆಯಾಗಿರುವುದರಿಂದ ಸರಿಯಾಗಿ ಹೂ ಅರಳುವುದಿಲ್ಲ. ಕಳೆದ ಸಾಲಿನಲ್ಲಿ ಮಳೆ ಸರಿಯಾಗಿ ಬೀಳದಿರುವುದರಿಂದ ಹಳೆಯ ಅರೇಬಿಕಾ ಕಾಫಿ, 795 ಕಾಫಿಗಿಡಗಳು ಹೆಚ್ಚಿನ ಹಾನಿಗೊಳಗಾಗಿದ್ದು, ಕಾಫಿ ಗಿಡಗಳು ಎಲೆ ಉದುರಿದ್ದು ನಷ್ಟವಾಗುತ್ತಿದೆ ಎಂದು ಪ್ರಗತಿಪರ ಕೃಷಿ ಡಿಸಿಲ್ವ ತಿಳಿಸಿದರು.

ಸೋಮವಾರಪೇಟೆಯ ಸಮೀಪದ ಕಾರೆಕೊಪ್ಪ ಗ್ರಾಮದಲಿ ಬಿಸಿಲಿಗೆ ಒಣಗಿ ನಿಂತಿರುವ ಕಾಫಿ ಗಿಡಗಳು.
ಸೋಮವಾರಪೇಟೆಯ ಸಮೀಪದ ಕಾರೆಕೊಪ್ಪ ಗ್ರಾಮದಲಿ ಬಿಸಿಲಿಗೆ ಒಣಗಿ ನಿಂತಿರುವ ಕಾಫಿ ಗಿಡಗಳು.
ಸೋಮವಾರಪೇಟೆ ತಾಲ್ಲೂಕಿನ ಕಿತ್ತೂರು ಗ್ರಾಮದಲ್ಲಿ ಸಾಧಾರಣ ಮಳೆಗೆ ಕಾಫಿ ಮೊಗ್ಗು ದೊಡ್ಡದಾಗಿ ನಂತರ ಮಳೆಬಾರದಿದ್ದರಿಂದ ಗಿಡದಲ್ಲಿಯೇ ಸುಟ್ಟು ಉದುರುತ್ತಿರುವುದು. 
ಸೋಮವಾರಪೇಟೆ ತಾಲ್ಲೂಕಿನ ಕಿತ್ತೂರು ಗ್ರಾಮದಲ್ಲಿ ಸಾಧಾರಣ ಮಳೆಗೆ ಕಾಫಿ ಮೊಗ್ಗು ದೊಡ್ಡದಾಗಿ ನಂತರ ಮಳೆಬಾರದಿದ್ದರಿಂದ ಗಿಡದಲ್ಲಿಯೇ ಸುಟ್ಟು ಉದುರುತ್ತಿರುವುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT