ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಾಪ ಸಿಂಹ ಬಹಿರಂಗ ಚರ್ಚೆಗೆ ಬರಲಿ: ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ

ಸಂಸದರಿಗೆ ಸವಾಲೆಸೆದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ
Published 31 ಜನವರಿ 2024, 3:02 IST
Last Updated 31 ಜನವರಿ 2024, 3:02 IST
ಅಕ್ಷರ ಗಾತ್ರ

ಮಡಿಕೇರಿ: ಸಂಸದ ಪ್ರತಾಪಸಿಂಹ ಅವರಿಗೆ ಧೈರ್ಯವಿದ್ದರೆ ಅಭಿವೃದ್ಧಿ ಕಾರ್ಯಗಳ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ ಸವಾಲೆಸೆದರು.

ಅವರು ಸಂಸದರಾಗಿ ಆಯ್ಕೆಯಾದ ಮೊದಲ 7 ತಿಂಗಳಿನಲ್ಲಿ ಕನಿಷ್ಠ 70 ಪೈಸೆಯಷ್ಟು ಅನುದಾನ ತಂದಿದ್ದರೆ ಅವರು ಶ್ವೇತ ಪತ್ರ ಹೊರಡಿಸಲಿ ಎಂದೂ ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸವಾಲೊಡ್ಡಿದರು.

ಕಳೆದ 4 ವರ್ಷಗಳಿಂದ ಕೊಡಗಿಗೆ ಬಾರದೇ ಇದ್ದ ಅವರು ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಕೊಡಗಿಗೆ ಬಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

‘ಈಗ ಅವರು ನಮ್ಮ ಇಬ್ಬರು ಶಾಸಕರನ್ನು ಪರಸ್ಪರ ಎತ್ತಿಕಟ್ಟುವ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಪ್ರವೃತ್ತಿಯನ್ನು ಅವರು ನಿಲ್ಲಿಸಬೇಕು’ ಎಂದರು.

ನರೇಂದ್ರ ಮೋದಿ ಅವರ ನಾಮಬಲದಿಂದ ಮಾತ್ರವೇ ಅವರು ಗೆದ್ದು ಬಂದಿದ್ದಾರೆಯೇ ಹೊರತು ಸ್ವಂತ ವರ್ಚಸ್ಸಿನಿಂದ ಅಲ್ಲ. ಅವರ ನಡವಳಿಕೆಯನ್ನು ಕಂಡರೆ ಕೇವಲ ಕಾಂಗ್ರೆಸ್‌ನವರಿಗೆ ಮಾತ್ರವಲ್ಲ ಬಿಜೆಪಿಯವರಿಗೆ ಆಗುತ್ತಿಲ್ಲ. ಮೈಸೂರು– ಬೆಂಗಳೂರು ಹೆದ್ದಾರಿ ನಿರ್ಮಾಣದ ವೇಳೆ ಅವರು ಸುಮಲತಾ ಜೊತೆ ಹೇಗೆ ನಡೆದುಕೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.

‘ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಅವರು ಹಿರಿಯ ನಾಯಕ ಕೆ.ಜಿ.ಬೋಪಯ್ಯ ಅವರೊಂದಿಗೆ ಜಗಳವಾಡಿದ್ದರು. ನಮಗೆ ಬೋಪಯ್ಯ ಅವರನ್ನು ಕಂಡರೆ ಈಗಲೂ ಗೌರವ ಇದೆ. ಈಗಲೂ ನಾವು ವಿರಾಜಪೇಟೆಯ ತಹಶೀಲ್ದಾರ್ ಕಚೇರಿ ನಿರ್ಮಾಣಕ್ಕೆ ಬೋಪಯ್ಯ ಕಾರಣ ಎಂದು ಹೇಳುತ್ತೇವೆ’ ಎಂದು ಹೇಳಿದರು.

‘ರೈಲು ತರುತ್ತೇನೆ ಎಂದು ಹೇಳಿ ಹೋದ ಪ್ರತಾಪಸಿಂಹ ಇದುವರೆಗೂ ಕೊಡಗಿಗೆ ರೈಲು ತಂದಿಲ್ಲ. ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಗೆಂದು ಬಂದ ಹಣದ ಕಾಮಗಾರಿಗೆ ಭೂಮಿಪೂಜೆ ಮಾಡಿಸಿಕೊಂಡಿದ್ದಾರೆ. ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಅವರು ಕೊಡಗಿಗೆ ತಂದಿಲ್ಲ’ ಎಂದರು.

ಇದೇ ವೇಳೆ ಅವರು ಕಾಂಗ್ರೆಸ್ ಸರ್ಕಾರ ಕೊಡಗಿಗೆ ನೀಡಿರುವ ಯೋಜನೆಗಳ ಕುರಿತ ಅಂಕಿಅಂಶಗಳನ್ನು ಬಿಡುಗಡೆ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಟಾಟು ಮೊಣ್ಣಪ್ಪ ಮಾತನಾಡಿ, ‘ಬಸವರಾಜ ಬೊಮ್ಮಾಯಿ ಅವರೇ ಪ್ರತಾಪಸಿಂಹ ಅವರನ್ನು ಕುರಿತು ಅತಿ ಬುದ್ದಿವಂತರ ಜೊತೆ ಮಾತನಾಡಲಾಗದು ಎಂದು ಹೇಳಿದ್ದರು. ನಮ್ಮ ಶಾಸಕರ ಮನೆಗೆ ನಿತ್ಯವೂ ಜನರು ಸಮಸ್ಯೆಗಳನ್ನು ಹೊತ್ತು ತರುತ್ತಾರೆ. ಅವುಗಳನ್ನು ಶಾಸಕರು ಬಗೆಹರಿಸುತ್ತಾರೆ. ಆದರೆ, ಸಂಸದರು ಯಾರ ಕಷ್ಟಕ್ಕಾದರೂ ಸ್ಪಂದಿಸಿರುವ ಉದಾಹರಣೆ ಇದೆಯೇ’ ಎಂದು ಪ್ರಶ್ನಿಸಿದರು.

ಮತ್ತೊಬ್ಬ ಮುಖಂಡ ಕೆ.ಎಂ.ಲೋಕೇಶ್ ಮಾತನಾಡಿ, ‘ಪ್ರತಾಪಸಿಂಹ ಮಾಡಿರುವ ಕೆಲಸ ಶೂನ್ಯ ಎಂದು ನಾವಲ್ಲ ಅವರ ಪಕ್ಷದವರೇ ಹೇಳುತ್ತಿದ್ದಾರೆ. ಇಂದಿಗೂ ಅವರು ಕೊಡಗಿನ ಹಲವು ಗ್ರಾಮ ಪಂಚಾಯಿತಿಗಳಿಗೆ ಭೇಟಿಯನ್ನೇ ನೀಡಿಲ್ಲ’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಟಿ.ಪಿ.ರಮೇಶ್, ಕೊಲ್ಯದ ಗಿರೀಶ ಹಾಗೂ ತೆನ್ನೀರಾ ಮೈನಾ ಭಾಗವಹಿಸಿದ್ದರು.

ಮುಂದುವರಿದ ಕಾಂಗ್ರೆಸ್, ಬಿಜೆಪಿ ಮುಖಂಡರ ವಾಕ್ಸಮರ ಪ್ರತಾಪಸಿಂಹ ಸುದ್ದಿಗೋಷ್ಠಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖಂಡರು ಯೋಜನೆಗಳ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಧರ್ಮಜ ಉತ್ತಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT