ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಿಗೂ ಮುನ್ನ ಮೈಕೊರೆಯುವ ಚಳಿ l ದಿನೇ ದಿನೇ ತಾಪಮಾನ ಕುಸಿತ

ಕಾಫಿ ನಾಡಿನಲ್ಲಿ ಮಳೆಯೊಂದಿಗೆ ನಡುಗಿಸುವ ಚಳಿ
Last Updated 23 ನವೆಂಬರ್ 2022, 22:45 IST
ಅಕ್ಷರ ಗಾತ್ರ

ಮಡಿಕೇರಿ: ದಿನದಿಂದ ದಿನಕ್ಕೆ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾಗುತ್ತಿದ್ದು, ಕಾಫಿನಾಡಿನ ಜನತೆ ಮಾರ್ಗಶಿರ ಮಾಸಕ್ಕೂ ಮುನ್ನ ಗಡಗಡ ನಡುಗುವಂತಾಗಿದೆ. ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಈ ಬಾರಿ ಚಳಿ ಭಾರಿ ಪ್ರಮಾಣದಲ್ಲೇ ಹೆಚ್ಚಾಗಿದೆ.

‌ಸಾಮಾನ್ಯವಾಗಿ ಕಾರ್ತೀಕ ಮಾಸದ ಅಮಾವಾಸೆ ಕಳೆದ ಬಳಿಕ ಬರುವ ಮಾರ್ಗಶಿರ ಮಾಸದಲ್ಲಿ ಹೆಚ್ಚಿನ ಚಳಿ ಇರುತ್ತಿತ್ತು. ಕಳೆದ ವರ್ಷ ಡಿಸೆಂಬರ್‌ ಅಂತ್ಯದಲ್ಲಿ ಚಳಿ ಹೆಚ್ಚಾಗಿತ್ತು. ಆದರೆ, ಈ ಬಾರಿ ಕಾರ್ತೀಕ ಮಾಸದ ಅಂತ್ಯದ ಹೊತ್ತಿಗೆ ನಡುಗಿಸುವ ಚಳಿ ಆವರಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಳಿ ಹೆಚ್ಚಲಿದೆ ಎಂಬ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ.

ಗೋಣಿಕೊಪ್ಪಲಿನಲ್ಲಿ 11.09 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಮಡಿಕೇರಿಯ ಉಷ್ಣಾಂಶ ಸೋಮವಾರ 13 ಡಿಗ್ರಿಗೆ ಇಳಿದಿತ್ತು.

ಚಳಿಯ ಜತೆಗೆ ಮಂಗಳವಾರ ರಾತ್ರಿಯಿಂದಲೇ ತುಂತುರು ಮಳೆ ಅಲ್ಲಲ್ಲಿ ಬೀಳಲಾರಂಭಿಸಿದೆ. ಇನ್ನೆರಡು ದಿನಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆಯೂ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

’ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿ ಯಿಸಿದ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಜ್ಞಾನದ ವಿಷಯ ತಜ್ಞ ಹರೀಶ್‌, ‘ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಇದರಿಂದ ನ. 24ರಿಂದ ಮಳೆಯಾಗುವ ನಿರೀಕ್ಷೆ ಇದೆ. ತಾಪಮಾನವೂ ಕುಸಿತ ಕಾಣಲಿದೆ’ ಎಂದು ಹೇಳಿದರು.

ಕಪಾಟು ಸೇರಿದ್ದ ಸ್ವೆಟರ್‌, ಟೋಪಿಗಳು ಹೊರ ಬಂದಿವೆ. ವೃದ್ಧರು ಹೊರಬರಲು ಹಿಂದೇಟು ಹಾಕು ವಂತಾಗಿದೆ. ದಿನಪತ್ರಿಕೆ ಹಾಕುವವರು ನಡುಗುತ್ತಲೇ ಮನೆಮನೆಗೆ ಪತ್ರಿಕೆ ಹಾಕುವಂತಾಗಿದೆ. ಶಾಲಾ ಮಕ್ಕಳೂ ಸ್ವೆಟರ್‌ ಧರಿಸಿಯೇ ಹೊರಡಬೇಕಾದ ಅನಿವಾರ್ಯತೆ ಇದೆ.

ಬೆಳಿಗ್ಗೆ ಹೊತ್ತು ಅಭ್ಯಾಸ ಮಾಡುವ ಕ್ರೀಡಾಪಟುಗಳೂ ಚಳಿಗೆ ತತ್ತರಿಸಿದ್ದಾರೆ. ಕಳೆದ 4 ದಿನಗಳಿಂದ ನಡುಗಿಸುತ್ತಿರುವ ಚಳಿಯಿಂದ ಜನರು ಹೈರಣಾಗಿದ್ದಾರೆ.

ಜಿಲ್ಲೆಯಲ್ಲಿ ಕಾಫಿ ಕೊಯ್ಲು ನಡೆಯುತ್ತಿದ್ದು ಕಾರ್ಮಿಕರಿಗೂ ಚಳಿ ಮೈನಡುಗಿಸುತ್ತಿದೆ. ಬೇಗನೆ ಕೆಲಸ ಮುಗಿಸಿ, ಕಾರ್ಮಿಕರು ಮನೆಗೆ ತೆರಳುತ್ತಿದ್ದಾರೆ. ಕಣದಲ್ಲಿ ಕಾಫಿ ಒಣಗಿಸುವ ಕಾರ್ಮಿಕರು ಸಂಜೆ – ರಾತ್ರಿ ಬೆಂಕಿ ಹಾಕಿಕೊಂಡು ಚಳಿ ಕಾಯಿಸಿ ಕೊಳ್ಳುವ ದೃಶ್ಯ ಸಾಮಾನ್ಯ ವಾಗಿದೆ.

ಇಲ್ಲಿಗೆ ಬರುವ ಪ್ರವಾಸಿಗರಿಗೂ ಚಳ ಕಚಗುಳಿ ಇಟ್ಟಿದೆ. ನಸುಕಿನಲ್ಲಿ ಆವರಿಸುವ ಮಂಜಿನ ನಡುವ ರಾಜಾಸೀಟು ಸೇರಿದಂತೆ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಜನರು ಬರುತ್ತಿದ್ದಾರೆ.

‘ಮತ್ತಷ್ಟು ಕುಸಿಯಲಿದೆ ತಾಪಮಾನ’

ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ ಮತ್ತಷ್ಟು ಕುಸಿಯಲಿದೆ ಜತೆಗೆ ಸರಾಸರಿಗಿಂತಲೂ ಅಧಿಕ ಮಳೆ ಬೀಳಲಿದೆ ಎಂದು ಮೈಸೂರು ಸಮೀಪದ ನಾಗನಹಳ್ಳಿಯಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗ ತಿಳಿಸಿದೆ.

ನ. 23ರಿಂದ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ ಇರಲಿದ್ದು, ಗರಿಷ್ಠ ತಾಪಮಾನ 26ನ್ನು ದಾಟುವುದಿಲ್ಲ. ನ. 25ರಿಂದ ಡಿಸೆಂಬರ್ 1ರವರೆಗೂ ಸರಾಸರಿಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT