ಕಳೆದ 15 ವರ್ಷಗಳಿಂದಲೂ ಮಾಲಿನ್ಯಕಾರಕ ಪಟಾಕಿ ಸುಡುವುದರಿಂದ ಉಂಟಾಗುವ ಅನಾಹುತಗಳು ಪರಿಸರ ಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಪ್ರತಿ ವರ್ಷ ಜಿಲ್ಲೆಯ ಬಹುತೇಕ ಎಲ್ಲ ಶಾಲಾ ಕಾಲೇಜುಗಳಲ್ಲಿಯೂ ಈ ಜಾಗೃತಿ ಅಭಿಯಾನ ನಡೆಯುತ್ತಿದೆ. ಇದರಿಂದ ಬೇರೆ ಜಿಲ್ಲೆಗೆ ಹೋಲಿಸಿದರೆ ಕೊಡಗಿನ ಮಕ್ಕಳಲ್ಲಿ ಹೆಚ್ಚಿನ ಪರಿಸರ ಜಾಗೃತಿ ಇದೆ. ಪಟಾಕಿಯನ್ನು ಖರೀದಿಸಿ ಸುಡುವುದರಿಂದ ಹಣ ವ್ಯರ್ಥ. ಈ ಹಣವನ್ನು ಬೇಕಾದ ಅಗತ್ಯಗಳನ್ನು ಪೂರೈಸಲು ಬಳಕೆ ಮಾಡಬಹುದು.
-ಟಿ.ಜಿ.ಪ್ರೇಮಕುಮಾರ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ.
ಸ್ವಚ್ಛ ಭಾರತ ಸ್ವಚ್ಛ ಪರಿಸರ ಬೇಕು. ಕೊಡಗಿನಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ನಾವು ಇದನ್ನು ಹಾಗೆಯೇ ಕಾಪಾಡಿಕೊಳ್ಳಬೇಕು. ಈ ಶುದ್ಧ ಗಾಳಿಯನ್ನು ನಾವು ಉಳಿಸಿಕೊಳ್ಳಬೇಕು. ಇದಕ್ಕೆ ನಮ್ಮಲ್ಲಿ ಮೊದಲು ಅರಿವು ಬರಬೇಕು. ಇದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಮಾಲಿನ್ಯ ಹೆಚ್ಚು ಮಾಡದ ಹಸಿರು ಪಟಾಕಿಗಳ ಕಡೆಗೆ ಮಕ್ಕಳ ಗಮನ ಸೆಳೆಯುತ್ತಿದ್ದೇವೆ. ಪಟಾಕಿಯಿಂದ ವಯಸ್ಸಾದವರು ರೋಗಿಗಳು ಪ್ರಾಣಿ ಪಕ್ಷಿಗಳಿಗೆ ತೀರಾ ತೊಂದರೆಯಾಗುತ್ತದೆ. ಹೀಗಾಗಿ ಕಡಿಮೆ ಶಬ್ದ ಮಾಡುವ ಪಟಾಕಿ ಹಚ್ಚಿರಿ. ಸಾಧ್ಯವಾದರೆ ಪಟಾಕಿಯನ್ನು ತ್ಯಜಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ.
-ಕೆ.ಟಿ.ಬೇಬಿ ಮ್ಯಾಥ್ಯೂ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಪ್ರಧಾನ ಆಯುಕ್ತ.
‘ಕ್ಯೂಆರ್’ ಕೋಡ್ ಇರುವಂತಹ ಹಸಿರು ಪಟಾಕಿ ಮಾರಾಟ ಮಾಡಲು ಮಾತ್ರವೇ ಜಿಲ್ಲಾಡಳಿತ ಪರವಾನಗಿ ನೀಡಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ದೀಪಾವಳಿಗೂ ಮುಂಚೆ ಮತ್ತು ಹಬ್ಬದ ನಂತರ ಸತತ 15 ದಿನಗಳ ಕಾಲ ಗಾಳಿ ನಿರಂತರವಾಗಿ ಗಾಳಿಯ ಗುಣಮಟ್ಟವನ್ನು ಮಾಪನ ಮಾಡುತ್ತಿದ್ದೇವೆ. ದೀಪಾವಳಿ ಹಬ್ಬದ 3 ದಿನಗಳಂದು ಸಂಜೆ 6ರಿಂದ ರಾತ್ರಿ 12 ಗಂಟೆಯವರೆಗೆ ಶಬ್ದಮಾಪನ ಮಾಡುತ್ತೇವೆ. ಎಲ್ಲ ಅಂಗಡಿಗಳಿಗೂ ಭೇಟಿ ನೀಡಿ ಹೆಚ್ಚು ಶಬ್ದ ಉಂಟು ಮಾಡುವ ಪಟಾಕಿಗಳನ್ನು ಪರೀಕ್ಷಿಸುತ್ತೇವೆ.
-ರಘುರಾಮ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ.