ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಶಾಲನಗರಕ್ಕೆ ನೀರಿನ ಅಭಾವದ ಭೀತಿ

ಬೈಚನಹಳ್ಳಿ ಪಂಪ್‌ಹೌಸ್ ಬಳಿ ನಿಂತ ನದಿ ಹರಿವು!
Published 13 ಮಾರ್ಚ್ 2024, 6:13 IST
Last Updated 13 ಮಾರ್ಚ್ 2024, 6:13 IST
ಅಕ್ಷರ ಗಾತ್ರ

ಕುಶಾಲನಗರ: ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸಂಪೂರ್ಣ ಕ್ಷೀಣಗೊಂಡಿದ್ದು, ನದಿ ದಂಡೆ ಮೇಲಿರುವ ಕುಶಾಲನಗರ ಪಟ್ಟಣಕ್ಕೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವ ಭೀತಿ ಉಂಟಾಗಿದೆ.

ಜಿಲ್ಲೆಯ ಪ್ರಮುಖ ನೀರಿನ ಮೂಲವಾದ ಕಾವೇರಿ ಹಾಗೂ ಹಾರಂಗಿ ನದಿಯಲ್ಲಿ ಕ್ಷಿಪ್ರಗತಿಯಲ್ಲಿ ನೀರು ಇಳಿಮುಖವಾಗುತ್ತಿರುವುದರಿಂದ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ಪ್ರವಾಸಿ ತಾಣಗಳಾದ ದುಬಾರೆ, ಕಾವೇರಿ ನಿಸರ್ಗಧಾಮ, ಕಣಿವೆ ಶ್ರೀರಾಮಲಿಂಗೇಶ್ವರ ಕ್ಷೇತ್ರ ಹಾಗೂ ಕೊಪ್ಪ ಕಾವೇರಿ ಸೇತುವೆಯ ಬಳಿ ನದಿಯಲ್ಲಿ ನೀರು ಇಳಿಮುಖಗೊಂಡಿರುವುದರಿಂದ ಬಹುತೇಕ ಕಡೆ ಕಲ್ಲುಬಂಡೆಗಳು ಗೋಚರಿಸುತ್ತಿವೆ.
ಬೈಚನಹಳ್ಳಿ ಬಳಿಯ ಪಂಪ್‌ಹೌಸ್‌ನಲ್ಲಿ ನದಿ ನೀರಿನ ಅರಿವು ಸಂಪೂರ್ಣ ಸ್ಥಗಿತಗೊಂಡಿದೆ.

ಕುಶಾಲನಗರ ಜನತೆಗೆ ಕುಡಿಯವ ನೀರಿನ ಸಮಸ್ಯೆ ನೀಗಿಸುವ ಉದ್ದೇಶದಿಂದ ಪ್ರತಿ ವರ್ಷದಂತೆ ಜಲಮಂಡಳಿ ವತಿಯಿಂದ ಕಾವೇರಿ ನದಿಗೆ ಮರಳು ಚೀಲಗಳನ್ನು ಅಡ್ಡಹಾಕಿ ಬಂಡ್ ನಿರ್ಮಿಸಿದ್ದರೂ ಕೂಡ ಈ ಬಾರಿ ಅವಧಿಗೂ ಮುನ್ನವೇ ನದಿಯಲ್ಲಿ ನೀರು ಕ್ಷೀಣಿಸಿದೆ. ಬಿಸಿಲಿನ ತಾಪಮಾನ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಪಟ್ಟಣದ ಜನತೆ ಕುಡಿಯುವ ನೀರಿಗೆ ಹಾಹಾಕಾರ ಪಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

ಕಾವೇರಿ ನದಿಯ ದಂಡೆ ಮೇಲಿರುವ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಏಕೈಕ ಆಸರೆಯಾಗಿರುವ ಕಾವೇರಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಗಣನೀಯವಾಗಿ ಕುಂಠಿತಗೊಳ್ಳುತ್ತಿದೆ. ನದಿಯನ್ನು ಅವಲಂಬಿಸಿಯೇ ಕುಡಿಯುವ ನೀರಿನ ಯೋಜನೆಗಳು ಕಾರ್ಯಗತವಾಗುತ್ತಿರುವುದರಿಂದ ಕಾವೇರಿ ಮೇಲೆ ಹೊರೆ ಮತ್ತಷ್ಟು ಹೆಚ್ಚಿಸಿದೆ. ಇಂತಹ ಸಂದರ್ಭದಲ್ಲಿ ನದಿ ನೀರಿನ ಮಟ್ಟದಲ್ಲಿ ಇಳಿಮುಖವಾಗುತ್ತಿರುವುದು ನದಿದಂಡೆ ಮೇಲಿನ ಗ್ರಾಮಗಳ ಜನತೆಯಲ್ಲಿ ಆತಂಕವನ್ನು ಸೃಷ್ಟಿಸಿದೆ.

ಬೇಸಿಗೆ ಅವಧಿಯಲ್ಲಿ ಕೆರೆಕಟ್ಟೆಗಳಿಗೆ ನೀರು ತುಂಬಿಸಿ ಜಾನುವಾರುಗಳಿಗೆ ನೀರುಣಿಸುತ್ತಿದ್ದ ಹಾರಂಗಿ ಜಲಾಶಯದಲ್ಲಿಯೂ ಕೂಡ ನೀರಿನ ಪ್ರಮಾಣ ಕ್ಷೀಣಗೊಂಡಿದೆ. ಅಲ್ಲದೆ, ನದಿ ಪಾತ್ರದಲ್ಲಿನ ರೈತರು ನದಿಗೆ ಅಕ್ರಮವಾಗಿ ಕಟ್ಟೆ ಕಟ್ಟಿಕೊಂಡು ತಾವು ಕೈಗೊಂಡಿರುವ ಶುಂಠಿ ಕೃಷಿ ಹಾಗೂ ತೋಟಗಳಿಗೆ ಪಂಪ್‌ಸೆಟ್ ಮೂಲಕ ನೀರನ್ನು ಎತ್ತುವುದು ಕುಡಿಯುವ ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣವಾಗುತ್ತಿದೆ.

ಈಗಾಗಲೇ ಬೇಸಿಗೆ ಧಗೆಗೆ ಜನ ಜಾನುವಾರುಗಳು ನೀರಿಗಾಗಿ ಪರಿತಪಿಸುವಂತಹ ಪರಿಸ್ಥಿತಿ ಉಂಟಾಗಿದೆ. ನದಿ ಕೆರೆಕಟ್ಟೆಗಳೂ ನೀರಿಲ್ಲದೆ ಬರಿದಾಗುತ್ತಿವೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿಯೂ ನೀರು ಬತ್ತುತ್ತಿದೆ.

ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಶಾಸಕ ಮಂತರ್ ಗೌಡ ಅಧಿಕಾರಿಗಳ ಸಭೆ ನಡೆಸಿದರು.
ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಶಾಸಕ ಮಂತರ್ ಗೌಡ ಅಧಿಕಾರಿಗಳ ಸಭೆ ನಡೆಸಿದರು.

ಬರಿದಾಗುತ್ತಿವೆ ಕೊಳವೆಬಾವಿಗಳು ಒಣಗಿವೆ ಕೆರೆಕಟ್ಟೆಗಳು ಮಳೆ ಬಾರದೇ ಹೋದರೆ ಕಡು ಕಷ್ಟ

ನಿತ್ಯ 7 ಲಕ್ಷ ಲೀಟರ್ ಕೊರತೆ! ಕುಶಾಲನಗರ ಪಟ್ಟಣ ಮುಳ್ಳುಸೋಗೆ ಹಾಗೂ ಗುಮ್ಮನಕೊಲ್ಲಿ ವ್ಯಾಪ್ತಿಗೆ ಜಲಮಂಡಳಿ ವತಿಯಿಂದ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದ್ದು ಈ ವ್ಯಾಪ್ತಿಯು 35ರಿಂದ 40 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಜನಸಂಖ್ಯೆ ಆಧಾರದ ಮೇಲೆ ಪ್ರತಿನಿತ್ಯ ಸುಮಾರು 45 ಲಕ್ಷ ಲೀಟರ್ ನೀರಿನ ಅಗತ್ಯತೆ ಇದೆ. ಆದರೆ ಈಗ ಕೇವಲ 28 ಲಕ್ಷ ಲೀಟರ್ ನೀರು ನದಿಯಿಂದ ಹಾಗೂ 10 ಲಕ್ಷ ಲೀಟರ್ ಕೊಳವೆ ಬಾವಿಯಿಂದ ಪೂರೈಸಲಾಗುತ್ತಿದೆ. ಸುಮಾರು 7 ಲಕ್ಷ ಲೀಟರ್ ಕೊರತೆ ಇದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳೊಂದಿಗೆ ಶಾಸಕ ಸಭೆ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಶಾಸಕ ಡಾ.ಮಂತರ್‌ಗೌಡ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಲ ಮಂಡಳಿ ಹಾಗೂ ಪುರಸಭೆ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸಿದರು. ಪಟ್ಟಣದ ಜನತೆಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ನದಿಯಲ್ಲಿ ನೀರಿನ‌ ಕೊರತೆ ಹಿನ್ನೆಲೆಯಲ್ಲಿ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಯಿಂದ ನೀರು ಸಂಗ್ರಹಿಸಿ ಜನರಿಗೆ ಪೂರೈಕೆ ಮಾಡಲು ಕ್ರಮ‌ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಈ ವೇಳೆ ಜಲಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎ.ಪ್ರಸನ್ನ ಕುಮಾರ್ ಸಹಾಯಕ ಎಂಜಿನಿಯರ್ ಆನಂದ್ ಪುರಸಭೆ ಎಂಜಿನಿಯರ್ ರಂಗರಾಜ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT