ಸೋಮವಾರಪೇಟೆ: ಮುಂಗಾರಿನ ಮಳೆಯ ಆರ್ಭಟಕ್ಕೆ ಎಲ್ಲೆಡೆ ಕೆರೆಕಟ್ಟೆಗಳು, ನದಿ ತೊರೆಗಳು, ಹೊಳೆಗಳು ಅವಧಿಗೂ ಮುನ್ನ ತುಂಬಿ ಹರಿಯುತ್ತಿದ್ದು, ಅಲ್ಲಲ್ಲಿ ಬರಗಾಲದಿಂದ ಬತ್ತಿ ಹೋಗಿದ್ದ ಜಲದ ಮೂಲಗಳು ಮತ್ತೊಮ್ಮೆ ಚಿಮ್ಮುತ್ತಿವೆ.
ಕಳೆದ ಭಾರಿಗಿಂತಲೂ ದುಪ್ಪಟ್ಟು ಮಳೆಯಯಾಗಿದೆ. ಕಳೆದ ವರ್ಷ ಈವರೆಗೆ 514 ಸೆ.ಮೀ ಮಳೆಯಾದರೆ, ಪ್ರಸಕ್ತ ಸಾಲಿನಲ್ಲಿ 1050 ಸೆ.ಮೀ ಮಳೆಯಾಗಿದೆ. ನಿರಂತರವಾಗಿ ಭಾರಿ ಗಾಳಿಯೊಂದಿಗೆ ಮಳೆ ಸುರಿದ ಪರಿಣಾಮ ಎಲ್ಲೆಡೆ ನೀರಿನ ಹರಿವು ಹೆಚ್ಚಾಗಿದೆ. ಚಿಕ್ಕಪುಟ್ಟ ಬಾವಿ, ಕೆರೆ, ಹೊಳೆ, ಜರಿ ಸೇರಿದಂತೆ ತುಂಬಿ ಹರಿಯುತ್ತಿದ್ದು, ಹಿಂದಿನ ಸಾಲಿನಲ್ಲಾಗಿದ್ದ ನೀರಿನ ಅಭಾವವನ್ನು ತೊಡೆದುಹಾಕಿದೆ.
ಬೇಸಿಗೆ ಸಂದರ್ಭ ಬರಿದಾಗುತ್ತಿದ್ದ ಆನೆಕೆರೆ ಹಾಗೂ ಯಡೂರು ದೇವರ ಕೆರೆಗಳ ಹೂಳೆತ್ತಿಸಿದ ನಂತರ ಕೆರೆಗಳಲ್ಲಿ ಬೇಸಿಗೆಯಲಿ ಒಣಗುವ ಪರಿಸ್ಥಿತಿ ಇದ್ದರೆ, ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ. ಈ ಭಾರಿಯ ಹೆಚ್ಚಿನ ಮಳೆಯಿಂದಾಗಿ ವಾಡಿಕೆಗೂ ಮುನ್ನವೇ ಪಟ್ಟಣದ ಆನೆಕೆರೆ, ಯಡೂರು ದೇವರ ಕೆರೆ, ಚೌಡ್ಲು ಕೆರೆ, ಶಾಂತಳ್ಳಿ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ.
ಈ ಮೂರೂ ಕೆರೆಗಳ ಏರಿಗಳು ರಸ್ತೆಗಳಾಗಿವೆ. ಯಡೂರು ಮತ್ತು ಆನೆಕೆರೆಯ ಏರಿಗಳು ರಾಜ್ಯ ಹೆದ್ದಾರಿಯಾಗಿದ್ದರೆ, ಚೌಡ್ಲು ಗ್ರಾಮದ ಚೌಡ್ಲಯ್ಯ-ಮೂಡ್ಲಯ್ಯ ದೇವಾಲಯದ ಬಳಿಯಿರುವ ಕೆರೆಯ ಏರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಈ ಮೂರೂ ಕೆರೆಗಳು ತುಂಬಿದ್ದು, ರಸ್ತೆಯ ಮೇಲೆ ನೀರು ಹರಿಯುತ್ತಿರುವುದು ವಿಶೇಷವಾಗಿದೆ.
ಶಾಂತಳ್ಳಿ ಕೆರೆ ಊರಿನ ಒಳಗೆ ಇದ್ದು, ಹೆಚ್ಚುವರಿ ನೀರು ಹೊರಗೆ ಹೋಗುತ್ತಿದೆ. ತಾಲ್ಲೂಕಿನ ದೊಡ್ಡಮಳ್ತೆಯ ಹೊನ್ನಮ್ಮನ ಕೆರೆ ಭಾರಿ ಮಳೆಯಿಂದ ತುಂಬಿ ಹರಿಯುತ್ತಿದ್ದು, ಗ್ರಾಮಾಧ್ಯಕ್ಷರಾದ ವಿರೇಶ್, ಕಿರಣ್ ಕುಮಾರ್, ರತನ್, ಲೋಕೇಶ್, ತಿಮ್ಮಯ್ಯ, ಹರ್ಷಿತ್ ಕೆರೆಗೆ ಪೂಜೆ ಸಲ್ಲಿಸಿದರು.
ಬತ್ತಿ ಹೋಗಿದ್ದ ಕೆರೆ, ಬಾವಿ, ಕೊಳವೆಬಾವಿಗಳಲ್ಲಿ ನೀರಿನ ಮರು ಪೂರಣದೊಂದಿಗೆ ಯಥಾಸ್ಥಿತಿಯಲ್ಲಿ ನೀರು ದೊರಕುತ್ತಿರುವುದು ಕೃಷಿಕ ಸಂತೋಷಪಡುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.