ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ | ಅನ್ನದಾತರಿಗೆ ಸಂತಸ ತಂದ ಮಳೆ; ಬಿತ್ತನೆಗೆ ಭರದ ಸಿದ್ಧತೆ

ಜೂನ್ ತಿಂಗಳ ಮೊದಲ ವಾರ ಮುಂಗಾರು ಆರಂಭವಾಗುವ ನಿರೀಕ್ಷೆ
Published 2 ಜೂನ್ 2024, 6:18 IST
Last Updated 2 ಜೂನ್ 2024, 6:18 IST
ಅಕ್ಷರ ಗಾತ್ರ

ಮಡಿಕೇರಿ: ಮಳೆ ಎಂಬುದೇ ಹಾಗೆ. ಸಕಲ ಜೀವರಾಶಿಗೂ ಜೀವ ಸೆಲೆ. ಮಳೆ ಬಾರದಿದ್ದರೆ ಕ್ಷಾಮ, ಡಾಮರಗಳು ಉಂಟಾಗಿ ಮನುಕುಲವೇ ಉಳಿಯುವುದು ದುಸ್ತರವಾಗುತ್ತದೆ. ಈ ವರ್ಷದ ಜನವರಿಯಿಂದ ಏಪ್ರಿಲ್‌ ಅಂತ್ಯದವರೆಗೂ ಇಂತಹದ್ದೊಂದು ಪರಿಸ್ಥಿತಿ ಉಂಟಾಗಬಹುದಾದ ಆತಂಕ ವಿಶೇಷವಾಗಿ ಅನ್ನದಾತರಲ್ಲಿ ಉಂಟಾಗಿತ್ತು. ಆದರೆ, ಮೇ ತಿಂಗಳನಿನಲ್ಲಿ ಸುರಿದ ಮಳೆ ಇಂತಹದ್ದೊಂದು ಆತಂಕವನ್ನು ನಿವಾರಿಸಿತು. ರೈತರು ನಿರಾಳರಾದರು.

ಗುಡುಗು, ಸಿಡಿಲುಗಳ ಅಬ್ಬರ, ಒಮ್ಮಿಂದೊಮ್ಮೆ ಹೆಚ್ಚು ಸುರಿಯುತ್ತಿದ್ದ ಮಳೆ, ಅಲ್ಲೊಂದು, ಇಲ್ಲೊಂದು ಮನೆಗೆ ನುಗ್ಗುತ್ತಿದ್ದ ನೀರು ಕೆಲಕಾಲ ಆತಂಕ ಹುಟ್ಟಿಸಿತಾದರೂ, ಸುರಿಯುವ ಮಳೆಯನ್ನು ಯಾರೂ ಬೇಡ ಅನ್ನಲಿಲ್ಲ. ಮಳೆ ಹನಿಗಾಗಿ ಚಾತಕ ಪಕ್ಷಿಯಂತೆ ಕಾದ ಧಾರಿಣಿ ಮಳೆಯನ್ನು ತುಂಬು ಮನಸ್ಸಿನಿಂದ ಬರಮಾಡಿಕೊಂಡಿತು. ಹಿಂದೆಂದೂ ಕಂಡರಿಯದಂತಹ ಬಿರುಬೇಸಿಗೆ ತಾಪ ಹೇಳ ಹೆಸರಿಲ್ಲದ ಹಾಗೆ ಮಂಗಮಾಯವಾಯಿತು.

ಇಂತಹದ್ದೊಂದು ವರ್ಷಧಾರೆ ಕೃಷಿಕರಲ್ಲಿ ನಿರೀಕ್ಷೆಗಳನ್ನು ಗರಿಗೆದರಿಸಿತು. ಮಳೆ ತುಸು ಬಿಡುವು ನೀಡುತ್ತಿದ್ದಂತೆ ಭೂಮಿಯನ್ನು ಉಳುಮೆ ಮಾಡಿ ಹಸನು ಮಾಡಿಕೊಳ್ಳುವತ್ತ ಹೆಚ್ಚಿನವರು ಗಮನ ಹರಿಸಿದರು.

ವಿಶೇಷವಾಗಿ, ಕುಶಾಲನಗರ, ಸೋಮವಾರಪೇಟೆಯ ಕೆಲವು ಭಾಗ, ಶನಿವಾರಸಂತೆ, ಕೊಡ್ಲಿಪೇಟೆ ಭಾಗಗಳಲ್ಲಿ ರೈತರು ತಮ್ಮ ಹೊಲಗಳನ್ನು ಉಳುಮೆ ಮಾಡಿ, ಮುಂಗಾರುಪೂರ್ವದ ಬಿತ್ತನೆಗಾಗಿ ಸಿದ್ಧತೆ ನಡೆಸಿದರು. ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುವ ನಿರೀಕ್ಷೆ ಇದೆ ಎಂಬ ಹವಾಮಾನ ಮುನ್ಸೂಚನೆ ಕೇಳಿ ಭತ್ತದ ಬೆಳೆಯುವ ರೈತರೂ ಖುಷಿಯಾಗಿದ್ದಾರೆ.

ಈ ವೇಳೆ ಕೊಡಗು ಜಿಲ್ಲೆಯಲ್ಲಿ ಭತ್ತ ಮತ್ತು ಮುಸುಕಿನ ಜೋಳ ಪ್ರಮುಖ ಬೆಳೆಯಾಗಿದ್ದು, ಕೃಷಿ ಚಟುವಟಿಕೆಗೆ ಭೂಮಿ ಹದ ಮಾಡುವ ಕಾರ್ಯ ನಡೆದಿದೆ. ಮಳೆ ಮುಂದುವರಿದಿದ್ದೇ ಆದಲ್ಲಿ ಜೂನ್ 15ರ ನಂತರ ಭತ್ತದ ಸಸಿಮಡಿ ಕಾರ್ಯ ಆರಂಭವಾಗಲಿದೆ. ಹಾಗೆಯೇ, ಮುಂಗಾರು ಪೂರ್ವದ ಅಂತ್ಯದಲ್ಲಿ ಮುಸುಕಿನ ಜೋಳ ಬಿತ್ತನೆ ಕಾರ್ಯ ಶುರುವಾಗಲಿದೆ.

ಜಿಲ್ಲೆಯಲ್ಲಿ ಜನವರಿಯಿಂದ ಮೇ ತಿಂಗಳ ಅಂತ್ಯಕ್ಕೆ ವಾಡಿಕೆ ಮಳೆ 25 ಸೆಂಟಿಮೀಟರ್ ಆಗಿದ್ದು, ಈಗಾಗಲೇ ಈ ಬಾರಿ ಸರಾಸರಿ 24 ಸೆಂಟಿಮೀಟರ್ ಮಳೆ ಸುರಿದಿರುವುದು ವಿಶೇಷವಾಗಿದೆ. ಅದರಲ್ಲೂ ಮೇ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದೆ.

ಜಿಲ್ಲೆಯಲ್ಲಿ 32,500 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವ ಗುರಿ ಇದ್ದು, ಇದರಲ್ಲಿ 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. 3,500 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆ. ಹಾಗೆಯೇ, 70 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯುವ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೋಮಸುಂದರ ಅವರು ತಿಳಿಸಿದರು.

ಈಗಾಗಲೇ ಮುಂಗಾರಿಗೆ ಅವಶ್ಯವಿರುವ ಸುಮಾರು 1,871 ಕ್ವಿಂಟಾಲ್‍ನಷ್ಟು ಭತ್ತ ಬಿತ್ತನೆ ಬೀಜವನ್ನು ಹಾಗೂ 41 ಕ್ವಿಂಟಾಲ್ ಮುಸುಕಿನ ಜೋಳ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಮುಂಗಾರಿಗೆ ಬೇಕಿರುವ ಸುಮಾರು 80,946 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, ಈಗಾಗಲೇ 35,774 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಕೃಷಿಕರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕುಶಾಲನಗರ ತಾಲ್ಲೂಕಿನಲ್ಲಿ ಸುರಿದ ಮಳೆಯ ನಂತರ ಹೊಲವನ್ನು ಉಳುಮೆ ಮಾಡುತ್ತಿದ್ದ ದೃಶ್ಯ ಮಂಗಳವಾರ ಕಂಡು ಬಂತು
ಕುಶಾಲನಗರ ತಾಲ್ಲೂಕಿನಲ್ಲಿ ಸುರಿದ ಮಳೆಯ ನಂತರ ಹೊಲವನ್ನು ಉಳುಮೆ ಮಾಡುತ್ತಿದ್ದ ದೃಶ್ಯ ಮಂಗಳವಾರ ಕಂಡು ಬಂತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT