ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹವಾಮಾನ ಏರುಪೇರು: ಕೊಡಗಿನಲ್ಲಿ ಬೇಸಿಗೆಯ ಧಗೆ!

Published 16 ಆಗಸ್ಟ್ 2024, 4:35 IST
Last Updated 16 ಆಗಸ್ಟ್ 2024, 4:35 IST
ಅಕ್ಷರ ಗಾತ್ರ

ಮಡಿಕೇರಿ: ಜುಲೈ ಪೂರ್ತಿ ಮುಂಗಾರು ಮಳೆ ಸುರಿದ ನಂತರ ಆಗಸ್ಟ್‌ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಉಷ್ಣಾಂಶ ನಿರಂತರವಾಗಿ ಹೆಚ್ಚುತ್ತಿದೆ.

ಆಗಸ್ಟ್‌ನಲ್ಲಿ ಮಡಿಕೇರಿ ನಗರದಲ್ಲಿ ಸದಾ ಮಂಜು ಮುಸುಕುತ್ತಾ, ಚಳಿಯ ವಾತಾವರಣವಿರುತ್ತಿತ್ತು. ಜನ ಬೆಚ್ಚನೆಯ ಉಡುಪುಗಳಿಗೆ ಮೊರೆ ಹೋಗುತ್ತಿದ್ದರು. ಆದರೆ, ಕೆಲವು ದಿನಗಳಿಂದ ಫ್ಯಾನ್ ಬಳಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ‘ಇಷ್ಟೊಂದು ಧಗೆ ಮುಂಗಾರಿನ ಅವಧಿಯಲ್ಲಿ ಹಿಂದೆಂದೂ ಕಾಣಿಸಿಕೊಂಡಿರಲಿಲ್ಲ’ ಎಂದು ಹಿರಿಯರು ಹೇಳುತ್ತಾರೆ.

ಪಶ್ಚಿಮಘಟ್ಟಗಳ ಶ್ರೇಣಿಯಲ್ಲಿರುವ ನಾಪೋಕ್ಲು ಹೋಬಳಿಯಲ್ಲೂ ತಂಪು ಹವೆ ಇಲ್ಲ. ಗೋಣಿಕೊಪ್ಪಲು, ಕುಶಾಲನಗರ ವ್ಯಾಪ್ತಿಯಲ್ಲಂತೂ ಸೆಕೆ ವಿಪರೀತವಾಗಿದೆ.

ಜೊತೆಗೆ, ಜಿಲ್ಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಇದ್ದಕ್ಕಿದ್ದಂತೆ ಭಾರಿ ಮಳೆ ಸುರಿಯುತ್ತಿದ್ದು, ಆತಂಕವನ್ನು ತಂದೊಡ್ಡಿದೆ. ಮಂಗಳವಾರ ಸಂಜೆ ಮುಕ್ಕೋಡ್ಲು ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಯಿಂದ ಹಾರಂಗಿ ಜಲಾಶಯಕ್ಕೆ ಒಳ ಹರಿವು 10 ಸಾವಿರ ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಅಂದು ರಾತ್ರಿ ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ 15 ಸೆಂ.ಮೀನಷ್ಟು ಭಾರಿ ಮಳೆ ಸುರಿದಿತ್ತು. 2018ರಲ್ಲೂ ಹಾಗೇ ಆಗಿತ್ತು ಎಂದು ಕೆಲವರು ಆತಂಕ ವ್ಯಕ್ತಪಡಿಸುತ್ತಾರೆ.

ಭಾರತೀಯ ಹವಾಮಾನ ಇಲಾಖೆಯ ಅಂಕಿಅಂಶದಂತೆ ಮಡಿಕೇರಿ ನಗರದಲ್ಲಿ ಬುಧವಾರ 31.1 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ತಾಪಮಾನ ದಾಖಲಾಗಿತ್ತು. ಖಾಸಗಿ ಹವಾಮಾನ ಸಂಸ್ಥೆ ‘ಆಕ್ಯೂವೆದರ್‌’ನ ಅಂಕಿಅಂಶದಂತೆ 32 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ತಾಪಮಾನ ದಾಖಲಾಗಿತ್ತು.

‘ಅರಬ್ಬಿ ಸಮುದ್ರದಲ್ಲಿ ಒಣಹವೆ ಇರುವುದರಿಂದ ಕೊಡಗಿನಲ್ಲೂ ಒಣಹವೆ ಇದೆ. ಇದರಿಂದ ತಾಪಮಾನ ಏರಿಕೆಯಾಗಿ ಸೆಕೆ ಹೆಚ್ಚಾಗಿದೆ. ಕೆಲವೆಡೆ ಮಾತ್ರ ಭಾರಿ ಮಳೆ ಬೀಳುತ್ತಿದೆ’ ಎಂದು ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT