ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಹಾಕಿಗೆ ಇದೆ 139 ವರ್ಷಗಳ ಇತಿಹಾಸ!

1997ರ ಬಳಿಕ ವಿಶ್ವದಲ್ಲೆ ಜನಪ್ರಿಯವಾಗಿದೆ ಕೊಡಗಿನ ಹಾಕಿ
Published 28 ಮಾರ್ಚ್ 2024, 4:30 IST
Last Updated 28 ಮಾರ್ಚ್ 2024, 4:30 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡಗಿನಲ್ಲಿ ಕಾಫಿ ಹೇಗೆ ಜನಜನಿತವೋ ಹಾಗೆಯೇ ಜಿಲ್ಲೆಯ ಕ್ರೀಡೆಯಲ್ಲಿ ಹಾಕಿ ಕೂಡ ಜನಪ್ರಿಯ. ಇಲ್ಲಿಗೆ ಈ ಕ್ರೀಡೆ ಬಂದಿದ್ದು ನೆನ್ನೆ, ಮೊನ್ನೆಯಲ್ಲ. ಬರೋಬರಿ 139 ವರ್ಷಗಳಿಗೂ ಅಧಿಕ ಇತಿಹಾಸ ಕೊಡಗಿನಲ್ಲಿದೆ.

ಪ್ರಪಂಚದಲ್ಲಿ ಹಾಕಿ ಇತಿಹಾಸವನ್ನು ಒಮ್ಮೆ ಕೆದಕಿದರೆ ಚರಿತ್ರೆಯ ಪುಟಗಳು ಕ್ರಿಸ್ತಪೂರ್ವದಷ್ಟು ಪ್ರಾಚೀನ ಕಾಲಕ್ಕೆ ತೆರೆದುಕೊಳ್ಳುತ್ತವೆ. ಈಜಿಪ್ಟ್‌ನ ನಾಗರಿಕತೆಯಲ್ಲಿ ಸುಮಾರು 4 ಸಾವಿರ ವರ್ಷಗಳಿಗೂ ಹಿಂದೆ ಹಾಕಿಯ ಬೇರು ಇದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಹಾಗೆಯೇ, ಇದರ ಬೇರುಗಳು ಇಥಿಯೋಪಿಯಾ ಸೇರಿದಂತೆ ಹಲವು ನಾಗರಿಕತೆಗಳಲ್ಲೂ ಅಡಗಿದೆ.

ಇಂತಹ ಪ್ರಾಚೀನ ಕ್ರೀಡೆಯನ್ನು 1861ರಲ್ಲಿ ಯುರೋಪಿನಲ್ಲಿ ಪ್ರಾರಂಭವಾದ ಹಾಕಿಯನ್ನು ಬ್ರಿಟಿಷರು ಆರಂಭದಲ್ಲಿ ಕೊಲ್ಕತ್ತಾ, ಪಂಜಾಬ್, ಮುಂಬೈಗಳಲ್ಲಿ ಪರಿಚಯಿಸಿದರು. ಆದರೆ, ಕೊಡಗು ಮತ್ತು ಪಂಜಾಬಿನಲ್ಲಿ ಹಾಕಿ ಜನಪ್ರಿಯವಾಯಿತು. 1885- 86ರ ಹೊತ್ತಿಗೆ ಮಡಿಕೇರಿಗೆ ಹಾಕಿ ಕಾಲಿಟ್ಟಿತು. ಕೊಡವರು ಇಲ್ಲಿ ಹಾಕಿಯನ್ನು ಜನಪ್ರಿಯಗೊಳಿಸಿದರು. 1997ರಲ್ಲಿ ಕೊಡಗಿನಲ್ಲಿ ಕೌಟುಂಬಿಕ ಹಾಕಿ ಉತ್ಸವ ಪ್ರಾರಂಭಗೊಂಡ ಬಳಿಕ 23 ವರ್ಷಗಳಲ್ಲಿ ಹಾಕಿ ಅತ್ಯಂತ ಜನಪ್ರಿಯ ಕ್ರೀಡೆ ಆಗಿದೆ.

ಭಾರತೀಯ ಹಾಕಿ ತಂಡದಲ್ಲಿ ಕೊಡಗಿನ ಹಲವು ರತ್ನಗಳು ಪ್ರಕಾಶಿಸಿವೆ. ದೇಶದ ಪರ ಹಾಕಿ ಆಟವಾಡಿದ ಕೊಡಗಿನ ಮೊದಲ ಆಟಗಾರ ಮಾಳೆಯಂಡ ಮುತ್ತಪ್ಪ, ಪೈಕೇರ ಕಾಳಯ್ಯ ಅಂಜಪರವಂಡ ಸುಬ್ಬಯ್ಯ, ಭಾರತ ತಂಡದ ಯಶಸ್ವಿ ನಾಯಕ ಗೋವಿಂದ, ಮನೆಯಪಂಡ ಸೋಮಯ್ಯಮೊಳ್ಳೆರ ಗಣೇಶ್, ಅರ್ಜುನ್ ಹಾಲಪ್ಪ, ಒಲಂಪಿಯನ್ ಚೆಪ್ಪುಡಿರ ಪೂಣಚ್ಚ, ರಘುನಾಥ್, ಸುನಿಲ್ ಹೀಗೆ ಕೊಡಗಿನ ಪ್ರತಿಭೆಗಳು ಹಲವು. ಭಾರತ ಹಾಕಿ ತಂಡ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಲು ಇಂತಹ ಹಾಕಿ ಕಲಿಗಳು ಕಾರಣ ಎಂಬುದನ್ನು ಯಾರು ಅಲ್ಲಗಳೆಯುವಂತಿಲ್ಲ.

ಇಂತಹ ಹಾಕಿ ಆಟದ ರಸದೌತಣ ನಾಲ್ಕುನಾಡಿನ ಹಾಕಿ ಪ್ರೇಮಿಗಳಿಗೆ ಸಿಗುತ್ತಿದೆ. ಕುಂಡ್ಯೋಳಂಡ ಕುಟುಂಬಸ್ಥರು 24ನೇ ಕೌಟುಂಬಿಕ ಹಾಕಿ ಟೂರ್ನಿಯನ್ನು ಆಯೋಜಿಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಸ್ಟಿಕ್ ಹಿಡಿದು ಕೊಡವ ಆಟಗಾರರು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣಕ್ಕೆ ಇಳಿದರೆ ಸುತ್ತಲೂ ನಿರ್ಮಿಸಿರುವ ಗ್ಯಾಲರಿಯಲ್ಲಿ ಕುಳಿತು ಕ್ರೀಡಾಪಟುಗಳನ್ನು ಹುರಿದುಂಬಿಸಲು ಹಾಕಿ ಪ್ರೇಮಿಗಳು ಕ್ರೀಡಾಂಗಣದತ್ತ ದೌಡಾಯಿಸಲಿದ್ದಾರೆ.

4 ಸಾವಿರ ವರ್ಷಗಳಿಗೂ ಹಿಂದೆ ಇದೆ ಹಾಕಿ ಕ್ರೀಡೆಯ ಬೇರುಗಳು 1997ರಲ್ಲಿ ಕೊಡಗಿನಲ್ಲಿ ಕೌಟುಂಬಿಕ ಹಾಕಿ ಉತ್ಸವ ಪ್ರಾರಂಭ 23 ವರ್ಷಗಳಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆಹಾಕಿ 

ಹಾಕಿಯ ನಡುವೆ ನಡೆಯಲಿದೆ ಕೌಟುಂಬಿಕ ಹಗ್ಗ ಜಗ್ಗಾಟ ಸ್ಪರ್ಧೆ

ಕೊಡವ ಕುಟುಂಬಗಳ ನಡುವಿನ ಬೊಟ್ಟೋಳಂಡ ಕಪ್ ಹಗ್ಗ ಜಗ್ಗಾಟ -2024ರ ಸ್ಪರ್ಧೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದು ಕೊಡವ ಕುಟುಂಬಗಳು ಪಾಲ್ಗೊಳ್ಳಲಿವೆ. ಏಪ್ರಿಲ್ 18ರಿಂದ 21ರವರೆಗೆ ಆಯೋಜಿಸಲಾಗಿದ್ದು ಮಹಿಳಾ ಮತ್ತು ಪುರುಷರ ತಂಡಗಳು ಪಾಲ್ಗೊಳ್ಳಲಿವೆ. 2022ರಲ್ಲಿ ಕಕ್ಕಬೆಯಲ್ಲಿ ಪೊನ್ನೋಲತಂಡ ಕುಟುಂಬಸ್ಥರು ಮೊದಲ ವರ್ಷದ ಹಗ್ಗ ಜಗ್ಗಾಟ ಸ್ಪರ್ಧೆಯನ್ನು 2023ರಲ್ಲಿ ಟಿ.ಶೆಟ್ಟಿಗೇರಿಯ ಚೆಟ್ಟಂಡ ಕುಟುಂಬಸ್ಥರು 2ನೇ ವರ್ಷದ ಸ್ಪರ್ಧೆಯನ್ನು ಆಯೋಜಿಸಿದ್ದು ಇದೀಗ 3ನೇ ವರ್ಷದ ಹಗ್ಗ ಜಗ್ಗಾಟ ಸ್ಪರ್ಧೆಗೆ ಸಕಲ ಸಿದ್ಧತೆಗಳನ್ನು ಬೊಟ್ಟೋಳಂಡ ಕುಟುಂಬ ಮಾಡಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT