ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಚೇಲಾವರ ಈಗ ನಯನ ಮನೋಹರ

Last Updated 13 ಜುಲೈ 2020, 15:07 IST
ಅಕ್ಷರ ಗಾತ್ರ

ನಾಪೋಕ್ಲು: ಇಲ್ಲಿಗೆ ಸಮೀಪದ ಚೇಲಾವರ ಗ್ರಾಮದಲ್ಲಿರುವ ರಮಣೀಯ ಜಲಪಾತದಿಂದಾಗಿ ಗ್ರಾಮದ ಹೆಸರು ಕೊಡಗಿನ ಪ್ರವಾಸಿ ನಕ್ಷೆಯಲ್ಲಿ ಹೆಸರು ಮಾಡಿದೆ. ಇದೀಗ ಮಳೆ ಸುರಿದಿರುವುದರಿಂದ ಬೆಳ್ನೊರೆಯಿಂದ ಜಲಪಾತ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದೆ.

ನಯನ ಮನೋಹರವಾಗಿ ಕಂಗೊಳಿಸುತ್ತಿರುವುದರಿಂದ ಜಲಪಾತದ ಸೌಂದರ್ಯ ಸವಿಯಲು ಪ್ರವಾಸಿಗರೇ ಬರುತ್ತಿಲ್ಲ. ಕೊರೊನಾ ಸೋಂಕಿನ ನಿರ್ಬಂಧ ಜಲಪಾತದ ವೀಕ್ಷಣೆಗೆ ಅಡ್ಡಿಯಾಗಿದ್ದರೆ, ಮತ್ತೊಂದೆಡೆ ಈ ಹಿಂದೆ ಜಲಪಾತದ ವೀಕ್ಷಣೆಗೆ ಬಂದು ಜೀವ ಕಳೆದುಕೊಂಡ ಯುವಜನರಿಂದಾಗಿ ಜಲಪಾತದ ಸಮೀಪಕ್ಕೆ ತೆರಳದಂತೆ ಬಂದೋಬಸ್ತ್‌ ಮಾಡಲಾಗಿದೆ. ಮಾನವ ಹಸ್ತಕ್ಷೇಪವಿಲ್ಲದ ಜಲಪಾತ ಇದೀಗ ನಿಸರ್ಗ ಸೌಂದರ್ಯದಿಂದ ನಿರ್ಮಲವಾಗಿ ಕಂಗೊಳಿಸುತ್ತಿದೆ.

ಮಳೆಗಾಲವಿರಲಿ, ಬೇಸಿಗೆಯಿರಲಿ, ಅಧಿಕ ಸಂಖ್ಯೆಯ ಪ್ರವಾಸಿಗರು ಚೇಲಾವರ ಜಲಪಾತದ ಸೌಂದರ್ಯ ವೀಕ್ಷಿಸಲು ಬರುತ್ತಿದ್ದರು. ವಾಹನ ನಿಲುಗಡೆ ಸ್ಥಳದಿಂದ ಜಲಪಾತದ ಸನಿಹದವರೆಗೂ ಕಲ್ಲುಗಳಿಂದ ಕೂಡಿದ ಕಿರಿದಾದ ರಸ್ತೆಯಲ್ಲಿ ಪ್ರವಾಸಿಗರು ಸಾಗಿ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದರು. ಜಲಪಾತದಲ್ಲಿ ಈಜಲು ಹೋಗಿ ಸುಳಿಯಲ್ಲಿ ಸಿಲುಕಿ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ನರಿಯಂದಡ ಗ್ರಾಮಪಂಚಾಯಿತಿ ವ್ಯಾಪ್ತಿಯ ಏಳು ಗ್ರಾಮಗಳ ಪೈಕಿ ಚೇಲಾವರವೂ ಒಂದು. ಸೊಗಸಾದ ಜಲಪಾತದ ಸೌಂದರ್ಯವನ್ನು ಮಳೆಗಾಲದಲ್ಲಿ ವೀಕ್ಷಿಸಲು ಅಧಿಕ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದರು. ಇದರೊಂದಿಗೆ ಜಲಪಾತದ ಸಮೀಪದ ಕೆಲವೊಂದು ಹೋಂಸ್ಟೇಗಳಲ್ಲಿ ಪ್ರವಾಸಿಗರು ತಂಗಿದ್ದು, ರಮಣೀಯ ತಾಣಗಳ ವೀಕ್ಷಣೆ ಮಾಡುತ್ತಿದ್ದರು. ಜಲಪಾತ ವೀಕ್ಷಣೆಯ ಹೆಸರಿನಲ್ಲಿ ಗ್ರಾಮಕ್ಕೆ ಬರುವ ಪ್ರವಾಸಿಗರಿಂದ ಇಲ್ಲಿನ ಪ್ರಶಾಂತತೆಗೆ ಧಕ್ಕೆಯುಂಟಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದರು. ಕಳೆದ ವರ್ಷದಿಂದ ಪ್ರವಾಸಿಗರು ಜಲಪಾತದ ಸನಿಹಕ್ಕೆ ತೆರಳುವುದನ್ನು ತಪ್ಪಿಸಲು ತಂತಿಬೇಲಿ ಹಾಕಲಾಗಿದೆ. ಈಗ ದೂರದಿಂದಲೇ ಜಲಪಾತವನ್ನು ವೀಕ್ಷಿಸಬೇಕಾಗಿದೆ.

ಚೇಲಾವರಕ್ಕೆ ಬರುವ ಪ್ರವಾಸಿಗರಿಂದ ಈ ಹಿಂದೆ ಗ್ರಾಮಪಂಚಾಯಿತಿ ಶುಲ್ಕ ವಸೂಲಿ ಮಾಡುತ್ತಿತ್ತು. ಇದರಿಂದ ಗ್ರಾಮಪಂಚಾಯಿತಿಗೆ ಉತ್ತಮ ಆದಾಯ ಲಭಿಸುತ್ತಿತ್ತು. ಇದೀಗ ಶುಲ್ಕ ವಸೂಲಾತಿ ನಿಂತಿದೆ. ಪ್ರವಾಸಿಗರೂ ಜಲಪಾತ ವೀಕ್ಷಣೆಯಿಂದ ದೂರ ಉಳಿದಿದ್ದಾರೆ. ನಿರ್ಮಲ ಜಲಪಾತ ಮಾತ್ರ ಬಂಡೆಗಲ್ಲುಗಳ ಮೇಲೆ ಭೋರ್ಗರೆದು ಧುಮ್ಮಿಕ್ಕುತ್ತಾ ಹರಿದು ಸಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT