ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಜಾತಿನಿಂದನೆ ಕಾಯ್ದೆ ದುರ್ಬಳಕೆಯಾಗದಿರಲಿ’

ಕೊಡಗು ಬೆಳೆಗಾರ ಒಕ್ಕೂಟ ಒತ್ತಾಯ
Published 21 ಫೆಬ್ರುವರಿ 2024, 4:17 IST
Last Updated 21 ಫೆಬ್ರುವರಿ 2024, 4:17 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ಜಿಲ್ಲೆಯಲ್ಲಿ ಬೆಳೆಗಾರರು ಮತ್ತು ಕಾರ್ಮಿಕರ ನಡುವೆ ಉತ್ತಮ ಬಾಂಧವ್ಯವಿದ್ದು ಇದನ್ನು ಕೆಡಿಸಲು ಕೆಲವು ಮಧ್ಯವರ್ತಿಗಳು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಕಾರ್ಮಿಕರು ಕಿವಿಗೊಡಬಾರದು’ ಎಂದು ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೆ.ಎಂ. ಕುಶಾಲಪ್ಪ ಹೇಳಿದರು.

ಶ್ರೀಮಂಗಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ತೋಟಗಳಲ್ಲಿ ಹೊರ ರಾಜ್ಯದ, ಹೊರ ಜಿಲ್ಲೆಯ ಹಾಗೂ ಸ್ಥಳೀಯ ಕಾರ್ಮಿಕರು ನೆಲೆಸಿ ತೋಟದ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಕೆಲವರನ್ನು ಪ್ರಚೋದಿಸಿ ಬೆಳೆಗಾರರ ಮೇಲೆ ಎತ್ತಿ ಕಟ್ಟುತ್ತಿದ್ದಾರೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಗಣಿಗಾರಿಕೆ, ಹೋಟೆಲ್ ಉದ್ಯಮ, ಕಟ್ಟಡ ಕೆಲಸ, ಪ್ರವಾಸೋದ್ಯಮ, ಆಟೋಮೊಬೈಲ್, ರಸ್ತೆ ಕಾಮಗಾರಿಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವಂತೆ ಕಾಫಿ ಪ್ಲಾಂಟೇಶನ್ ಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ, ಕಾಫಿ ಬೆಳೆಗಾರರನ್ನು ಗುರಿಯಾಗಿಸಿಕೊಂಡು ಕಾರ್ಮಿಕರನ್ನು ಪ್ರಚೋದಿಸುವ ಕೆಲಸ ಒಳ್ಳೆಯದಲ್ಲ. ಜೀತ ವಿಮುಕ್ತ ಮತ್ತು ಜಾತಿ ನಿಂದನೆ ಕಾಯ್ದೆ ಹಿಂದಿನಿಂದಲೂ ವ್ಯಾಪಕವಾಗಿ ದುರುಪಯೋಗವಾಗುತ್ತಿದೆ. ಈ ಕಾನೂನುಗಳನ್ನು ದುರ್ಬಳಕೆ ಪಡಿಸಿಕೊಳ್ಳದಂತೆ ಪೊಲೀಸ್ ಇಲಾಖೆ ವಿಶೇಷ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

‘ಹಲವು ದಶಕಗಳಿಂದ ಬೆಳೆಗಾರರು ವಿವಿಧ ಸಮಸ್ಯೆ ಎದುರಿಸುತ್ತಿದ್ದು, ಇದೀಗ ಮಾರುಕಟ್ಟೆ ಚೇತರಿಕೆ ಕಂಡಿರುವ ಸಮಯದಲ್ಲಿ ಬೆಳೆಗಾರರನ್ನು ಸುಲಿಗೆ ಮಾಡುವ ಪ್ರಯತ್ನ ಕೆಲವರಿಂದ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ಕಾರ್ಮಿಕರಿಗೆ ತೋಟದ ಲೈನ್ ಮನೆಗಳಲ್ಲಿ ಮೂಲ ಸೌಕರ್ಯಗಳೊಂದಿಗೆ ಆಶ್ರಯ ನೀಡಿ ಕೆಲಸ ಕೊಡುವುದೇ ತಪ್ಪು ಎಂದು ಪ್ರತಿಪಾದಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಇತರ ಉದ್ಯಮಗಳಲ್ಲಿ ಶೆಡ್ ಹಾಕಿ ಮೂಲ ಸೌಕರ್ಯ ಇಲ್ಲದೇ ಕೆಲಸ ಮಾಡಿಸುತ್ತಾರೆ. ಆದರೆ ಲೈನ್ ಮನೆಗಳಿಂದ ಕಾರ್ಮಿಕರನ್ನು ಬಿಡುಗಡೆಗೊಳಿಸಿ ಎಂದು ಒತ್ತಡ ಹೇರುತ್ತಿರುವುದು, ಕಾಫಿ ಬೆಳೆಗಾರರನ್ನು ಬೆದರಿಸಿ ಪ್ರಕರಣ ಜೀತ ಎಂಬ ಹೆಸರಿನಲ್ಲಿ ಅವರ ಮೇಲೆ ಪ್ರಕರಣ ದಾಖಲಿಸುತ್ತಿರುವುದು ಖಂಡನೀಯ’ ಎಂದು ಬೇಸರ ವ್ಯಕ್ತಪಡಿಸಿದರು.

ಬೆಳೆಗಾರ ಒಕ್ಕೂಟದ ಸ್ಥಾಪಕ ಸದಸ್ಯ ಎಂ.ಕೆ.ಮುತ್ತಪ್ಪ, ಕಾರ್ಯದರ್ಶಿ ಹರೀಶ್ ಮಾದಪ್ಪ, ಖಜಾಂಚಿ ಎಂ.ಎನ್. ವಿಜಯ, ನಿರ್ದೇಶಕ ಮುತ್ತಣ್ಣ, ವಿಶ್ವನಾಥ್, ವೇದಿತ್ ಮುತ್ತಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT