ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಅಣಿಯಾದ ಕೊಡಗು ಜಿಲ್ಲಾಡಳಿತ

542 ಮತಗಟ್ಟೆಗಳಲ್ಲಿ 4,52,642 ಮತದಾರರು, 14 ಚೆಕ್‌ಪೋಸ್ಟ್‌ಗಳ ರಚನೆ, ನೀತಿಸಂಹಿತೆ ಜಾರಿ
Last Updated 30 ಮಾರ್ಚ್ 2023, 5:49 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ 542 ಮತಗಟ್ಟೆಗಳಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಕೊಡಗು ಜಿಲ್ಲಾಡಳಿತ ಅಣಿಯಾಗಿದೆ.

ಚುನಾವಣಾ ಆಯೋಗದಿಂದ ಚುನಾವಣಾ ದಿನಾಂಕದ ಘೋಷಣೆಯಾಗುತ್ತಿದ್ದಂತೆ ಈ ಮೊದಲೇ ಪೂರ್ವಸಿದ್ಧತೆ ನಡೆಸಿದ್ದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಅಧಿಕಾರಿಗಳ ಸಭೆ ಕರೆದು ಸುದೀರ್ಘವಾದ ಸಮಾಲೋಚನೆ ನಡೆಸಿದರು.

ಈಗಾಗಲೇ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಶೇಖ್ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಿರುವ ಅವರು, ಅವರೊಂದಿಗೆ 44 ಅಧಿಕಾರಿಗಳನ್ನು ಸೆಕ್ಟರ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಕಣ್ಗಾವಲು ತಂಡದ ಅಧಿಕಾರಿಗಳನ್ನಾಗಿ ನೇಮಕ ಮಾಡಿದರು.

ನಂತರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಅವರಿಂದಲೂ ಸಲಹೆಗಳನ್ನು ಪಡೆದು, ಚುನಾವಣಾ ಆಯೋಗದ ನಿರ್ದೇಶನಗಳನ್ನು ವಿವರಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ‘ಮಾದರಿ ನೀತಿಸಂಹಿತೆಯನ್ನು ಕೊಡಗು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಲಾಗಿದ್ದು, ಎಲ್ಲರೂ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಸರ್ಕಾರದ ಆಸ್ತಿಯಲ್ಲಿ ಸುಮಾರು 60 ಸರ್ಕಾರಿ ಜಾಹೀರಾತಿನ ಹೋಲ್ಟಿಂಗ್ಸ್‌ಗಳಿದ್ದು, ಅವುಗಳನ್ನೂ ಸೇರಿದಂತೆ ಎಲ್ಲೆಡೆ ಇರುವ ಸರ್ಕಾರಿ ಜಾಹೀರಾತುಗಳನ್ನು ಕೂಡಲೇ ತೆಗೆದು ಹಾಕಲಾಗುವುದು ಎಂದರು.

ಜಿಲ್ಲೆಯಲ್ಲಿರುವ ಎಲ್ಲ ಹಾಡಿಗಳಿಗೂ ಭೇಟಿ ನೀಡಿ 1,002 ಆದಿವಾಸಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. 10 ಮತಗಟ್ಟೆಗಳಲ್ಲಿ ಕೆಲವೊಂದು ಮೂಲಸೌಕರ್ಯಗಳ ಕೊರತೆ ಇತ್ತು. ಅವುಗಳಲ್ಲಿ 8 ಮತಗಟ್ಟೆಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ಶೀಘ್ರದಲ್ಲಿ ಇನ್ನುಳಿದ 2 ಮತಗಟ್ಟೆಗಳಿಗೂ ಮೂಲಸೌಕರ್ಯ ಒದಗಿಸಲಾಗುವುದು. ಬಳಿಕ, ಹೆಚ್ಚುವರಿ ಸೌಕರ್ಯಗಳನ್ನು ಒದಗಿಸುವ ಕಡೆಗೆ ಗಮನ ಹರಿಸಲಾಗುವುದು ಎಂದು ಹೇಳಿದರು.

ಮತದಾರರು ಮಕ್ಕಳನ್ನು ಕರೆದುಕೊಂಡು ಬಂದರೆ ಮಕ್ಕಳಿಗೆ ಆಟಿಕೆ, ಬಿಸಿಲು ಹೆಚ್ಚಿದ್ದರೆ ಕೆಎಂಎಫ್ ಸಹಯೋಗ ಪಡೆದು ಮಜ್ಜಿಗೆ ವಿತರಣೆ ಹೀಗೆ ಸಾಧ್ಯವಿರುವಷ್ಟು ಮಟ್ಟಿಗೆ ಹೆಚ್ಚುವರಿ ಸೌಲಭ್ಯ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ₹ 40 ಲಕ್ಷದವರೆಗೆ ಖರ್ಚು ಮಾಡಬಹುದು. ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ವಹಿಸಲು ವಿವಿಧ ವೆಚ್ಚ ತಂಡಗಳನ್ನು ನೇಮಕ ಮಾಡಲಾಗಿದೆ. ಎರಡು ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಬ್ಬರಂತೆ ಇಬ್ಬರು ಸಹಾಯಕ ವೆಚ್ಚ ವೀಕ್ಷಕರು, ಇಬ್ಬರು ಲೆಕ್ಕ ತಂಡದವರು, ನಾಲ್ವರು ವಿಡಿಯೊ ಸರ್ವಿಲೆನ್ಸ್ ತಂಡ, ಹಾಗೆಯೇ ಇಬ್ಬರು ವಿಡಿಯೊ ವಿವಿಂಗ್ ತಂಡವನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಾರ್ಚ್ 29ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಏಪ್ರಿಲ್ 13 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಏ.20 ಕೊನೆಯ ದಿನ. ಏ. 21ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ಏ.24 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ ಎಂದರು.

ಚುನಾವಣಾ ಅಕ್ರಮ ಕುರಿತು ದೂರು ಸಲ್ಲಿಸಲು ಸಿ–ವಿಜಿಲ್ ಮೊಬೈಲ್ ಆ್ಯಪ್, ಸಹಾಯವಾಣಿ 1950 ಹಾಗೂ ಚುನಾವಣಾ ವೆಬ್‌ಸೈಟ್‌ಗಳಲ್ಲಿ ಅವಕಾಶ ಇದೆ ಎಂದರು.

ನಿಶ್ಚಿತಾರ್ಥ, ಮದುವೆ, ನಾಮಕರಣ ಮತ್ತಿತರ ಖಾಸಗಿ ಸಮಾರಂಭಗಳಿಗೆ ಯಾವುದೇ ನಿರ್ಬಂಧ ಇಲ್ಲ, ಆದರೆ, ಈ ಸಮಾರಂಭಗಳು ರಾಜಕೀಯ ಪ್ರೇರಿತವಾಗಿರಬಾರದು ಮತ್ತು ಯಾವುದೇ ಪಕ್ಷದ ಪ್ರಚಾರಕ್ಕೆ ವೇದಿಕೆಯಾಗಿರಬಾರದು. ಒಂದು ವೇಳೆ ಆದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದರು.

14 ಚೆಕ್‌ಪೋಸ್ಟ್‌ಗಳ ರಚನೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ‘ಕುಟ್ಟ, ಮಾಕುಟ್ಟ, ಕರಿಕೆ ಸೇರಿ 3 ಅಂತರ ರಾಜ್ಯ ಚೆಕ್‌ಪೋಸ್ಟ್‌ಗಳನ್ನು ಹಾಗೂ 11 ಅಂತರ ಜಿಲ್ಲಾ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುತ್ತದೆ. ನವೀನ್ ಮತ್ತು ಅಜೀಂ ಎಂಬುವವರನ್ನು ಗಡಿಪಾರು ಮಾಡಲಾಗಿದ್ದು, ಇನ್ನೂ 6 ಮಂದಿಯ ಗಡಿಪಾರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದರು.

ಸ್ವೀಪ್ ಹಾಗೂ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಡಾ.ಎಸ್.ಆಕಾಶ್ ಮಾತನಾಡಿ, ‘ಜಿಲ್ಲೆಯ ಸಖಿ ಮತಗಟ್ಟೆಗಳನ್ನು ಸ್ಥಾಪಿಸಿ ಎಲ್ಲ ಸಿಬ್ಬಂದಿಯೂ ಮಹಿಳೆಯರೇ ಇರುವ ಹಾಗೆ ನೋಡಿಕೊಳ್ಳಲಾಗುವುದು. ಕಾಫಿ, ಬುಡಕಟ್ಟು ಕಲೆ ಸೇರಿದಂತೆ ಜಿಲ್ಲೆಗೆ ಸಂಬಂಧಿಸಿದ ವಿಶಿಷ್ಟ ಪರಿಕಲ್ಪನೆಗಳನ್ನು ಆಯ್ಕೆ ಮಾಡಿಕೊಂಡು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಡಿಮೆ ಮತದಾನವಾಗಿದ್ದ 65 ಮತಗಟ್ಟೆಗಳಲ್ಲಿ ಹೆಚ್ಚಿನ ಮತದಾನಕ್ಕೆ ಶ್ರಮಿಸಲಾಗಿದೆ. ವೋಟರ್ ಹೆಲ್ಪ್‌ಲೈನ್ ಆ್ಯಪ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳಬಹುದು, ಕ್ಯೂ ಆ್ಯಪ್ ಮೂಲಕ ಮತಗಟ್ಟೆಯಲ್ಲಿ ಮತದಾನವಾಗಿರುವ ಪ್ರಮಾಣ ಕುರಿತು ನೇರ ವರದಿ ಪಡೆಯಬಹುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ಅಬಕಾರಿ ಇಲಾಖೆಯ ಜಿಲ್ಲಾ ಆಯುಕ್ತ ಜಗದೀಶ್, ಇದ್ದರು.

ಪೂರಕ ದಾಖಲೆಯೊಂದಿಗೆ ₹ 50 ಸಾವಿರ ಒಯ್ಯಲು ಅವಕಾಶ

ಪೂರಕ ದಾಖಲೆಗಳಿದ್ದಲ್ಲಿ ₹ 50 ಸಾವಿರದಷ್ಟು ಹಣವನ್ನು ಒಬ್ಬ ವ್ಯಕ್ತಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಯ್ಯಬಹುದು. ದಾಖಲೆಗಳು ಇಲ್ಲದಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ₹ 50 ಸಾವಿರಕ್ಕಿಂತ ಅಧಿಕ ಹಣ ಇದ್ದು, ಪೂರಕ ದಾಖಲೆ ಇದ್ದರೂ ಅನುಮಾನ ಮೂಡಿದರೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ₹ 10 ಲಕ್ಷಕ್ಕಿಂತ ಹೆಚ್ಚು ನಗದು ಸಿಕ್ಕರೆ ಕೂಡಲೇ ಆ ಹಣವನ್ನು ಆದಾಯ ತೆರಿಗೆ ಇಲಾಖೆಯ ವಶಕ್ಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.

ಮನೆ ಬಾಗಿಲಿಗೆ ಮತಪೆಟ್ಟಿಗೆ!

ಜಿಲ್ಲೆಯಲ್ಲಿರುವ 3,900 ಅಂಗವಿಕಲರು ಹಾಗೂ 80 ವರ್ಷ ದಾಟಿದ ಮತಗಟ್ಟೆಗೆ ಬರಲಾಗದವರಿಗಾಗಿ ಅವರ ಮನೆಗೆ ಮತಪೆಟ್ಟಿಗೆ ತೆಗೆದುಕೊಂಡು ಹೋಗಿ ಮತಪತ್ರದ ಮೂಲಕ ಮತ ಹಾಕಿಸಿಕೊಳ್ಳಲಾಗುವುದು. ಈ ಸೌಲಭ್ಯ ಪಡೆಯಲು ನಾಮಪತ್ರ ಸಲ್ಲಿಕೆಯ ದಿನದಿಂದ 5 ದಿನದ ಒಳಗೆ ಅರ್ಜಿ ಸಲ್ಲಿಸಬೇಕು. ಒಮ್ಮೆ ಈ ಆಯ್ಕೆಯನ್ನು ತೆಗೆದುಕೊಂಡರೆ ನಂತರ ಇದನ್ನು ರದ್ದುಗೊಳಿಸಿ, ಮತಗಟ್ಟೆಯಲ್ಲಿ ಮತಹಾಕಲು ಅನುಮತಿ ದೊರೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.

ಒಂದು ವೇಳೆ ಅವರು ಈ ಆಯ್ಕೆ ಪಡೆಯದೇ ತಮಗೆ ಮತಗಟ್ಟೆಗೆ ಬರಲು ವಾಹನ ಸೌಕರ್ಯ ಬೇಕು ಎಂದರೆ ಅದನ್ನೂ ನೀಡಲಾಗುವುದು. ವಾಹನ ಸೌಲಭ್ಯ ಪಡೆದು ಮತಗಟ್ಟೆಗೆ ಬಂದು ಎಲ್ಲರೊಂದಿಗೆ ಮತ ಹಾಕುವುದರಿಂದ ಅವರು ಮತದಾನದಿಂದ ದೂರ ಉಳಿಯುವವರಿಗೆ ಮಾದರಿಯಾಗುವರು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT