ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ: ನಿರ್ಮಾಣ ಚುರುಕು

ಸುಧಾರಿಸಿದ ಸರ್ಕಾರಿ ಆಸ್ಪತ್ರೆ, ಉತ್ತಮ ಚಿಕಿತ್ಸೆ, ಖಾಸಗಿಗಿಂತಲೂ ಉತ್ತಮ ಸೇವೆ; ಜನರ ಮೆಚ್ಚುಗೆ
Last Updated 16 ಸೆಪ್ಟೆಂಬರ್ 2022, 5:22 IST
ಅಕ್ಷರ ಗಾತ್ರ

ಮಡಿಕೇರಿ: ಪೊನ್ನಂಪೇಟೆ, ಕುಶಾಲನಗರ, ಮೂರ್ನಾಡು ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ಚುರುಕು ಪಡೆದಿಲ್ಲವಾದರೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಭರವಸೆ ಸಾಕಾರಗೊಳ್ಳುತ್ತಿದೆ.

ಹೊಸ ಕಟ್ಟಡದ ನಿರ್ಮಾಣ ಚಟುವಟಿಕೆ ಭರದಿಂದ ನಡೆಯುತ್ತಿದ್ದು, ಮುಂದಿನ ವರ್ಷ ಸೆಪ್ಟೆಂಬರ್‌ ಹೊತ್ತಿಗೆ ಅದು ಸಂಸ್ಥೆಯ ಕೈ ಸೇರುವ ನಿರೀಕ್ಷೆ ಇದೆ. ಸದ್ಯ, ಇರುವ 300 ಬೆಡ್ ಸಾಮರ್ಥ್ಯವು 750ಕ್ಕೆ ಹೆಚ್ಚಲಿದೆ. ಅತ್ಯಾಧುನಿಕ ಸೇವಾ ಸೌಲಭ್ಯಗಳೂ ಸಿಗಲಿವೆ.

‘ಹಳೆಯ ಕಟ್ಟಡದಲ್ಲಿರುವ ಬಹುತೇಕ ವಿಭಾಗಗಳಲ್ಲಿ ರೋಗಿಗಳಿಗೆ ಉತ್ತಮವಾದ ಸೇವೆಗಳು ಲಭಿಸುತ್ತಿವೆ. ‘ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೋದರೆ ಬದುಕಿ ಬರುವುದು ಕಷ್ಟ’ ಎಂಬ ಭಾವನೆಯನ್ನು ಇಲ್ಲಿನ ವೈದ್ಯರು ಸುಳ್ಳು ಮಾಡುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಚಿತವಾಗಿ ಔಷಧಗಳನ್ನು ನೀಡುವುದು ಸೇರಿದಂತೆ ಬಹುತೇಕ ಸೇವೆಗಳು ಚುರುಕಿನಿಂದ ನಡೆಯುತ್ತಿವೆ. ಆದರೆ, ಇನ್ನೂ ಜನರಲ್ಲಿ ಸರ್ಕಾರಿ ಆಸ್ಪತ್ರೆಯ ಮೇಲಿನ ಹಳೆಯ ಭಾವನೆ ಬದಲಾವಣೆಯಾಗಿಲ್ಲ’ ಎಂದು ಆಸ್ಪತ್ರೆಯ ಅಧೀಕ್ಷಕ ಮೋಹನ್ ಹೇಳುತ್ತಾರೆ.

‘ಭಾರತೀಯ ವೈದ್ಯಕೀಯ ಪರಿಷತ್ತಿನ ನಿಯಮಗಳ ಪ್ರಕಾರ ಈಗ ಸಾಕಷ್ಟು ಸುಧಾರಣೆಯಾಗಿದೆ. ಮೆಡಿಸಿನ್ ವಿಭಾಗದಲ್ಲಿ 8ಕ್ಕೂ ಅಧಿಕ ವೈದ್ಯರಿದ್ದಾರೆ. ಸದ್ಯಕ್ಕೆ ತಜ್ಞ ವೈದ್ಯರ ಕೊರತೆ ಇಲ್ಲ’ ಎಂದು ಅವರು ಹೇಳುತ್ತಾರೆ.

ಒಟ್ಟು 77 ವೆಂಟಿಲೇಟರ್‌ಗಳಿವೆ. 13 ಕೆ.ಎಲ್‌ ಸಾಮರ್ಥ್ಯದ ಲಿಕ್ವಿಡ್ ಆಮ್ಲಜನಕದ 2 ಟ್ಯಾಂಕ್‌ಗಳು, ಪ್ರತಿ ನಿಮಿಷಕ್ಕೆ ಸಾವಿರ ಲೀಟರ್ ಆಮ್ಲಜನಕ ಉತ್ಪಾದಿಸುವಂತಹ 2 ಘಟಕಗಳು ಇವೆ. 11 ಡಯಾಲಿಸಿಸ್‌ ಯಂತ್ರಗಳಿದ್ದು, ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುತ್ತಿವೆ.

ಉಚಿತವಾಗಿ ಸಿ.ಟಿ.ಸ್ಕ್ಯಾನ್‌ ಮಾಡಲಾಗುತ್ತಿದೆ. ಅಲ್ಟ್ರಾಸೌಂಡ್‌ ಸೇರಿದಂತೆ ಇತರೆ ಸ್ಕ್ಯಾನಿಂಗ್‌ ಸೇವೆಗಳೂ ಇವೆ. ಮತ್ತೊಂದು ಸಿ.ಟಿ.ಸ್ಕ್ಯಾನ್‌ ಯಂತ್ರ ಬಂದಿದ್ದು, ಅಳವಡಿಕೆ ಕಾರ್ಯ ನಡೆಯುತ್ತಿದೆ.

ಇತ್ತೀಚೆಗೆ ಎಲ್ಲ ವಿಭಾಗದಲ್ಲೂ ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ. ಎಂಡೊಸ್ಕೋಪಿ, ಲ್ಯಾಪ್ರೊಸ್ಕೋಪಿ ಸೇವೆಗಳು ಲಭ್ಯ. ಮುಂಚೆ ಎಲ್ಲ ಈ ಸೌಲಭ್ಯ
ಪಡೆಯಲು ದಕ್ಷಿಣ ಕನ್ನಡ ಅಥವಾ ಮೈಸೂರಿಗೆ ಹೋಗಬೇಕಿತ್ತು. ಮಹಿಳೆ ಮತ್ತು ಮಕ್ಕಳ ವಿಭಾಗವೂ ಉನ್ನತೀಕರಣಗೊಂಡಿದೆ. 10 ಮಕ್ಕಳ ತೀವ್ರನಿಗಾ ಘಟಕಗಳು ಇವೆ.

ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾದ ಪ್ರಯೋಗಾಲಯಗಳಿವೆ. ಎರಡೂ ಕಡೆ ದಿನದ 24 ಗಂಟೆಗಳ ಪರೀಕ್ಷೆಗಳು ಈಗ ನಡೆಯುತ್ತಿದೆ.

1 ಹೈಟೆಕ್‌ ಆಂಬುಲೆನ್ಸ್ ಸೇರಿದಂತೆ 4 ಆಂಬ್ಯುಲೆನ್ಸ್‌ಗಳಿವೆ. 200ರಿಂದ 250 ಮಂದಿ ಒಳರೋಗಿಗಳು ದಾಖಲಾಗಿದ್ದಾರೆ. ನಿತ್ಯ 500ರಿಂದ 800 ಮಂದಿ ಹೊರರೋಗಿಗಳು ಇಲ್ಲಿ ಸೇವೆ ಪಡೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT