ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧಕ್ಕೆ ಕೊಡವ ಮಕ್ಕಡ ಕೂಟದ ಖಂಡನೆ

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವಿರುದ್ಧ ಬೊಳ್ಳಜಿರ ಬಿ. ಅಯ್ಯಪ್ಪ ಅಸಮಾಧಾನ
Last Updated 31 ಡಿಸೆಂಬರ್ 2019, 3:42 IST
ಅಕ್ಷರ ಗಾತ್ರ

ಮಡಿಕೇರಿ: ‘ಆರ್ಥಿಕವಾಗಿ ಸಬಲರಾಗಿರುವ ಕೊಡವರನ್ನು ಬುಡಕಟ್ಟು ವಿಭಾಗಕ್ಕೆ ಸೇರಿಸಬಾರದು’ ಎಂದು ಪ್ರತಿಪಾದಿಸಿರುವ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷ ವೈ.ಕೆ.ಗಣೇಶ್ ಹೇಳಿಕೆ ವಿರುದ್ಧ ಕೊಡವ ಮಕ್ಕಡ ಕೂಟ ಅಸಮಾಧಾನ ವ್ಯಕ್ತಪಡಿಸಿದೆ.

‘ಭಾರತೀಯ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ತನ್ನ ಹಕ್ಕನ್ನು ಮಂಡಿಸುವ ಅವಕಾಶವನ್ನು ನೀಡಿದೆ. ಈ ಕಾರ್ಯವನ್ನು ಕೊಡವರ ಪ್ರತಿನಿಧಿಯಾಗಿ ಕೊಡವ ನ್ಯಾಷನಲ್‌ ಕೌನ್ಸಿಲ್ ಅಧ್ಯಕ್ಷ ನಾಚಪ್ಪ ಮಾಡುತ್ತಿದ್ದಾರೆ. ಕೊಡವರು ಹಲವು ವರ್ಷಗಳಿಂದ ಕೊಡವ ಬುಡಕಟ್ಟು ಕುಲಕ್ಕೆ ತಮ್ಮನ್ನು ಸೇರಿಸಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಆದರೆ ಇದಕ್ಕೆ ವಿರೋಧಿಸುತ್ತಿರುವುದು ಖಂಡನಾರ್ಹ ಎಂದುಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಹೇಳಿದ್ದಾರೆ.

ಕೊಡವರು ಕೊಡಗಿನ ಒಂದು ಸೀಮಿತ ವ್ಯಾಪ್ತಿಯಲ್ಲಿ ಮಾತ್ರ ವಾಸವಾಗಿದ್ದಾರೆ. ಅಲ್ಲದೇ ಒಂದು ಲಕ್ಷದಷ್ಟು ಮಾತ್ರ ಜನಸಂಖ್ಯೆ ಹೊಂದಿರುವವರು. ಲಕ್ಷಾಂತರ ಜನಸಂಖ್ಯೆ ಹೊಂದಿರುವ, ಆರ್ಥಿಕವಾಗಿ ಬಲಾಢ್ಯರಾದ ಬೇಡ ನಾಯಕ ಸಮುದಾಯದವರು ಈಗಾಗಲೇ ಬುಡಕಟ್ಟು ಪಟ್ಟಿಗೆ ಸೇರಿದ್ದಾರೆ‌. ಆಗ ಆದಿವಾಸಿ ಸಮುದಾಯದವರು ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಯಾವುದಾದರೂ ಸಮುದಾಯವನ್ನು ಬುಡಕಟ್ಟಿಗೆ ಸೇರಿಸಿದರೆ ಅದಕ್ಕೆ ನೀಡುವ ಸವಲತ್ತು, ಅನುದಾನವನ್ನು ಹೆಚ್ಚಿಸುತ್ತದೆ. ಹಲವು ದಾಖಲೆಗಳಲ್ಲಿ ಕೊಡವರು ಬುಡಕಟ್ಟು ಜನಾಂಗದವರು ಎಂದು ಉಲ್ಲೇಖಿಸಲಾಗಿದೆ. ಕೊಡವ ಆಚಾರ–ವಿಚಾರ, ಉಡುಗೆ ತೊಡುಗೆ, ಆಹಾರ ಪದ್ಧತಿ ಎಲ್ಲವೂ ಬುಡಕಟ್ಟು ಜನಾಂಗಕ್ಕೆ ಸಂಬಂಧಪಟ್ಟವೇ ಆಗಿದೆ. ಆದರೆ, ಇಂತಹ ನಿಲುವಿನಿಂದ ಕೊಡವ ಮೂಲವನ್ನು ಅಳಿಸಿಹಾಕುವ ಹುನ್ನಾರ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ.

ಆದಿವಾಸಿಗಳು ತಮಗೆ ಬೇಕಿರುವ ಸೌಲಭ್ಯವನ್ನು ಕೇಳಿ ಪಡೆಯಲು ಹೋರಾಡಬೇಕೇ ಹೊರತು ಇತರ ಜನಾಂಗದವರಿಗೆ ಸವಲತ್ತು ನೀಡಬಾರದು ಎಂದು ಒತ್ತಾಯಿಸಬಾರದು ಎಂದು ಅಯ್ಯಪ್ಪ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT