ಸೋಮವಾರ, ಆಗಸ್ಟ್ 19, 2019
28 °C
ಆಶ್ಲೇಷ ಮಳೆಯ ರುದ್ರನರ್ತನಕ್ಕೆ ಜನಜೀವನ ತತ್ತರ

ಮಳೆಯ ರುದ್ರನರ್ತನಕ್ಕೆ ನಲುಗಿದ ಕುಶಾಲನಗರ

Published:
Updated:
Prajavani

ಕುಶಾಲನಗರ: ಆಶ್ಲೇಷ ಮಳೆಯ ರುದ್ರನರ್ತನಕ್ಕೆ ಕುಶಾಲನಗರ ಪಟ್ಟಣ ಸಂಪೂರ್ಣ ನಲುಗಿ ಹೋಗಿದೆ. ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಯ ಹೆಚ್ಚುವರಿ ನೀರು ತಗ್ಗುಪ್ರದೇಶಗಳಿಗೆ ನುಗ್ಗಿದ್ದು, ಪಟ್ಟಣ ಭಾಗಶಃ ಮುಳುಗಡೆಗೊಂಡಿದೆ.

ನದಿ ಅಂಚಿನಲ್ಲಿರುವ ಸಾಯಿಬಾಬಾ ಲೇಔಟ್, ಕುವೆಂಪು ಬಡಾವಣೆ, ರಸಲ್ ಲೇಔಟ್, ಸೀಗಾರಮ್ಮ ಬಡಾವಣೆ, ಇಂದಿರಾ ಬಡಾವಣೆ, ದಂಡಿನ ಪೇಟೆ, ವಿವೇಕಾನಂದ ಬಡಾವಣೆ, ಯೋಗಾ ನಂದ ಬಡಾವಣೆ, ಆದಿ ಶಂಕರಾಚಾರ್ಯ ಬಡಾವಣೆಗಳ ನೂರಾರು ಮನೆಗಳು ಮುಳುಗಡೆಯಾಗಿವೆ.

ಗಂಧದಕೋಟೆಯಲ್ಲಿ ಜನವಸತಿ ಪ್ರದೇಶಗಳು, ಹೊಲ–ಗದ್ದೆಗಳು ಜಲಾವೃತಗೊಂಡಿವೆ. ಗೊಂದಿ ಬಸವನ ಹಳ್ಳಿ ರೊಂಡೆ ಕೆರೆ ತುಂಬಿದ್ದು, ಹೆಚ್ಚುವರಿ ನೀರು ಗಂಧದಕೋಟೆಗೆ ನುಗ್ಗುತ್ತಿದೆ. ಇದರಿಂದ ತಾವರೆಕೆರೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳು ನೀರಿನಿಂದ ಆವೃತವಾಗಿವೆ. ಕೆಲ ಮನೆಗಳಿಗೆ ನೀರಿನೊಂದಿಗೆ ಹಾವುಗಳು ಬರುತ್ತಿದ್ದು, ಜನರು ಆತಂಕಗೊಂಡಿದ್ದಾರೆ.

ಸಾಯಿ ಬಡಾವಣೆಯಲ್ಲಿ 15ಕ್ಕೂ ಮನೆಗಳು, ಕುವೆಂಪು ಬಡಾವಣೆ 30, ಇಂದಿರಾ ಬಡಾವಣೆಯಲ್ಲಿ 25 ಮನೆಗಳು ಮುಳುಗಿವೆ. ಸಾಯಿಬಾಬಾ ಮತ್ತು ಕುವೆಂಪು ಬಡಾವಣೆಗಳ ನಿವಾಸಿಗಳನ್ನು ನಾಗರಿಕ ರಕ್ಷಣಾ ಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಗಂಧದಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿಯ ಬಿ.ಎಂ. ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕುಶಾಲನಗರದ ಮಾರ್ಗವಾಗಿ ಮಡಿಕೇರಿ ಹಾಗೂ ಮಂಗಳೂರು ಕಡೆಗೆ ಹೋಗುವ ವಾಹನಗಳನ್ನು ಬೈಚನಹಳ್ಳಿ ನಿರ್ಬಂಧಿಸಲಾಗುತ್ತಿದೆ. ಇಲ್ಲಿ ರಸ್ತೆ ಮೇಲೆ 4ರಿಂದ 5 ಅಡಿಗಳಷ್ಟು ನೀರು ಹರಿಯುತ್ತಿದೆ. ರಸ್ತೆ ಮಧ್ಯದಲ್ಲಿ ಸಿಲುಕಿದ್ದ ಬಸ್‌ನ ಪ್ರಯಾಣಿಕರನ್ನು ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.

ಕುಶಾಲನಗರದಿಂದ ಸಿದ್ದಾಪುರ, ವಿರಾಜಪೇಟೆಗೆ ಹೋಗುವ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ವಿರಾಜಪೇಟೆ, ಗೋಣಿಕೊಪ್ಪಲು, ಮಾಕುಟ್ಟ ಮತ್ತಿತರ ಕಡೆಗಳಿಗೆ ಹೋಗಲು ಸಾಧ್ಯವಾಗದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.

Post Comments (+)