ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತ್ತಿಗೋಡು | ಕಾಡಂಚಿನಲ್ಲಿ ಪ್ರವಾಸಿತಾಣ ಬೇಕೇ, ಬೇಡವೇ?

Published 10 ಜೂನ್ 2024, 8:23 IST
Last Updated 10 ಜೂನ್ 2024, 8:23 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನಲ್ಲಿ ಚಿಗುರೊಡೆಯುತ್ತಿರುವ ಅರಣ್ಯ ಪ್ರವಾಸೋದ್ಯಮಕ್ಕೆ ರೈತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮಜ್ಜಿಗೆಹಳ್ಳದಲ್ಲಿ ಆರಂಭಿಸಲು ಉದ್ದೇಶಿಸಿದ್ದ ಹಾಗೂ ಬಹುತೇಕ ಅಂತಿಮ ಹಂತ ತಲುಪಿದ್ದ ಸಫಾರಿ ಕೇಂದ್ರ ಸ್ಥಗಿತಗೊಂಡಿದೆ. ಇದಕ್ಕಾಗಿ ಅರಣ್ಯ ಇಲಾಖೆ ರಸ್ತೆ, ಟಿಕೆಟ್‌ ಕೌಂಟರ್‌ಗಳನ್ನೂ ನಿರ್ಮಿಸಿತ್ತು. ರೈತ ಸಂಘದಿಂದ ಭಾರಿ ಪ್ರತಿರೋಧ ವ್ಯಕ್ತವಾಗಿದ್ದರಿಂದ ಸಫಾರಿ ಕೇಂದ್ರಆರಂಭವಾಗಲಿಲ್ಲ.

ಇದರ ಬೆನ್ನಲ್ಲೇ ಮತ್ತಿಗೋಡು ಸಾಕಾನೆ ಶಿಬಿರವು ಪ್ರವಾಸಿಗರಿಗೆ ಮುಕ್ತವಾಗಿದೆ. ಇದು ಸಹ ರೈತರ ಆಕ್ರೋಶಕ್ಕೆ ತುತ್ತಾಗಿದೆ.

ದಕ್ಷಿಣ ಕೊಡಗಿನ ಹೆಬ್ಬಾಗಿಲು ಎನಿಸಿದ ಆನೆಚೌಕೂರು ವಲಯದ ಮತ್ತಿಗೋಡು ಸಾಕಾನೆ ಶಿಬಿರ ಈಗ ಜಿಲ್ಲಾ ರೈತ ಸಂಘದ ಪ್ರಬಲ ವಿರೋಧದ ನಡುವೆಯೂ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

ಹುಣಸೂರು– ಗೋಣಿಕೊಪ್ಪಲು ನಡುವಿನ ಆನೆಚೌಕೂರು ಅಂತರರಾಜ್ಯ ಹೆದ್ದಾರಿಯಲ್ಲಿರುವ ಮತ್ತಿಗೋಡು ಸಾಕಾನೆ ಶಿಬಿರವನ್ನು ಪ್ರವಾಸಿ ಕೇಂದ್ರವಾಗಿಸಿದರೆ ನಾಗರಹೊಳೆ ಅರಣ್ಯದೊಳಗಿನ ವನ್ಯಜೀವಿಗಳಿಗೆ ತೊಂದರೆ ಆಗಲಿದೆ. ಅವು ಕಾಡು ಬಿಟ್ಟು ನಾಡಿಗೆ ಬಂದು ಕೃಷಿಕರಿಗೆ ಸಮಸ್ಯೆ ನೀಡುತ್ತವೆ. ಹೆದ್ದಾರಿ ಬದಿಯಲ್ಲಿ ವಾಹನ ದಟ್ಟಣೆ ಉಂಟಾಗಿ ಪ್ರಯಾಣಿಕರ ಸಂಚಾರಕ್ಕೂ ಅಡಚಣೆ ಆಗಲಿದೆ. ಇದರಿಂದ ಅರಣ್ಯದೊಳಗಿನ ನೀರವ ವಾತಾವರಣಕ್ಕೆ ಧಕ್ಕೆಯಾಗಲಿದೆ ಎಂದು ಆರೋಪಿಸಿ ರೈತ ಸಂಘದ ನೂರಾರು ಕಾರ್ಯಕರ್ತರು ಮತ್ತಿಗೋಡು ಸಾಕಾನೆ ಶಿಬಿರದ ವಲಯ ಅರಣ್ಯಾಧಿಕಾರಿ  ಕಚೇರಿ ಮುಂದೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಜತೆಗೆ ಜಿಲ್ಲಾಧಿಕಾರಿ  ಮೂಲಕ ಸರ್ಕಾರಕ್ಕೂ  ಮನವಿ ಪತ್ರಸಲ್ಲಿಸಿದ್ದರು.

ರೈತಸಂಘದ ವಿರೋಧಕ್ಕೆ ತಲೆ ಕೆಡಿಸಿಕೊಳ್ಳದ ಅರಣ್ಯ ಇಲಾಖೆ ₹ 1 ಕೊಟಿ ವೆಚ್ಚದಲ್ಲಿ ಸಾಕಾನೆ ಶಿಬಿರವನ್ನು ಪ್ರವಾಸಿ ಕೇಂದ್ರವಾಗಿ ಸಜ್ಜುಗೊಳಿಸಿದೆ.  ಪ್ರವೇಶದ್ವಾರದಲ್ಲಿ ಆಕರ್ಷಕ ಕಮಾನು, ಪ್ರವೇಶ ಶುಲ್ಕದ ಕೌಂಟರ್, ವಾಹನ  ನಿಲ್ದಾಣ, ಆನೆಗಳನ್ನು ಸುತ್ತ ನಿಂತು ನೋಡುವ ರೈಲ್ವೆ ಹಳಿಗಳ ಬ್ಯಾರಿಕೇಡ್, ಅವುಗಳ ಸ್ನಾನಕ್ಕೆ ಬೃಹತ್ ಸಿಮೆಂಟ್ ಕೊಳ, ಉತ್ತಮ ಟೈಲ್ಸ್‌ನಿಂದ ಆವೃತವಾಗಿರುವ ಕಾಲು ದಾರಿ ಎಲ್ಲವೂ ಇಲ್ಲಿನ ಅಚ್ಚುಕಟ್ಟಾಗಿ ನಿರ್ಮಾಣಗೊಂಡಿದೆ.

ಬ್ಯಾರಿಕೇಡ್ ಒಳಗೆ ಆನೆಗಳನ್ನು ನಿಲ್ಲಿಸಿಕೊಂಡಿರುವ ಮಾವುತರು ಮತ್ತು ಕಾವಾಡಿಗಳು ಆನೆಗಳ ಆಹಾರ ವಿಧಾನ, ಪಳಗಿಸುವ ರೀತಿ, ನಡೆಸಿಕೊಳ್ಳುವ ವಿಧಾನದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುತ್ತಿದ್ದಾರೆ. ಇಲ್ಲಿ ಪ್ರವಾಸಿಗರು  ಆನೆಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು, ದೂರದಿಂದ ಸೊಂಡಿಲು ಮುಟ್ಟಿ ಸಂಭ್ರಮಿಸುತ್ತಿದ್ದಾರೆ.

ವಾಹನ ನಿಲುಗಡೆ: ಹೆದ್ದಾರಿ ಬದಿಯಲ್ಲಿ ಪ್ರವಾಸಿಗರ ವಾಹನ ನಿಲ್ಲಿಸಿದರೆ ಸಂಚಾರ ವ್ಯವಸ್ಥೆಗೆ ಅಡಚಣೆಯಾಗುತ್ತದೆ ಎಂಬ ಕಾರಣಕ್ಕೆ ಸಾಕಾನೆ ಶಿಬಿರದ ಒಳಗಡೆಯೇ ಮರಗಳ ನೆರಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಮರಗಳ ನಡುವೆ ಬೆಳೆದಿದ್ದ ಲಂಟಾನ ಕಿತ್ತು ಬಯಲು ಮಾಡಲಾಗಿದೆ. ವಿಶಾಲವಾದ ಮೈದಾನದಲ್ಲಿ ವಾಹನಗಳು ಎಲ್ಲೆಂದರಲ್ಲಿ ನಿಂತಿರುತ್ತವೆ. ಶಿಬಿರದಲ್ಲಿ ನಿರ್ಮಿಸಿರುವ ದೊಡ್ಡ ಸಿಮೆಂಟ್ ಕೊಳದಲ್ಲಿ ಆನೆಗಳು ನೀರು ಕುಡಿಯುವುದು ಮತ್ತು ಸ್ನಾನ ಮಾಡುವುದನ್ನು ಜನರು ನೋಡಿ ಹರ್ಷಿತರಾಗುತ್ತಿದ್ದಾರೆ.

ಅಭಿಮನ್ಯುವೇ ಆಕರ್ಷಣೆ

ಸಾಕಾನೆ ಶಿಬಿರದಲ್ಲಿ 15 ಆನೆಗಳಿವೆ ಏಕಲವ್ಯ, ರಾಮಯ್ಯ, ಸೋಮಶೇಖರ, ಪಾರ್ಥ, ಭುವನೇಶ್ವರಿ, ಚಾಮುಂಡೇಶ್ವರಿ, ಮಾಸ್ತಿ, ರವಿ, ಕ್ಯಾತ, ಹರ್ಷ, ಭೀಮ, ಶ್ರೀಕಂಠ, ಮಹೇಂದ್ರ, ಅಶೋಕ ಆನೆಗಳ ಜತೆಗೆ ಅಭಿಮನ್ಯುವೇ ಹೆಚ್ಚು ಆಕರ್ಷಣೆ. ಮೈಸೂರು ದಸರಾದಲ್ಲಿ ಆನೆಗಳನ್ನು ನೋಡಲು ಕಾದು ಕುಳಿತಿರುತ್ತಿದ್ದ ಜನತೆ ಈಗ ಹತ್ತಿರದಲ್ಲಿ ನಿಂತು ನೋಡಿ ಆನಂದಿಸುವ ಅವಕಾಶ ಲಭಿಸಿದೆ. ಅದರಲ್ಲೂ ಅಂಬಾರಿ ಹೊತ್ತು ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಅಭಿಮನ್ಯುವನ್ನು ಈಗ ಸಮೀಪದಲ್ಲಿಯೇ ನೋಡಿ ಕಣ್ಣು ತುಂಬಿಕೊಳ್ಳುತ್ತಿದ್ದಾರೆ.

ಅದರ ಮುಂದೆ ನಿಂತು ಫೋಟೊ ತೆಗೆಸಿಕೊಂಡು ಆನಂದಿಸುತ್ತಿದ್ದಾರೆ.

ಶುಲ್ಕ: ಈ ಸಾಕಾನೆ ಶಿಬಿರ ಗೋಣಿಕೊಪ್ಪಲಿನಿಂದ 12, ಪಿರಿಯಾಪಟ್ಟಣದಿಂದ 15, ಹುಣಸೂರಿನಿಂದ 25 ಕಿಮೀ ದೂರದಲ್ಲಿದೆ. ಪ್ರವೇಶ ಶುಲ್ಕ ಮಕ್ಕಳಿಗೆ ₹50, ವಯಸ್ಕರಿಗೆ ₹100 ನಿಗದಿ ಪಡಿಸಿದ್ದಾರೆ.

‘ಹೋರಾಟ ಮುಂದುವರಿಯಲಿದೆ’

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವನ್ಯಜೀವಿಗಳ ಅತಿಯಾದ ಉಪಟಳದಿಂದ ಕಾಫಿ ಬೆಳೆಗಾರರು ಮತ್ತು ಕೃಷಿಕರಿಗೆ ಬಹಳ ನಷ್ಟವಾಗುತ್ತಿದೆ. ಜತೆಗೆ ಹಲವು ಜೀವಗಳಿಗೆ ಅಪಾಯ ಒದಗುತ್ತಿದೆ. ಇವುಗಳಿಗೆ ಸೂಕ್ತ ರೀತಿಯಲ್ಲಿ ಆಹಾರ, ನೀರು ಒದಿಗಿಸಿ ಅವುಗಳ ಉಪಟಳ ತಪ್ಪಿಸುವ ಬದಲು ಅರಣ್ಯವನ್ನು ಪ್ರವಾಸಿ ಕೇಂದ್ರ ಮಾಡಿ ವನ್ಯಜಿವಿಗಳ ನೆಮ್ಮದಿಗೆ ಸಂಚಕಾರ ತರಲಾಗಿದೆ. ಮಜ್ಜಿಗೆ ಹಳ್ಳದ ಬಳಿ ಇದೇ ರೀತಿ ಸಪಾರಿ ಕೇಂದ್ರ ತೆರಯಲು ಮುಂದಾದ ಅರಣ್ಯ ಇಲಾಖೆ ಅವೈಜ್ಞಾನಿಕ ಯೋಜನೆ ವಿರುದ್ಧ ಸಂಘಟಿತ ಹೋರಾಟ ನಡೆಸಿ ಅದನ್ನು ಸ್ಥಗಿತಗೊಳಿಸಲಾಯಿತು.ಮುಂದೆ ಮತ್ತಿಗೋಡು ಶಿಬಿರ ಪ್ರವಾಸಿ ಕೇಂದ್ರದ ಬಗೆಗೂ ಹೋರಾಟ ಮುಂದುವರಿಯಲಿದೆ – ಮನು ಸೋಮಯ್ಯ,ಜಿಲ್ಲಾ ರೈತ ಸಂಫದ ಅಧ್ಯಕ್ಷ.

ಸರ್ಕಾರ ಪರಾಮರ್ಶಿಸಲಿ

ಮತ್ತಿಗೋಡು ಸಾಕಾನೆ ಶಿಬಿರವನ್ನು ಪ್ರವಾಸಿ ಕೇಂದ್ರವಾಗಿಸಿಕೊಂಡಿರುವುದರಿಂದ ಸ್ಥಳೀಯ ಜನತೆಗೆ ಯಾವುದೇ ಅನುಕೂಲವಾಗುತ್ತಿಲ್ಲ. ನಾಗರಹೊಳೆ ವನ್ಯಜೀವಿ ಅರಣ್ಯದೊಳಗಿರುವ ಈ ಶಿಬಿರಕ್ಕೆ ಹೆಚ್ಚಿನ ಪ್ರವಾಸಿಗರು ಬರುವುದರಿಂದ ವನ್ಯಜೀವಿಗಳ ಏಕಾಂತತೆಗೆ ಧಕ್ಕೆಯಾಗಲಿದೆ. ಇದರಿಂದ ಮತ್ತಷ್ಟು ಪ್ರಮಾಣದಲ್ಲಿ ಅವುಗಳು ಕಾಫಿ ತೋಟದತ್ತ ನುಗ್ಗುವುಕ್ಕೆ ಅರಣ್ಯ ಇಲಾಖೆಯೇ ಅನುವು ಮಾಡಿಕೊಟ್ಟಂತಾಗಿದೆ. ಇದರ ಬಗ್ಗೆ ಸರ್ಕಾರ ಪರಾಮರ್ಶಿಸಲಿ.

-ಪಿ.ಆರ್.ಪಂಕಜಾ, ಗಿರಿಜನ ಮುಖಂಡರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ. ತಿತಿಮತಿ.

ಹೆದ್ದಾರಿ ಸಂಚಾರಕ್ಕೆ ಅಡಚಣೆ

ಮೈಸೂರು, ವಿರಾಜಪೇಟೆ, ಕಣ್ಣೂರು, ತಲಚೇರಿ ಅಂತರಾಜ್ಯ ಹೆದ್ದಾರಿಯಲ್ಲಿರುವ ಸಾಕಾನೆ ಶಿಬಿರದ ಬಳಿ ಪ್ರವಾಸಿಗರ ವಾಹನ ನಿಲುಗಡೆಯಿಂದ ಸಾರಿಗೆ ವಾಹನ ಸಂಚಾರಕ್ಕೆ ಅಡಚಣೆಯಾಗಲಿದೆ. ಪ್ರವಾಸಿಗರ ದಟ್ಟಣೆಯಿಂದ ಹತ್ತಾರು ಎಕರೆ ಪ್ರದೇಶದ ಅರಣ್ಯ, ನೆಲದ ಮೇಲಿನ ಹಸಿರು ನಾಶವಾಗಲಿದೆ. ಪರಿಸರ ಸಂರಕ್ಷಣೆಯ ಉದ್ದೇಶದಿಂದ ಶಿಬಿರವನ್ನು ಪ್ರವಾಸಿ ಕೇಂದ್ರದಿಂದ ಮುಕ್ತಗೊಳಿಸುವುದು ಒಳ್ಳೆಯದು. ಇದರಿಂದ ಹಲವು ಸಮಸ್ಯೆಗಳು ಎದುರಾಗುವುದರಿಂದ ತಡೆಯುವುದು ಒಳಿತು.

ಮಣಿಕುಂಞ, ಲ್ಯಾಂಪ್ ಸೊಸೈಟಿ ಅಧ್ಯಕ್ಷ, ತಿತಿಮತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT