ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ದಯವೇ ಬೇಕು ಸಕಲ ಪ್ರಾಣಿಗಳಲ್ಲಿ...

ಜಿಲ್ಲೆಯಲ್ಲಿ ವಿವಿಧೆಡೆ ಮೂಕಪ್ರಾಣಿಗಳ ಮೇಲೆ ಗುಂಡಿನ ಮೊರೆತ; ಎತ್ತ ಸಾಗುತ್ತಿದೆ ಸಮಾಜ?
Last Updated 20 ಡಿಸೆಂಬರ್ 2022, 0:00 IST
ಅಕ್ಷರ ಗಾತ್ರ

ಮಡಿಕೇರಿ: ಮೂಕಪ್ರಾಣಿಗಳ ಮೇಲೆ ಗುಂಡಿನ ದಾಳಿ ನಡೆಸಿ ಅಮಾನವೀಯ ವಾಗಿ ಕೊಂದು ಹಾಕುವ ಘಟನೆಗಳು ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ 3 ಪ್ರಾಣಿಗಳು ಗುಂಡಿನ ದಾಳಿಗೆ ಪ್ರಾಣ ಕಳೆದುಕೊಂಡಿದ್ದರೆ, ಎರಡು ತೀವ್ರವಾದ ಗಾಯಗಳಾಗಿ ನರಳುತ್ತಿವೆ.

ಡಿ. 6ರಂದು ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ನಿವಾಸಿ ಸಿ.ಕೆ.ಮಣಿ ಅವರ ಹಸುಗಳು ತೋಟಕ್ಕೆ ನುಗ್ಗಿವೆ ಎಂಬ ಕಾರಣಕ್ಕೆ ಗುಂಡು ಹಾರಿಸಿ ಎರಡು ಹಸುಗಳನ್ನು ಹತ್ಯೆ ಮಾಡಲಾ ಯಿತು. ಹಸುವೊಂದು ತೀವ್ರವಾಗಿ ಗಾಯಗೊಂಡಿತು.

ಡಿ. 16ರಂದು ಕುಶಾಲನಗರದಲ್ಲಿ ನಾಯಿಗಳ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿ ನಾಯಿಯೊಂದನ್ನು ಹತ್ಯೆ ಮಾಡಿದ. ಮತ್ತೊಂದು ನಾಯಿಗೆ ಗಾಯಗಳಾದವು. ಪ್ರಾಣಿಗಳ ಮೇಲೆ ಗುಂಡು ಹಾರಿಸುವುದು ಜಿಲ್ಲೆಯಲ್ಲಿ ಈಗಷ್ಟೇ ಪ್ರಾರಂಭವಾಗಿಲ್ಲ. ಕಳೆದ ವರ್ಷ ಏಪ್ರಿಲ್ 19ರಂದು ಪಾಲಿಬೆಟ್ಟ ಸಮೀಪವಿರುವ ಕಾಫಿ ತೋಟವೊಂದ ರಲ್ಲಿ ಮೂರು ಹಸುಗಳ ಮೃತದೇಹಗಳು ಗುಂಡು ಹೊಡೆದು ಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಆ ಮುಂಚೆಯೂ 4 ಹಸುಗಳಿಗೆ ವಿಷಪ್ರಾಶನ ಮಾಡಿ ಕೊಲ್ಲಲಾಗಿತ್ತು.

ಕೇವಲ ಗುಂಡಿನ ದಾಳಿ ಮಾತ್ರವಲ್ಲ ಪ್ರಾಣಿಗಳ ಮೇಲೆ ಲೈಂಗಿಕ ದೌರ್ಜನ್ಯವೂ ಜಿಲ್ಲೆಯಲ್ಲಿ ನಡೆದಿದೆ. ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದಲ್ಲಿ ಮೇಯಲು ಕಟ್ಟಿ ಹಾಕಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ನ.28ರಂದು ಪೊಲೀಸರು ಬಂಧಿಸಿದ್ದರು.

ಈ ಎಲ್ಲ ಘಟನೆಗಳನ್ನು ಅವಲೋಕಿಸಿದರೆ ನಮ್ಮ ಸಮಾಜ ಎತ್ತ ಸಾಗುತ್ತದೆ ಎಂಬ ಆತಂಕ ಉಂಟಾ ಗುತ್ತದೆ. ಬಸವಣ್ಣನವರ ‘ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ’ ಎಂಬ ವಚನ ನೆನಪಾಗುತ್ತದೆ.

ಮೌನಕ್ಕೆ ಜಾರಿದ ಎಸ್‌ಪಿಸಿಎ!:

ಪ್ರಾಣಿಗಳ ಮೇಲೆ ನಡೆಯುವ ಕ್ರೌರ್ಯವನ್ನು ತಡೆಗಟ್ಟುವುದಕ್ಕಾಗಿಯೇ 2001ರ‌ಲ್ಲಿ ಸರ್ಕಾರ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ ಕಾಯ್ದೆ ರೂಪಿಸಿದೆ. ಆ ಪ್ರಕಾರ ಕೊಡಗು ಜಿಲ್ಲೆಯಲ್ಲೂ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಸ್‌ಪಿಸಿಎ (ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು ಸಮಿತಿ) ರಚನೆಯಾಗಿದೆ. ಆದರೆ, ಈ ಸಮಿತಿ ಪ್ರಾಣಿಗಳ ಮೇಲೆ ಇಂತಹ ಕ್ರೌರ್ಯಗಳು ನಡೆದರೂ ಮೌನ ವಹಿಸಿದೆ. ಕನಿಷ್ಠ ಪಕ್ಷ ಖಂಡಿಸುವ, ಹಿಂಸಾಚಾರ ನಡೆಸಿದವರಿಗೆ ಎಚ್ಚರಿಕೆ ನೀಡುವ, ಈ ಮೂಲಕವಾಗಿಯಾದರೂ ಈ ಕಾಯ್ದೆಯ ಅರಿವು ಮೂಡಿಸುವ ಕಾರ್ಯಕ್ಕೆ ಕೈ ಹಾಕಿಲ್ಲ.

ಎಸ್‌ಪಿಸಿಎ ಬಹಿರಂಗವಾಗಿ ಖಂಡಿಸುವ ಕೆಲಸ ಮಾಡದೇ ಇದ್ದರೂ 500ಕ್ಕೂ ಹೆಚ್ಚಿನ ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಯನ್ನು ನಡೆಸಿದೆ. ಎಲ್ಲ ಗ್ರಾ.ಪಂ.ಗಳಲ್ಲೂ ರ‍್ಯಾಬಿಸ್ ನಿರೋಧಕ ಲಸಿಕೆಗಳನ್ನು ನಾಯಿಗಳಿಗೆ ನೀಡಿದೆ. ಮೊದಲ ಸರ್ಕಾರಿ ಗೋಶಾಲೆ ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ, ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಅಗತ್ಯ ಇದೆ.

ನಿತ್ಯ 5ಕ್ಕೂ ಅಧಿಕ ಮಂದಿ ನಾಯಿ ಕಡಿತ

ಕೊಡಗು ಜಿಲ್ಲೆಯಲ್ಲಿ ಕನಿಷ್ಠ ಎಂದರೂ ನಿತ್ಯ 5ಕ್ಕೂ ಅಧಿಕ ಮಂದಿಗೆ ನಾಯಿಗಳು ಕಚ್ಚುತ್ತಿವೆ. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನಾಯಿ ಕಚ್ಚಿದರೆ ಉಚಿತ ಚಿಕಿತ್ಸೆ ಲಭ್ಯವಿದೆ. ಯಾವುದೇ ನಾಯಿ, ಬೆಕ್ಕು ಅಥವಾ ಪ್ರಾಣಿಗಳು ಕಚ್ಚಿದರೂ, ಪರಚಿದರೂ ನಿರ್ಲಕ್ಷ್ಯ ವಹಿಸದೇ ಕೂಡಲೆ ಚಿಕಿತ್ಸೆ ಪಡೆದುಕೊಳ್ಳಬೇಕು.

ಬೀದಿನಾಯಿಗಳ ಆಹಾರಕ್ಕಾಗಿ ನಿತ್ಯ ಖರ್ಚು

ಗೋಣಿಕೊಪ್ಪಲು: ಜಿಲ್ಲೆಯಲ್ಲಿ ಕೆಲವರು ಬೀದಿನಾಯಿಗಳ ಮೇಲೆ ಕ್ರೌರ್ಯ ತೋರುತ್ತಿದ್ದರೆ, ಮತ್ತೆ ಕೆಲವರು ಅವುಗಳ ಮೇಲೆ ಮಾನವೀಯತೆ ತೋರುತ್ತಿದ್ದಾರೆ.

ಗೋಣಿಕೊಪ್ಪಲುವಿನ ಕಾವೇರಿ ಜಲಮೂಲ ಸಂರಕ್ಷಣಾ ವೇದಿಕೆ ಅಧ್ಯಕ್ಷ ಪುಳಿಂಜನ ಪೂವಯ್ಯ ಅವರಿಗೆ ಬೀದಿ ನಾಯಿಗಳನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ. ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಬಸ್ ನಿಲ್ದಾಣಕ್ಕೆ ಬರುವ ಪೂವಯ್ಯ ಅವುಗಳಿಗೆ ಬಿಸ್ಕೆಟ್ ಹಾಕುತ್ತಾರೆ. ಪೂವಯ್ಯ ಬಂದರೆ ಸಾಕು ಅವರನ್ನು ನೋಡಿದ ಬೀದಿ ನಾಯಿಗಳು ಬಂದು ಅವರ ಸುತ್ತ ಮುತ್ತಿಕೊಳ್ಳುತ್ತವೆ. ಪೂವಯ್ಯ ಅವರ ಧ್ವನಿ ಕೇಳಿದರೆ ಸಾಕು ನಾಯಿಗಳು ಅವರ ಹಿಂದೆಯೇ ಬರುತ್ತವೆ.

ಪೂವಯ್ಯ ಅವರು ಸಂಜೆ ಹೊತ್ತು ಮತ್ತೆ ಬಂದು ಹೋಟೆಲ್‌ಗಳಲ್ಲಿ ಇರುವ ಮಾಂಸದ ತುಂಡುಗಳನ್ನು ಸಂಗ್ರಹಿಸಿ ಬೀದಿನಾಯಿಗಳಿಗೆ ಹಾಕುತ್ತಾರೆ. ಇದಕ್ಕಾಗಿ ಅವರು ಪ್ರತಿ ದಿನ ಹೋಟೆಲ್‌ನವರಿಗೆ ₹20 ನೀಡುತ್ತಾರೆ.

ಇದೆ ರೀತಿ ‘ಪ್ರಜಾವಾಣಿ’ ವಿತರಕರಾದ ಜಮುನಾ ಅವರು ಕೂಡ ಬೀದಿ ನಾಯಿಗಳಿಗೆ ಬಿಸ್ಕತ್ ಮತ್ತು ಇತರೆ ತಿಂಡಿಗಳನ್ನು ಪ್ರತಿ ದಿನ ಹಾಕಿ ಸಾಕುತ್ತಿದ್ದಾರೆ. ಅವರ ಅಂಗಡಿ ಮುಂದೆ ಹತ್ತಾರು ನಾಯಿಗಳು ಬೆಳಗಿನ ಹೊತ್ತು ತಿಂಡಿ ತಿಂದು ಮಲಗಿರುತ್ತವೆ.

ಗೋಶಾಲೆಯತ್ತ ಮಿಡಿಯುವವರಿಲ್ಲ!

ಕುಶಾಲನಗರ: ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಬಂದ ನಂತರ ವಯಸ್ಸಾದ ಹಸು, ಗಂಡು ಕರುಗಳ ಸಮಸ್ಯೆ ಉಲ್ಬಣಗೊಂಡಿದೆ. ಕಸಾಯಿಖಾನೆಗೆ ಸಾಗಿಸುವವರನ್ನು ಪತ್ತೆ ಹಚ್ಚಿ, ಜಾನುವಾರುಗಳನ್ನು ರಕ್ಷಿಸಿ ಗೋಶಾಲೆಗಳಿಗೆ ಬಿಡಲಾಗುತ್ತಿದೆ. ಆದರೆ, ಈಗ ಗೋಶಾಲೆಗಳಿಗೆ ನೆರವು ನೀಡಲು ಹೆಚ್ಚಿನ ಮಂದಿ ಮುಂದಾಗುತ್ತಿಲ್ಲ.

ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ 3 ವರ್ಷಗಳ ಹಿಂದೆ ಆರಂಭಗೊಂಡ ಶ್ರೀ ಕೃಷ್ಣ ಗೋಶಾಲೆ ಆರ್ಥಿಕ ಸಂಕಷ್ಟ ನಡುವೆ ರಾಸುಗಳ ಲಾಲನೆ ಹಾಗೂ ಪೋಷಣೆ ಮಾಡಿಕೊಂಡು ಬರುತ್ತಿದೆ.

ಇದರ ಸಂಸ್ಥಾಪಕ ಹರೀಶ್ ಆಚಾರ್ಯ ಪ್ರಾಕೃತಿಕ ವಿಕೋಪದಿಂದ‌ ಅತಂತ್ರವಾದ ನೂರಾರು ಜಾನುವಾರುಗಳಿಗೆ ರಕ್ಷಣೆ ನೀಡಿ ಪೋಷಿಸಲು ಮುಂದಾದರು. ಆದರೆ, ಇದೀಗ ಗೋಶಾಲೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. 2 ವರ್ಷಗಳಿಂದ ಕೋವಿಡ್ ಮತ್ತಿತರ ಸಮಸ್ಯೆಗಳಿಂದ ದಾನಿಗಳ ಕೊರತೆ ಒಂದೆಡೆಯಾದರೆ, ನಾನಾ ರೋಗಗಳಿಗೆ ಜಾನಿವಾರುಗಳು ತುತ್ತಾಗುತ್ತಿವೆ.

ಗೋಶಾಲೆಗೆ ಹಸಿ ಹುಲ್ಲು, ಒಣ ಹುಲ್ಲು, ಪಶು ಆಹಾರ, ಔಷಧಿ ಹಾಗೂ ಕೆಲಸಗಾರರಿಗೆ ಸಂಬಳ ಸೇರಿದಂತೆ ನಿರ್ವಹಣೆಗಾಗಿ ತಿಂಗಳಿಗೆ ₹2 ಲಕ್ಷದಿಂದ ₹3 ಲಕ್ಷ ಬೇಕು. ಪಶುಪಾಲನಾ ಇಲಾಖೆಯಿಂದ ಸಣ್ಣ ಪ್ರಮಾಣದ ಸಹಾಯ ಮಾತ್ರ ಸಿಕ್ಕಿದೆ. ಹುಲ್ಲನ್ನು ರೈತರಿಂದ ಸಾಲ ಪಡೆದು ರಾಸುಗಳಿಗೆ ನೀಡಬೇಕಾದ ಸ್ಥಿತಿ ಬಂದಿದೆ ಎಂದು ನಿರ್ವಾಹಕರು ಅಳಲು ತೋಡಿಕೊಂಡರು.

ತೆರೆಮರೆಯಲ್ಲಿ ಮಾನವೀಯತೆ ಮೆರೆಯುವವರು

ವಿರಾಜಪೇಟೆ: ಪಟ್ಟಣದಲ್ಲಿ ಹೆಸರು ಹಾಗೂ ಗುರುತನ್ನು ಬಹಿರಂಗಪಡಿಸಲು ಇಚ್ಛಿಸದ ವ್ಯಕ್ತಿಯೊಬ್ಬರು ನಿತ್ಯ 10ರಿಂದ 20 ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ಸಂಚರಿಸುವ ಅವರು ನಾಯಿಗಳಿಗೆ ಆಹಾರ ನೀಡಿ, ಮಾನವೀಯತೆ ಮೆರೆಯುತ್ತಿದ್ದಾರೆ. ಇದೇ ಬಗೆಯಲ್ಲಿ ಇನ್ನೂ ಹಲವು ಮಂದಿ ತಮ್ಮ ತಮ್ಮ ಮನೆಗಳ ಸಮೀಪದಲ್ಲೇ ನಾಯಿಗಳಿಗೆ ಆಹಾರ ನೀಡಿ ಅವುಗಳಿಗೆ ನೆರವಾಗುತ್ತಿದ್ದಾರೆ.

‘ಗೋಶಾಲೆ ಸ್ಥಾಪಿಸಿ’

ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಬೀಡಾಡಿ ದನಗಳು ಮತ್ತು ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಯಾರೂ ಮುಂದಾಗುತ್ತಿಲ್ಲ. ಪ್ರತಿ ಗಾಮ ಪಂಚಾಯಿತಿ ಮಟ್ಟದಲ್ಲಿ ಒಂದೊಂದು ಗೋಶಾಲೆಗಳನ್ನು ಸರ್ಕಾರ ತೆರೆದು ಅದಕ್ಕೆ ಎಲ್ಲ ವ್ಯವಸ್ಥೆ ಮಾಡಿ ಸ್ಥಳೀಯ ಸಂಘ ಸಂಸ್ಥೆಗಳಿಗೆ ನಿರ್ವಹಣೆಗೆ ಬಿಟ್ಟುಕೊಡಬೇಕು.

ಗೌತಮ್ ಕಿರಗಂದೂರು, ನಾವು ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ

‘ರಸ್ತೆಗೆ ಪ್ರಾಣಿ ಬಿಟ್ಟರೆ ದಂಡ ಹಾಕಿ’

ಜನರಿಗೆ ಪ್ರಾಣಿಗಳನ್ನು ಯಾವ ರೀತಿಯಲ್ಲಿ ಸಾಕಬೇಕು ಎಂದು ತಿಳಿದಿಲ್ಲ. ಬೆಳಿಗ್ಗೆ ಹಾಲು ಕರೆದುಕೊಂಡ ನಂತರ ಬೀದಿಗೆ ಬಿಡುವುದು. ನಾಯಿಗಳನ್ನು ಹೊರಗಡೆ ಬಿಟ್ಟು ಸಾಕುವುದರಿಂದ ಸಮಸ್ಯೆಯಾಗಿದೆ. ಮೊದಲು ಸಾಕುವವರನ್ನು ಜಾಗೃತಗೊಳಿಸಬೇಕು. ರಸ್ತೆಗೆ ಪ್ರಾಣಿಗಳನ್ನು ಬಿಡುವವರಿಗೆ ದಂಡ ಹಾಕಬೇಕು.

ಬಿ.ಈ.ಜಯೇಂದ್ರ, ವಕೀಲ, ಸೋಮವಾರಪೇಟೆ

‘ಎಲ್ಲ ಪ್ರಾಣಿಗಳಿಗೂ ದಯೆ ತೋರಲಿ’

ಕೆಲವರು ಮನೆಯಲ್ಲಿನ‌ ನಾಯಿ ಮರಿ ಹಾಕಿದರೆ ಅದರಲ್ಲೂ ಹೆಣ್ಣು ಮರಿಯಾದರೆ ಪುಟ್ಟ ಮರಿಯನ್ನು ಮದುವೆ ಮಂಟಪಗಳ ಬಳಿ ಬಿಟ್ಟು ಅಮಾನವೀಯವಾಗಿ ವರ್ತಿಸುತ್ತಾರೆ. ಆ ಮರಿಗಳು ವಾಹನಗಳಿಗೆ ಸಿಕ್ಕಿ ಬಲಿಯಾಗುತ್ತವೆ. ಕೆಲವರು ಬೀದಿಯಲ್ಲಿನ ಪ್ರಾಣಿಗಳಿಗೆ ಅನವಶ್ಯಕವಾಗಿ ಹೊಡೆದು ಗಾಯಗೊಳಿಸುತ್ತಾರೆ. ಎಲ್ಲ ಪ್ರಾಣಿಗಳಿಗೂ ದಯೆ ತೋರಬೇಕು.

ಪಿ.ಕವಿತಾ ನಾಣಯ್ಯ, ಪ್ರಾಣಿಪ್ರಿಯರು, ವಿರಾಜಪೇಟೆ

ಗೋಶಾಲೆಯಲ್ಲಿ 8 ಜಾನುವಾರು

ಈಗಷ್ಟೇ ತೆರೆಯಲಾದ ಸರ್ಕಾರಿ ಗೋಶಾಲೆಯಲ್ಲಿ 8 ಜಾನುವಾರುಗಳಿವೆ. ಸೀಮಿತವಾದ ಸಂಪನ್ಮೂಲಗಳನ್ನು ಬಳಸಿಕೊಂಡು ಜಾನುವಾರು ರಕ್ಷಣೆ, ಪುರಸಭೆಯಿಂದ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ, ರ‍್ಯಾಬಿಸ್ ರೋಗ ನಿರೋಧಕ ಚುಚ್ಚುಮದ್ದು ನೀಡಿಕೆ, ಜಾಗೃತಿ ಶಿಬಿರಗಳ ಆಯೋಜನೆಯಂತಹ ಕೆಲಸಗಳನ್ನು ಎಸ್‌ಪಿಸಿಎ ಮಾಡುತ್ತಿದೆ. ಕಾಲಕಾಲಕ್ಕೆ ನಿಯಮಿತವಾಗಿ ಸಭೆ ನಡೆಸಲಾಗುತ್ತಿದೆ.

ಸುರೇಶ್‌ಭಟ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ

*************************************************************************

ನಿರ್ವಹಣೆ: ಕೆ.ಎಸ್.ಗಿರೀಶ, ಪೂರಕ ಮಾಹಿತಿ: ಜೆ.ಸೋಮಣ್ಣ, ಡಿ.ಪಿ.ಲೋಕೇಶ್, ಹೇಮಂತ್, ರಘು ಹೆಬ್ಬಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT