ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಏದುಸಿರುವ ಬಿಡುತ್ತಿರುವ ಕೃಷಿ ವಿಜ್ಞಾನ ಕೇಂದ್ರ

ತಜ್ಞರ ಕೊರತೆಯಿಂದ ರೈತರಿಗೆ ಸಿಗದ ಮಾರ್ಗದರ್ಶನ
Published 8 ಏಪ್ರಿಲ್ 2024, 8:17 IST
Last Updated 8 ಏಪ್ರಿಲ್ 2024, 8:17 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಅನ್ನದಾತರಿಗೆ ಮಾರ್ಗದರ್ಶನ ನೀಡಬೇಕಾಗಿದ್ದ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ ವಿಷಯ ವಿಜ್ಞಾನಿಗಳ ಕೊರತೆಯಿಂದ ಏದುಸಿರು ಬಿಡುತ್ತಿದೆ.

ಗೋಣಿಕೊಪ್ಪಲಿನಲ್ಲಿರುವ ಈ ಕೃಷಿ ವಿಜ್ಞಾನ ಕೇಂದ್ರಕ್ಕೆ ಈಗ ಕಾಯಂ ಮುಖ್ಯಸ್ಥರೇ ಇಲ್ಲ. ಕೇಂದ್ರದ ಹಿರಿಯ ಸಸ್ಯ ವಿಜ್ಞಾನಿ ಪ್ರಭಾಕರ್ ಅವರೇ ತಮ್ಮ ಕರ್ತವ್ಯದ ಜತೆಗೆ ಪ್ರಭಾರ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ, 3 ವಿಷಯ ವಿಜ್ಞಾನಿಗಳು, 1 ತಾಂತ್ರಿಕ ಸಹಾಯಕರ ಹುದ್ದೆಗಳು ಖಾಲಿ ಇದ್ದರೆ, 2 ಕಚೇರಿ ಸಹಾಯಕರು, 2 ವಾಹನ ಚಾಲಕರು, 2 ಮಾಲಿ ಹುದ್ದೆಗಳು ಖಾಲಿ ಉಳಿದಿವೆ. ವರ್ಗಾವಣೆ ಮತ್ತು ನಿವೃತ್ತಿಯಿಂದ ತೆರವಾದ ಹುದ್ದೆಗಳಿಗೆ ಮರು ನೇಮಕಾತಿ ನಡೆದಿಲ್ಲ. 7 ಮಂದಿ ವಿಜ್ಞಾನಿಗಳು ಇರಬೇಕಾದ ಸ್ಥಳದಲ್ಲಿ ಈಗ ಕೇವಲ 3 ಮಂದಿ ಮಾತ್ರ ಇದ್ದಾರೆ.

ಕಚೇರಿಯಲ್ಲಿಯೂ ಕೂಡ ಅರೆಕಾಲಿಕವಾಗಿ ಒಬ್ಬ ನೌಕರರಿದ್ದಾರೆ. ಕೇಂದ್ರದ ಆವರಣದೊಳಗೆ ಸ್ವಚ್ಛ ಮಾಡುತ್ತಾ ಕೈತೋಟ ನಿರ್ವಹಿಸುವವರು ಇಲ್ಲದಿರುವುದರಿಂದ ಸುಂದರವಾಗಿದ್ದ ಹೂ ತೋಟ ಒಣಗಿ ಹೆಸರಿಲ್ಲದಂತಾಗಿದೆ. ಹೂ ತೋಟಕ್ಕೆ ಅಳವಡಿಸಿದ್ದ ನೀರಿನ ಪೈಪ್, ನಲ್ಲಿಗಳು ಕೂಡ ನೋಡುವವರಿಲ್ಲದೆ ಹಾಳಾಗಿವೆ.

ಕಾಫಿ, ಮೆಣಸು, ಭತ್ತ, ತರಕಾರಿ, ಜಾನುವಾರು ಮೊದಲಾದವುಗಳಿಗೆ ತಗಲುವ ರೋಗ ಮತ್ತು ನಿವಾರಣೆ ಬಗ್ಗೆ ಮಾಹಿತಿ ಪಡೆಯಲು ಪ್ರತಿ ದಿನ ಹತ್ತಾರು ಕೃಷಿಕರು ಕೇಂದ್ರಕ್ಕೆ ಬಂದು ಹೋಗುತ್ತಿದ್ದಾರೆ. ಆದರೆ, ಇವರಿಗೆ ಮಾಹಿತಿ ಕೊಡುವ ತಜ್ಞರೆ ಇಲ್ಲ. ವಿಜ್ಞಾನಿಗಳು ಸೇರಿದಂತೆ ಒಟ್ಟು 13 ಕಾಯಂ ನೌಕರರು ಇರಬೇಕಾದ ಸ್ಥಳದಲ್ಲಿ ಈಗ ಕೇವಲ 3 ಬಂದಿ ಮಾತ್ರ ಇದ್ದಾರೆ. ಅವರೂ ಒಂದು ವೇಳೆ ವರ್ಗಾವಣೆಗೊಂಡರೆ ಕೇಂದ್ರವೇ ಮುಚ್ಚಿ ಹೋಗುವ ಆತಂಕ ಎದುರಾಗಿದೆ.

ಕೇಂದ್ರದಲ್ಲಿರುವ ವಿಜ್ಞಾನಿಗಳಾದ ಪ್ರಭಾಕರ್, ಡಾ.ಸುರೇಶ್, ವೀರೇಂದ್ರಕುಮಾರ್ ಅವರು ಶಕ್ತಿ ಮೀರಿ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಕ್ಷೇತ್ರಗಳಿಗೆ ತೆರಳಿ ರೈತರ ಜತೆ ಬೆರೆತು ಮಾರ್ಗದರ್ಶನ ನೀಡುತ್ತಿದ್ದಾರೆ. ಭತ್ತ ಹಾಗೂ ತೋಟಗಾರಿಕೆ ಬೆಳೆಗಳ ಜತೆಗೆ ಮಹಿಳೆಯರಿಗೆ ಹೈನುಗಾರಿಕೆ, ಹಂದಿ, ಆಡು, ಕುರಿ, ಕೋಳಿ ಸಾಕಣೆ, ಅಣಬೆ ಬೇಸಾಯ, ವೈನ್ ತಯಾರಿಕೆ ಮೊದಲಾದ ಸ್ವಾವಂಲಬಿ ಬದುಕಿನ ಕಡೆಗೆ ತರಬೇತಿ ನೀಡುತ್ತಿದ್ದಾರೆ. ಅರೆ ಕಾಲಿಕ ನೌಕರರನ್ನು ನೇಮಿಸಿಕೊಂಡು ಅತ್ತೂರಿನಲ್ಲಿ 35 ಎಕರೆಯಷ್ಟು ವಿಶಾಲವಾಗಿರುವ ಕೇಂದ್ರದ ತೋಟಗಾರಿಕಾ ಕ್ಷೇತ್ರದಲ್ಲಿ ರೈತರಿಗೆ ಅಗತ್ಯವಿರುವ ಅಡಿಕೆ, ಮೆಣಸು. ಕಾಫಿ, ಸಪೋಟ, ಬಾಳೆ ಮೊದಲಾದ ಗುಣಮಟ್ಟದ ಸಸ್ಯಗಳನ್ನು ಬೆಳೆದು ವಿತರಿಸುತ್ತಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರ 1976ರಲ್ಲಿ ಚೆಟ್ಟಳ್ಳಿಯಲ್ಲಿ ಕಿತ್ತಳೆ ಸಂಶೋಧನಾ ಕೇಂದ್ರದ ಜತೆಯಲ್ಲಿಯೇ ಕಾರ್ಯನಿರ್ವಹಿಸುತ್ತಿತ್ತು. ಬಳಿಕ ಪ್ರತ್ಯೇಕಗೊಂಡು 1996ರಲ್ಲಿ ಗೋಣಿಕೊಪ್ಪಲಿನಲ್ಲಿ ಆರಂಭಗೊಂಡಿತು. ಅಂದಿನಿಂದ ಜಿಲ್ಲೆಯ ರೈತರ ಜೀವನಾಡಿಯಾಗಿದ್ದ ಕೇಂದ್ರವನ್ನು ಮತ್ತೆ ರೈತ ಪರವಾಗಿಸಬೇಕಾದರೆ ಖಾಲಿ ಇರುವ ಹುದ್ದೆಗಳನ್ನು ಬೇಗ ತುಂಬಲಿ ಎಂಬ ಆಗ್ರಹ ಪ್ರಗತಿಪರ ಕೃಷಿಕ ಸೋಮೆಯಂಡ ತಿಮ್ಮಯ್ಯ ಅವರದು.

ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಹೊರನೋಟ
ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಹೊರನೋಟ
ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿದ್ದ ಹೂ ತೋಟ ಬರಿದಾಗಿರುವುದು
ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿದ್ದ ಹೂ ತೋಟ ಬರಿದಾಗಿರುವುದು

ಮಲತಾಯಿ ಧೋರಣೆ ಇಂದು ರೈತರಿಗೆ ಅನುಕೂಲರವಾಗಿರುವ ಕಚೇರಿಗಳನ್ನು ಸಿಬ್ಬಂದಿ ನೀಡದೆ ಮುಚ್ಚುವ ಹಂತಕ್ಕೆ ಕೇಂದ್ರ ಸರ್ಕಾರ ತಲುಪಿಸಿದೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ. ಕೂಡಲೇ ರೈತರಿಗೆ ಬೇಕಾದ ಕೃಷಿ ವಿಜ್ಞಾನ ಕೇಂದ್ರವನ್ನು ಉಳಿಸುವ ಕ್ರಮಗಳನ್ನು ಕೈಗೊಳ್ಳಬೇಕು.

-ಸೂರಜ್ ಕಾಫಿ ಬೆಳೆಗಾರ ಹುದಿಕೇರಿ.

ಮಾರ್ಗ ದರ್ಶನ ಅಗತ್ಯ ಕೃಷಿ ಬಗ್ಗೆ ಮಾರ್ಗದರ್ಶನ ನೀಡಿ ದೇಶದ ಜನತೆಗೆ ಅನ್ನ ನೀಡುವ ರೈತರ ಬದಕು ಹಸನಾಗಬೇಕಾದರೆ ಅವರಿಗೆ ಸೂಕ್ತ ಮರ್ಗದರ್ಶನ ನೀಡಬೇಕು. ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು.

-ವಿನೋದ್ ಟಿ.ಆರ್. ಪೊನ್ನಂಪೇಟೆ.

ನುರಿತ ವಿಜ್ಞಾನಿಗಳ ಅಗತ್ಯವಿದೆ ಬದಲಾದ ಹವಾಗುಣ ಹಾಗೂ ಬದಲಾಗಿರುವ ಕೃಷಿ ಪದ್ಧತಿಯಲ್ಲಿ ಬೆಳೆ ತೆಗೆದುಕೊಳ್ಳುವುದೇ ಕಷ್ಟವಾಗಿದೆ. ಭತ್ತ ಮತ್ತು ತೋಟಗಾರಿಕೆ ಬೆಳೆಗಳಿಗೆ ತಗಲುವ ರೋಗ ಮತ್ತು ನಿವಾರಣೆ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕೃಷಿ ವಿಜ್ಞಾನ ಕೇಂದ್ರಕ್ಕೆ ತೆರಳಿದರೆ ಕೇವಲ 3 ಮಂದಿ ಮಾತ್ರ ಕಾಯಂ ವಿಜ್ಞಾನಿಗಳು ಇದ್ದಾರೆ. ಇತರ ವಿಷಯಗಳ ಬಗ್ಗೆ ಅರಿವು ಪಡೆದುಕೊಳ್ಳಲು ಕೇಂದ್ರದಲ್ಲಿ ನುರಿತ ವಿಜ್ಞಾನಿಗಳ ಅಗತ್ಯವಿದೆ.

-ಗೋಪಿ ಚಿಣ್ಣಪ್ಪ ಗೋಣಿಕೊಪ್ಪಲು.

ತಜ್ಞರ ಕೊರತೆಯ ನಡುವೆಯೂ ಉತ್ತಮ ಕೆಲಸ ಹಲವು ತಜ್ಞರ ಕೊರತೆಯ ನಡುವೆಯೂ ವಿಜ್ಞಾನ ಕೇಂದ್ರವು ಅಗತ್ಯ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಖಾಲಿ ಹುದ್ದೆಗಳು ಭರ್ತಿಯಾದರೆ ಮತ್ತಷ್ಟು ಉತ್ತಮ ಕೆಲಸ ಮಾಡಲು ಸಹಕಾರಿಯಾಗಲಿದೆ. ಕೇಂದ್ರದ ಉದೇಶ ಸಫಲವಾಗಲಿದೆ.

-ಪ್ರಭಾಕರ್ ಪ್ರಭಾರ ಮುಖ್ಯಸ್ಥರು ಹಾಗೂ ವಿಜ್ಞಾನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT