ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು | ‘ಸೀಡ್ ಡ್ರಂ’ ಬಿತ್ತನೆ ಮೊರೆ ಹೋದ ರೈತರು

ಶ್ರಮ, ಹಣ ಉಳಿಸುವ ವಿಧಾನ, ನಾಪೋಕ್ಲು ವ್ಯಾಪ್ತಿಯಲ್ಲಿ ಜನಪ್ರಿಯ
Last Updated 19 ಜುಲೈ 2020, 14:36 IST
ಅಕ್ಷರ ಗಾತ್ರ

ನಾಪೋಕ್ಲು: ಗ್ರಾಮೀಣ ಪ್ರದೇಶಗಳಲ್ಲಿ ಭತ್ತ ಬಿತ್ತನೆಯ ವಿನೂತನ ಕ್ರಮ ಜನಪ್ರಿಯವಾಗುತ್ತಿದೆ. ಅದುವೇ ‘ಸೀಡ್ ಡ್ರಂ’ ಬಿತ್ತನೆ. ಇದರಿಂದ ಶ್ರಮ ಹಾಗೂ ಹಣ ಉಳಿತಾಯವಾಗುತ್ತಿದೆ ಎಂಬುದು ರೈತರು ಅನಿಸಿಕೆ.

ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ಹಲವು ರೈತರು ಭತ್ತದ ಬಿತ್ತನೆಗಾಗಿ ಈ ಕ್ರಮವನ್ನು ಅನುಸರಿಸುತ್ತಿದ್ದಾರೆ.

ಇಲ್ಲಿನ ಚೆಯ್ಯಂಡಾಣೆ ಗ್ರಾಮದಲ್ಲಿ ಗ್ರಾಮಸ್ಥರು ಒಟ್ಟು ಸೇರಿ ಹಿಂದಿನ ವರ್ಷಗಳಲ್ಲಿ ‘ಕೂಡು ನಾಟಿ ಪದ್ಧತಿ’ ಅನುಸರಿಸುತ್ತಿದ್ದರು. ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಇದೀಗ ಗ್ರಾಮೀಣ ಪ್ರದೇಶಗಳಲ್ಲೂ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು ಕೂಡು ನಾಟಿ ಪದ್ಧತಿಯಿಂದ ಜನ ದೂರವೇ ಉಳಿದಿದ್ದಾರೆ.

ಬದಲಾಗಿ ಭತ್ತದ ಬಿತ್ತನೆಗೆ ‘ಸೀಡ್ ಡ್ರಂ’ ಬಿತ್ತನೆ ಪದ್ಧತಿ ಅನುಸರಿಸುತ್ತಿದ್ದಾರೆ. ಒಂದು ದಿನ ಭತ್ತವನ್ನು ನೀರಿನಲ್ಲಿ ನೆನೆ ಹಾಕಿ ಬಳಿಕ ಚೀಲದಲ್ಲಿ ಕಟ್ಟಿ ಭಾರ ಇರಿಸಿ, ಒಂದು ದಿನ ಮೊಳಕೆಯೊಡೆಯಲು ಬಿಟ್ಟು ಬಿತ್ತನೆ ಮಾಡಬಹುದಾಗಿದೆ. ನರಿಯಂದಡ ಗ್ರಾಮದ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ತೋಟಂಬೈಲು ಅನಂತಕುಮಾರ್ ಪ್ರಸಕ್ತ ವರ್ಷ ಪ್ರಾಯೋಗಿಕವಾಗಿ ತಮ್ಮ ಎರಡು ಎಕರೆ ಗದ್ದೆಯಲ್ಲಿ ‘ಸೀಡ್ ಡ್ರಂ’ ಭತ್ತದ ಬಿತ್ತನೆ ಕೈಗೊಂಡಿದ್ದಾರೆ.

ಈ ಹಿಂದೆ 50 ಕೆ.ಜಿ ಭತ್ತದ ಬಿತ್ತನೆ ಮಾಡಬೇಕಾಗಿತ್ತು. ಆದರೆ, ಈ ಪದ್ಧತಿಯಲ್ಲಿ ಕೇವಲ 20 ಕೆ.ಜಿ ಭತ್ತ ಸಾಕು. ಭತ್ತದ ಬಿತ್ತನೆ, ಅಗೆ ತೆಗೆಯುವುದು, ನಾಟಿ ಕೆಲಸ ಸೇರಿದಂತೆ ವಿವಿಧ ಕೆಲಸಗಳಿಗಾಗಿ ₹ 5ರಿಂದ ₹ 6 ಸಾವಿರ ಉಳಿತಾಯವಾಗಿದೆ ಎನ್ನುತ್ತಾರೆ ಅವರು.
ಗ್ರಾಮದ ಬಿಳಿಯಂಡ್ರ ಉತ್ತಪ್ಪ, ಸದಾಶಿವ ಮತ್ತಿತರ ರೈತರು ಈ ಕ್ರಮವನ್ನು ಅನುಸರಿಸುತ್ತಿದ್ದಾರೆ.

ಬಿತ್ತನೆಗಾಗಿ ಬಳಸುವ ‘ಸೀಡ್ ಡ್ರಂ’ ಬೆಲೆಯೂ ಕಡಿಮೆ. ಫೈಬರ್ ಡ್ರಂ ಐದು ಸಾವಿರ ರೂಪಾಯಿ ಆಸುಪಾಸಿನಲ್ಲಿ ದೊರಕುತ್ತಿದೆ. ಬಿತ್ತನೆ ಮಾಡುವಾಗ ಗದ್ದೆಯಲ್ಲಿ ತೇವಾಂಶ ಕಡಿಮೆ ಇರಬೇಕು ಎನ್ನುತ್ತಾರೆ ಬಿತ್ತನೆ ಕೈಗೊಂಡಿರುವ ರೈತರು.

ಕೂಡು ನಾಡಿ ಪದ್ಧತಿಯಲ್ಲಿ ಹಲವು ಜನರ ಅಗತ್ಯವಿತ್ತು. ಆದರೆ, ಈ ಪದ್ಧತಿಯಲ್ಲಿ ಒಬ್ಬರೇ ಕೆಲಸ ನಿರ್ವಹಿಸಬಹುದಾಗಿದೆ. ಒಟ್ಟಿನಲ್ಲಿ ಗ್ರಾಮೀಣ ಜನರು ತಾಂತ್ರಿಕತೆಯ ಮೊರೆ ಹೋಗಿ ಸಮಯ ಹಾಗೂ ಹಣ ಉಳಿತಾಯ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT