ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ | ಯೋಗ ದಿನಾಚರಣೆಗೆ ಭರದ ಸಿದ್ಧತೆ: ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ

Published 20 ಜೂನ್ 2024, 5:53 IST
Last Updated 20 ಜೂನ್ 2024, 5:53 IST
ಅಕ್ಷರ ಗಾತ್ರ

ಮಡಿಕೇರಿ: ಜೂನ್ 21ರಂದು ಬೆಳಿಗ್ಗೆ 6.30ಕ್ಕೆ ಇಲ್ಲಿನ ಕೆಳಗಿನ ಗೌಡ ಸಮಾಜದಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ಸುಮಾರು 1 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆಯುಷ್ ಇಲಾಖೆ ವತಿಯಿಂದ ಹಾಗೂ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಆಯೂಷ್ ಅಧಿಕಾರಿ ಡಾ.ರೇಣುಕಾ ದೇವಿ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಲು ಈಗಾಗಲೇ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿದ್ಯಾರ್ಥಿಗಳಿಗೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಜೂನ್, 10 ರಿಂದ 20 ರವರೆಗೆ ‘ಯೋಗೋತ್ಸವ’ ದ ಮೂಲಕ ಯೋಗ ತರಬೇತಿಯನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಎನ್‍ಸಿಸಿ ಘಟಕ ಮತ್ತು ಎನ್‍ಎಸ್‍ಎಸ್ ಘಟಕಗಳ ವಿದ್ಯಾರ್ಥಿಗಳಿಗೂ ಯೋಗ ತರಬೇತಿ ನಿಡಲಾಗಿದೆ, ಆಯುಷ್ ಆರೋಗ್ಯ ಕ್ಷೇಮ ಕೇಂದ್ರಗಳು ಹಾಗೂ ಆಯುಷ್ ಆಸ್ಪತ್ರೆಗಳಲ್ಲಿ ಆಯುಷ್ ಅರಿವು ಹಾಗೂ ಯೋಗ ಪ್ರಾತ್ಯಾಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಹಿರಿಯ ಯೋಗ ತರಬೇತುದಾರ ಮಹೇಶ್‌ ಮಾತನಾಡಿ, ‘ಯೋಗ ದಿನಾಚರಣೆಗೆ ಅಗತ್ಯ ಸಿದ್ಧತೆ ನಡೆದಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜೂನ್ 20ರಂದು ಬೆಳಿಗ್ಗೆ 8 ಗಂಟೆಗೆ ಯೋಗ ಜಾಥವನ್ನು ಏರ್ಪಡಿಸಲಾಗಿದ್ದು, ಜಾಥಾ ನಗರದ ಗಾಂಧಿ ಮೈದಾನದಿಂದ ಜನರಲ್ ತಿಮ್ಮಯ್ಯ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ ಹಾಗೂ ಇಂದಿರಾಗಾಂಧಿ ವೃತ್ತ ಮೂಲಕ ಕಾವೇರಿ ಕಲಾಕ್ಷೇತ್ರದವರೆಗೆ ಸಾಗಲಿದೆ ಎಂದು ಮಾಹಿತಿ ನೀಡಿದರು.

ಎನ್‌ಐಎಂಎ ಕೊಡಗು ಸಂಸ್ಥೆಯ ರಾಜಾರಾಮ್ ಮಾತನಾಡಿ, ‘ಸಂಸ್ಥೆ ವತಿಯಿಂದ ಪೊಲೀಸರಿಗೆ ಉಚಿತ ಯೋಗ ಸಲಹೆಯನ್ನು ವರ್ಷಪೂರ್ತಿ ನೀಡಲು ಉದ್ದೇಶಿಸಲಾಗಿದೆ’ ಎಂದರು.

ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಸುಧಾಕರ್, ವೈದ್ಯಾಧಿಕಾರಿ ಡಾ.ಅರುಣ್ ಭಾಗವಹಿಸಿದ್ದರು.

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಡಿಕೇರಿಯ ಗಾಂಧಿ ಭವನದಲ್ಲಿ ಬುಧವಾರ ಸಂಜೆ ಯೋಗಪಟುಗಳು ಸೂರ್ಯನಮಸ್ಕಾರ ಮಾಡುವ ಮೂಲಕ ತಾಲೀಮು ನಡೆಸಿದರು
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಡಿಕೇರಿಯ ಗಾಂಧಿ ಭವನದಲ್ಲಿ ಬುಧವಾರ ಸಂಜೆ ಯೋಗಪಟುಗಳು ಸೂರ್ಯನಮಸ್ಕಾರ ಮಾಡುವ ಮೂಲಕ ತಾಲೀಮು ನಡೆಸಿದರು
ಇಂದು ನಡೆಯಲಿದೆ ಯೋಗ ಜಾಥಾ ನೂರಾರು ಯೋಗಪಟುಗಳು ಭಾಗವಹಿಸುವ ನಿರೀಕ್ಷೆ ‘ಯೋಗೋತ್ಸವ’ ದ ಮೂಲಕ ನಡೆದಿದೆ ಹಲವು ಕಾರ್ಯಕ್ರಮಗಳು
ಹೆಚ್ಚುವರಿ ಜಿಲ್ಲಾಧಿಕಾರಿಯಿಂದ ಪೂರ್ವಭಾವಿ ಸಭೆ
ಅಂತರರಾಷ್ಟ್ರೀಯ 10ನೇ ಯೋಗ ದಿನಾಚರಣೆಗೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ವಿಡಿಯೊ ಸಂವಾದದ ಮೂಲಕ ಬುಧವಾರ ಪೂರ್ವಭಾವಿ ಸಭೆ ನಡೆಸಿದರು. ವಿವಿಧ ಇಲಾಖೆಗಳು ಈ ಕಾರ್ಯಕ್ರಮ ಯಶಸ್ಸುಗೊಳಿಸಲು ಅಗತ್ಯ ಸಹಕಾರ ನೀಡಬೇಕು. ಶಾಲಾ ಕಾಲೇಜು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಮತ್ತು ಬರಲು ಅಗತ್ಯ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸ್ವಚ್ಚತೆ ಕಾಪಾಡುವುದು ಮತ್ತು ಕುಡಿಯುವ ನೀರು ಕಲ್ಪಿಸುವುದು ಮತ್ತಿತರ ಕಾರ್ಯಗಳ ಕಡೆಗೆ ನಗರಸಭೆ ಅಧಿಕಾರಿಗಳು ನಿಗಾ ವಹಿಸುವಂತೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT