ರೆಜಿತ್ ಕುಮಾರ್ ಗುಹ್ಯ
ಸಿದ್ದಾಪುರ: ಜಿಲ್ಲೆಯಾದ್ಯಂತ ಬರದ ಸ್ಥಿತಿ ಸೃಷ್ಟಿಯಾಗಿರುವಂತೆಯೇ ಸಿದ್ದಾಪುರ ಭಾಗದಲ್ಲೂ ಬರ ಆರಂಭವಾಗಿದೆ. ಪ್ರವಾಹ ಪರಿಸ್ಥಿತಿಯನ್ನು ಸೃಷ್ಟಿಸಬೇಕಿದ್ದ ಕಾವೇರಿ ನದಿ ಈಗ ಕಿರಿದಾಗುತ್ತಿದೆ. ನದಿಗೆ ಸೇರುವ ತೋಡುಗಳು ಬತ್ತುತ್ತಿವೆ.
ಮಳೆಯ ಕೊರತೆಯಿಂದ ನದಿಯ ಆರ್ಭಟ ಕ್ಷೀಣಿಸಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ವರ್ಷಾಂತ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುವ ಸಾಧ್ಯತೆಗಳು ಗೋಚರಿಸುತ್ತಿವೆ.
ಸಿದ್ದಾಪುರ ವ್ಯಾಪ್ತಿಯಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಳೆಯಾಗಬೇಕಿತ್ತು. ಆದರೆ, ಜುಲೈ ತಿಂಗಳ ಸಾಮಾನ್ಯ ಮಳೆ ಹೊರತುಪಡಿಸಿದರೆ, ಆಗಸ್ಟ್‌ನಲ್ಲಿ ಮಳೆಯೇ ಆಗಿಲ್ಲ.
ಈಗಾಗಲೇ ಕಾವೇರಿ ನದಿ ನೀರಿನ ಮಟ್ಟ ಇಳಿಕೆಯಾಗಿದ್ದು, ಬಿಸಿಲಿನ ತಾಪಕ್ಕೆ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಿನಲ್ಲಿ ಕಾವೇರಿ ನದಿ ನೀರಿನ ಹರಿವು ಕಡಿಮೆಯಾಗುತ್ತಿತ್ತು. ಆದರೆ, ಮಳೆಗಾಲದಲ್ಲಿ ಈ ಪರಿಸ್ಥಿತಿ ತಲೆದೋರಿರುವುದರಿಂದ ಪ್ರಸಕ್ತ ವರ್ಷ ಡಿಸೆಂಬರ್ ತಿಂಗಳಿನಲ್ಲಿ ನದಿ ಬತ್ತುವ ಆತಂಕ ಎದುರಾಗಿದೆ. ಕಾವೇರಿ ನದಿಗೆ ಸೇರುತ್ತಿರುವ ಉಪನದಿಗಳು ಹಾಗೂ ತೋಡುಗಳ ಹರಿವು ಕೂಡ ಕಡಿಮೆಯಾಗಿದೆ.
ಬೆಳೆಗಾರರಿಗೆ ಸಂಕಷ್ಟ: ಮಾರ್ಚ್ ತಿಂಗಳಿನಲ್ಲಿ ಬಿಸಿಲು ಹೆಚ್ಚಾಗುತ್ತಿದ್ದು, ಕಾಫಿ ಕೊಯ್ಲು ಆದ ಬಳಿಕ ಬೆಳೆಗಾರರು ನದಿಯಿಂದ ಮೋಟರ್ ಮೂಲಕ ಕಾಫಿ ತೋಟಕ್ಕೆ ನೀರು ಹಾಯಿಸುವುದು ವಾಡಿಕೆ. ಈ ಬಾರಿ ಮಳೆಯ ಕೊರತೆಯಿಂದಾಗಿ ಕಾವೇರಿ ನದಿಯಿಂದ ರೈತರಿಗೆ ನೀರು ಹಾಯಿಸಲು ಅನುಮತಿ ದೊರಕುವುದಿಲ್ಲ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಮತ್ತೊಂದೆಡೆ ಕೆರೆಗಳು ಕೂಡ ತುಂಬಿಲ್ಲ. ಬೇಸಿಗೆಗಾಲದಲ್ಲಿ ನೀರಾವರಿಗೆ ಸಮಸ್ಯೆಯಾಗುವ ಆತಂಕ ಎದುರಾಗಿದೆ.
ಪ್ರಾಣಿಗಳಿಗೂ ಸಮಸ್ಯೆ: ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಮಾಲ್ದಾರೆ ವ್ಯಾಪ್ತಿಯ ಅರಣ್ಯದ ಕೆರೆಗಳು ಇನ್ನೂ ಭರ್ತಿಯಾಗಿಲ್ಲ. ಅರಣ್ಯದ ವ್ಯಾಪ್ತಿಯಲ್ಲಿ ಬೇಸಿಗೆಕಾಲದಲ್ಲಿ ಕೆರೆಗಳು ಬತ್ತುತ್ತಿದ್ದು, ವನ್ಯಪ್ರಾಣಿಗಳಿಗೆ ಸಮಸ್ಯೆಯಾಗುತ್ತದೆ. ಆದರೆ, ಪ್ರಸಕ್ತ ವರ್ಷ ಕಡಿಮೆ ಮಳೆಯಾಗಿದ್ದು, ಬೇಸಿಗೆಯ ಬೇಗೆ ವನ್ಯಪ್ರಾಣಿಗಳ ಮೇಲೂ ಪರಿಣಾಮ ಬೀರಲಿದೆ.
ನೀರು ಹಾಯಿಸುತ್ತಿರುವ ರೈತರು: ಕಾಫಿ ಹಾಗೂ ಕರಿಮೆಣಸು ದರ ಉತ್ತಮವಾಗಿದ್ದು, ಬೆಳೆಯ ರಕ್ಷೆಗೆ ರೈತರು ಕಾಫಿ ತೋಟಕ್ಕೆ ಮೋಟರ್ ಮೂಲಕ ನೀರು ಹಾಯಿಸಲು ಆರಂಭಿಸಿದ್ದಾರೆ. ಕಳೆದ ಕೆಲವು ದಶಕಗಳಿಂದ ಮಳೆಗಾಲದಲ್ಲಿ ನೀರು ಹಾಯಿಸುವ ಅಗತ್ಯವೇ ಇರಲಿಲ್ಲ. ಆದರೇ ಪ್ರಸಕ್ತ ವರ್ಷ ಮಳೆಯ ಕೊರತೆಯಿಂದ ಫಲಸು ಹಾಗೂ ಗಿಡಗಳ ರಕ್ಷಣೆಗೆ ನೀರು ಹಾಯಿಸಬೇಕಾದ ಅನಿವಾರ್ಯತೆ ಒದಗಿದೆ.
ಜುಲೈ ತಿಂಗಳಿನಲ್ಲಿ ಸಾಮಾನ್ಯ ಮಳೆಯಾಗಿದ್ದು, ಬಹುತೇಕ ಬೆಳೆಗಾರರು ಹೊಸ ಕಾಫಿ ಹಾಗೂ ಕರಿಮೆಣಸು ಗಿಡವನ್ನು ನೆಟ್ಟಿದ್ದಾರೆ. ಆದರೇ ಇದೀಗ ಬಿಸಿಲಿನ ತಾಪಕ್ಕೆ ಹೊಸದಾಗಿ ನೆಟ್ಟಿರುವ ಗಿಡಗಳು ಬಾಡಲಾರಂಭಿಸಿದೆ. ಮರಗಳು ಕಡಿಮೆ ಇರುವ ತೋಟಗಳಲ್ಲಿ ನೂತನ ಗಿಡಗಳು ಒಣಗಲಾರಂಭಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.