ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ | ಕೆಡಿಪಿ ಸಭೆ: ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ತಾಕೀತು

ಸೋಮವಾರಪೇಟೆ: ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಡಾ.ಮಂತರ್ ಗೌಡ
Published : 27 ಸೆಪ್ಟೆಂಬರ್ 2024, 14:35 IST
Last Updated : 27 ಸೆಪ್ಟೆಂಬರ್ 2024, 14:35 IST
ಫಾಲೋ ಮಾಡಿ
Comments

ಸೋಮವಾರಪೇಟೆ: ‘ಜನರು ಸಮಸ್ಯೆಯಲ್ಲಿ ಸಿಲುಕಿದಾಗ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಸ್ಪಂದಿಸಬೇಕು. ಅದಕ್ಕಾಗಿ ಸರ್ಕಾರ ವಿವಿಧ ಸಮಿತಿಗಳಿಗೆ ನೇಮಕ ಮಾಡಿದ್ದು, ಅವರ ಕೆಲಸಗಳಿಗೆ ಅಧಿಕಾರಿಗಳು ಸಹಕರಿಸಬೇಕು’ ಎಂದು ಶಾಸಕರ ಡಾ. ಮಂತರ್ ಗೌಡ ಸಭೆಗೆ ತಿಳಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ, ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ಎರಡು ಮೂರು ಕಾರುಗಳ ಮಾಲೀಕರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದಾರೆ. ಕಾರುಗಳಲ್ಲಿ ಬಂದು ಪಡಿತರ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಏನೂ ಇಲ್ಲದವರ ಕಾರ್ಡ್ ಬಿಪಿಎಲ್ ಎಪಿಎಲ್ ಕಾರ್ಡ್‌‌‌ಗಳಾಗಿ ಬದಲಾಗುತ್ತಿರುವುದು ಸರಿಯಲ್ಲ. ಅದನ್ನು ಅಧಿಕಾರಿಗಳು ಸರಿಪಡಿಸಬೇಕು’ ಎಂದು ಆಹಾರ ಇಲಾಖೆಯ ಅಧಿಕಾರಿ ಯಶಸ್ವಿನಿಗೆ ತಿಳಿಸಿದರು.

ತಾಲ್ಲೂಕಿನಲ್ಲಿ 2411 ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾಗಿವೆ. ಇನ್ನೂ 450 ಕಾರ್ಡ್‌‌‌ದಾರರಿಗೆ ಡಿಬಿಟಿಯಾಗದ ಬಗ್ಗೆ ಸಭೆಗೆ ಮಾಹಿತಿ ನೀಡಿದ ಸಂದರ್ಭ ಶಾಸಕರು, ಸಾಕಷ್ಟು ಜನರಿಗೆ ಪಾನ್ ಕಾರ್ಡ್ ಮತ್ತು ತೆರಿಗೆ ಪಾವತಿ ಬಗ್ಗೆ ಗೊತ್ತಿಲ್ಲ. ಆದರೂ, ಹಲವರ ಬಿಪಿಎಲ್ ಕಾರ್ಡ್ ರದ್ದಾಗಿವೆ. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಪರಿಶೀಲನೆ ಮಾಡಿ, ಬಡವರಿಗೆ ಬಿಪಿಎಲ್ ಕಾರ್ಡ್ ಸಿಗುವಂತೆ ಮಾಡಬೇಕು. ಉಳ್ಳವರು ಕಾರ್ಡ್ ಪಡೆದಿದ್ದರೆ, ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದರು.

ಸಮಿತಿ ಸದಸ್ಯರು ನ್ಯಾಯ ಬೆಲೆ ಅಂಗಡಿಯವರು ಸರ್ಕಾರ ನಿಗಧಿಗೊಳಿಸಿದ ಸಮಯದಲ್ಲಿ ಪಡಿತರ ನೀಡುತ್ತಿಲ್ಲ. ಅಂಗಡಿಯವರನ್ನು ಪ್ರಶ್ನೆ ಮಾಡಿದರೆ, ಮುಂದಿನ ತಿಂಗಳಿನಿಂದ ಅಂತಹವರ ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್‌‌‌ಗಳಾಗಿ ಮಾರ್ಪಾಡಾಗುತ್ತಿವೆ ಎಂದು ಸಮಿತಿ ಸದಸ್ಯ ಶನಿವಾರಸಂತೆಯ ಪಿ.ಕೆ.ಗಂಗಾಧರ್, ಕೊಡ್ಲಿಪೇಟೆ ಔರಂಗಜೇಬ್ ದೂರಿದರು. ಅಂತಹ ದೂರುಗಳಿದ್ದಲ್ಲಿ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಶಾಸಕರು ತಿಳಿಸಿದರು.

ತಾಲ್ಲೂಕಿನಲ್ಲಿ 89ನ ಕಳ್ಳಬಟ್ಟಿ, 142 ಸ್ಥಳದಲ್ಲಿಯೇ ದೂರು ಹಾಗೂ 24 ಹೆಚ್ಚು ಮದ್ಯ ಸಂಗ್ರಹದ ದೂರು ದಾಖಲಿಸಲಾಗಿದೆ ಎಂದು ಅಬಕಾರಿ ಅಧಿಕಾರಿ ಚೈತ್ರ ಸಭೆಗೆ ಮಾಹಿತಿ ನೀಡಿದರು. ಹೆಚ್ಚಿನ ಗ್ರಾಮಗಳ ಮನೆ ಮನೆಗಳಲ್ಲಿ ಮದ್ಯ ಮಾರಾಟದ ಬಗ್ಗೆ ದೂರುಗಳು ಬರುತ್ತಿವೆ. ಹಲವೆಡೆ 18 ವರ್ಷದೊಳಗಿನವರು ಮದ್ಯದಂಗಡಿಗೆ ತೆರಳುತ್ತಿದ್ದಾರೆ. ಗಾಂಜಾ ಸೇರಿದಂತೆ ಡ್ರಗ್ಸ್ ಬಳಸುತ್ತಿರುವ ಬಗ್ಗೆ ದೂರುಗಳಿವೆ. ಶಾಲಾ ಕಾಲೇಜು ಮತ್ತು ವಿದ್ಯಾರ್ಥಿನಿಲಯಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಶಾಸಕರು ತಿಳಿಸಿದರು.

ತಾಲ್ಲೂಕಿನಲ್ಲಿ ಹಿಂದಿನ ಸಾಲಿನ ಎಸ್ಎಸ್ಎಲ್‌‌‌ಸಿ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಪಂಗಡದ 122 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. 23 ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಇರುವುದಾಗಿ ಬಿಇಒ ಎಸ್.ಭಾಗ್ಯಮ್ಮ ಸಭೆಗೆ ತಿಳಿಸಿದರು.

ಶಾಲೆಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡಬೇಕು. ಅದಕ್ಕಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೆರವನ್ನು ಪಡೆಯಬೇಕೆಂದು ಶಾಸಕರು ತಿಳಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಝೀವಲ್ ಖಾನ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು ಇದ್ದರು.

ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು.
ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು.

ಅಂಗಡನವಾಡಿ ಶಿಕ್ಷಕಿಯರ ವಿರುದ್ಧ ದೂರು

‘ಕೆಲವು ಅಂಗನವಾಡಿ ಶಿಕ್ಷಕಿಯರು ಸರಿಯಾಗಿ ಅಂಗನವಾಡಿಗಳಿಗೆ ತೆರಳುತ್ತಿಲ್ಲ. ಅವರ ಭಾಗದಲ್ಲಿ ಎಷ್ಟು ಜನ ಗರ್ಭಿಣಿಯರು ಮತ್ತು ಬಾಣಂತಿಯರು ಇದ್ದಾರೆ ಎಂಬ ಮಾಹಿತಿ ಇಲ್ಲ’ ಎಂದು ಶಾಸಕರು ಸಭೆಯಲ್ಲಿ ದೂರಿದರು. ಈ ಸಂದರ್ಭ ಅಂಗನವಾಡಿ ಶಿಕ್ಷಕಿಯರು ಬೆಳಿಗ್ಗೆ 11ಕ್ಕೆ ಬರುತ್ತಿದ್ದಾರೆ. ಹಲವರು ಬರುವುದೇ ಇಲ್ಲ. ಸಾಕಷ್ಟು ಅಂಗನವಾಡಿಗಳಲ್ಲಿ ಕೇವಲ ಒಂದೆರಡು ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಹಾಜರಾತಿ ತೋರಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸದಸ್ಯರಾದ ಸಬಿತಾ ವೇದಕುಮಾರ್ ತಿಳಿಸಿದರು. ಅಂಗನವಾಡಿ ಶಿಕ್ಷಕಿಯರು ಸ್ಥಳೀಯ ಪಿಎಚ್‌‌‌ಸಿಯಲ್ಲಿ ಗರ್ಭಿಣಿಯರ ಮಾಹಿತಿ ಪಡೆಯಬೇಕು. ಸರ್ಕಾರದ ಯೋಜನೆಗಳನ್ನು ಬಡ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕೆಂದು ಶಾಸಕರು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT