ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಣಿಕೊಪ್ಪಲು: 20 ದಿನಗಳ ಕ್ರಿಕೆಟ್‌ ಸುಗ್ಗಿ ಆರಂಭ

ಅರಮಣಮಾಡ ಕ್ರಿಕೆಟ್ ಟೂರ್ನಿಗೆ ಚಾಲನೆ
Published 22 ಏಪ್ರಿಲ್ 2024, 7:42 IST
Last Updated 22 ಏಪ್ರಿಲ್ 2024, 7:42 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಬಾಳೆಲೆಯ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಭಾನುವಾರ ಅರಮಣಮಾಡ ಕೊಡವ ಕೌಟುಂಬಿಕ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ದೊರೆಯುತ್ತಿದ್ದಂತೆ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಕ್ರೀಡೋತ್ಸವಗಳಿಗೆ ಮತ್ತೊಂದು ಸೇರ್ಪಡೆಯಾಯಾಯಿತು.

ಒಟ್ಟು 20 ದಿನಗಳ ಕಾಲ ಇಲ್ಲಿ ಕ್ರಿಕೆಟ್‌ ಸುಗ್ಗಿಯೇ ನಡೆಯಲಿದ್ದು, ಕ್ರೀಡಾಸಕ್ತರನ್ನು ತುದಿಗಾಲ ಮೇಲೆ ನಿಲ್ಲಿಸಲು ಒಟ್ಟು 313 ತಂಡಗಳೂ ಸಜ್ಜಾಗಿವೆ.

ಐನ್‌ಮನೆ ಮಾದರಿಯಲ್ಲಿಯೇ ನಿರ್ಮಿಸಿರುವ ಪ್ರವೇಶ ದ್ವಾರ ದಾಟಿದೊಡನೇ ಸಂಭ್ರಮ, ಸಡಗರಗಳು ತುಂಬಿದ್ದವು. 22ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯನ್ನು ಈ ಬಾರಿ ಅರಮಣಮಾಡ ಕುಟುಂಬಸ್ಥರು ನಡೆಸಿಕೊಡುವ ಜವಾಬ್ದಾರಿ ಹೊತ್ತಿದ್ದಾರೆ. ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಮಹಿಳಾ ಕೊಡವ ಕುಟುಂಬಗಳ ಮಹಿಳಾ ಕ್ರಿಕೆಟ್ ತಂಡಗಳೂ ಪಾಲ್ಗೊಳ್ಳುತ್ತಿರುವುದು ವಿಶೇಷ.

ಭಾನುವಾರದಿಂದ ಮೇ. 19ರವರೆಗೆ ಒಟ್ಟು 20 ದಿನಗಳ ಕಾಲ ನಡೆಯುವ ಟೂರ್ನಿಯ ಯಶಸ್ಸಿಗೆ ಅರಮಣಮಾಡ ಕುಟುಂಸ್ಥರು ಟೊಂಕ ಕಟ್ಟಿ ನಿಂತಿದ್ದಾರೆ. ಮೈದಾನದ ಪ್ರವೇಶದ್ವಾರವನ್ನು ಐನ್‌ಮನೆ ಸ್ವರೂಪದಲ್ಲಿಯೇ ನಿರ್ಮಿಸಿದ್ದಾರೆ. 80 ಅಡಿ ಉದ್ದದಲ್ಲಿರುವ ಐನ್‌ಮನೆಯ ಹೆಬ್ಬಾಗಿನಲ್ಲಿ ಮರದ ಕಂಬಗಳ್ಳನ್ನೇ ನಿಲ್ಲಿಸಲಾಗಿದೆ. ಮನೆಯ ಗೋಡೆಯ ಮೇಲೆ ಫ್ಲೆಕ್ಸ್‌ನಲ್ಲಿ ಕೊಡವ ದಂಪತಿಯ ಚಿತ್ರ ಹಾಗೂ ಸಾಂಪ್ರದಾಯಿಕ ಉಡುಪುಗಳ ಚಿತ್ರಗಳನ್ನು ಸುಂದರವಾಗಿ ಮುದ್ರಿಸಲಾಗಿದೆ. ಈ ಐನ್‌ಮನೆಯ ಸ್ವರೂಪ ನೋಡುವುದಕ್ಕಾಗಿಯೇ ಜನರು ಸಾಲುಗಟ್ಟಿ ಮೈದಾನದತ್ತ ಆಗಮಿಸುತ್ತಿದ್ದಾರೆ.

ಗಣಪತಿ ದೇವಸ್ಥಾನದಲ್ಲಿ ಪೂಜೆ: ಭಾನುವಾರ ಬೆಳಿಗ್ಗೆ 8 ಗಂಟೆ ವೇಳೆಯಲ್ಲಿ ಅರಮಣಮಾಡ ಕುಟುಂಬಸ್ಥರು ಒಂದುಗೂಡಿ ಟೂರ್ನಿ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ, ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮಹಿಳೆಯರು, ಪುರುಷರು, ಮಕ್ಕಳು ಸೇರಿ ತಳಿಯಕ್ಕಿ ಬೊಳಚ ಹಿಡಿದು ಮಂಗಳ ವಾದ್ಯದೊಂದಿಗೆ ಊರಿನ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಮೈದಾನ ಪ್ರವೇಶಿಸಿ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮೊದಲಿಗೆ ಟೂರ್ನಿ ಧ್ವಜಾರೋಹಣ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ‘ಜನಾಂಗಗಳು ಒಂದುಗೂಡಿ ಶಾಂತಿ ಸುಭಿಕ್ಷೆ ನೆಲೆಸುವುದಕ್ಕೆ ಕ್ರೀಡೆಗಳು ಸಹಕಾರಿಯಾಗುತ್ತವೆ. ಜತೆಗೆ, ಜನಾಂಗದ ಒಗ್ಗಟ್ಟಿಗೂ ಅನುಕೂಲವಾಗಲಿದೆ. ಕೊಡವ ಜನಾಂಗ ಸಂಸ್ಕೃತಿ, ಉತ್ತಮ ಪದ್ಧತಿ ಪರಂಪರೆ ಉಳಿಸಿಕೊಳ್ಳುವುದರ ಜತೆಗೆ ಸ್ವತಂತ್ರ ಆಲೋಚನೆ ಚಿಂತನೆಗಳನ್ನು ಹೊಂದಿರಬೇಕು’ ಎಂದು ಹೇಳಿದರು.

ಕೊಡವ ಮಹಿಳಾ ಕ್ರಿಕೆಟ್ ಟೂರ್ನಿ ಸಂಸ್ಥಾಪಕಿ ಐಚೆಟ್ಟೀರ ಸುನಿತಾ, ಹಾಕಿ ಕರ್ನಾಟಕ ಕಾರ್ಯದರ್ಶಿ ಅಂಜಪರವಂಡ ಬಿ.ಸುಬ್ಬಯ್ಯ, ಕೆಎಎಸ್ ಅಧಿಕಾರಿ ಚೊಟ್ಟೆಯಂಡಮಾಡ ಕೆ.ರಾಜೇಂದ್ರ, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಾನಕಿ ಭಾಗವಹಿಸಿದ್ದರು.

ವಿರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿಗಳು ಉಮ್ಮತ್ತಾಟ್, ಬೊಳಕಾಟ್, ಕತ್ತಿಯಾಟ್, ಉರುಟಿಕೊಟ್ಟಪಾಟ್ ನೃತ್ಯಗಳನ್ನು ಪ್ರಸ್ತುತಪಡಿಸಿದರು.

ಟೂರ್ನಿ ಮೈದಾನದ ಪ್ರವೇಶ ದ್ವಾರದಲ್ಲಿ ನಿರ್ಮಿಸಿರುವ ಐನ್‌ಮನೆ ಸ್ವರೂಪದ ಮನೆ
ಟೂರ್ನಿ ಮೈದಾನದ ಪ್ರವೇಶ ದ್ವಾರದಲ್ಲಿ ನಿರ್ಮಿಸಿರುವ ಐನ್‌ಮನೆ ಸ್ವರೂಪದ ಮನೆ
ಮೈದಾನದ ಹೆಬ್ಬಾಗಿಲು
ಮೈದಾನದ ಹೆಬ್ಬಾಗಿಲು
ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯವನ್ನು ಪ್ರದರ್ಶಿಸಿದರು
ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯವನ್ನು ಪ್ರದರ್ಶಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT