ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಣಿಕೊಪ್ಪಲು: ಬುಡಕಟ್ಟು ಮಕ್ಕಳ ಅಕ್ಷರ ಕಲಿಕೆಯ ಹಸಿರಿನಂಗಳ!

Published : 10 ಆಗಸ್ಟ್ 2024, 6:56 IST
Last Updated : 10 ಆಗಸ್ಟ್ 2024, 6:56 IST
ಫಾಲೋ ಮಾಡಿ
Comments

ಗೋಣಿಕೊಪ್ಪಲು: ಅದು ಕಾಡಂಚಿನ ಶಾಲೆ. ಇಲ್ಲಿರುವುದು 168 ವಿದ್ಯಾರ್ಥಿಗಳು. ಇವರಲ್ಲಿ 162 ವಿದ್ಯಾರ್ಥಿಗಳು ಯರವ ಮತ್ತು ಜೇನುಕುರುಬ ಜನಾಂಗಕ್ಕೆ ಸೇರಿದ ಬುಡಕಟ್ಟು ಮಕ್ಕಳು.

ಇದು ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ಚೂರಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಣ.

ಮನೆಯಲ್ಲಿ ವಿದ್ಯುತ್, ಕುರ್ಚಿ ಮೇಜು, ಹಾಸಿಗೆ, ಬೆಚ್ಚನೆಯ ಸೂರು ಎಂಬುದರ ಕಲ್ಪನೆಯೇ ಇಲ್ಲದ ಈ ಮಕ್ಕಳು ಕ್ರೀಡೆ, ಸೇರಿದಂತೆ ಪಠ್ಯೇತರ ಚಟುವಟಿಕೆಯಲ್ಲಿ ಯಾವತ್ತೂ ಮುಂದು. ಪ್ರತಿ ವರ್ಷ ಕ್ಲಸ್ಟರ್ ಮಟ್ಟದ ಕ್ರೀಡೆಯಲ್ಲಿ ತಾವೇ ಚಾಂಪಿಯನ್. ಹಲವು ವರ್ಷ ಕಬಡ್ಡಿಯಲ್ಲಿ ವಿಭಾಗ ಮಟ್ಟಕ್ಕೂ ಹೋಗಿರುವ ದಾಖಲೆಯೂ ಇದೆ.

ಪ್ರತಿಭಾ ಕಾರಂಜಿಯಲ್ಲಿಯೂ ಈ ಮಕ್ಕಳ ಪ್ರತಿಭೆಯನ್ನು ಯಾರಿಂದಲೂ ಮೀರಿಸಲಾಗದು. ಹಾಡು, ಚಿತ್ರಕಲೆ, ಏಕಪಾತ್ರ ಅಭಿನಯ, ಪದ್ಯಪಠಣ, ಕ್ಲೇಮಾಡಲಿಂಗ್, ಬಿಲ್ಲುಗಾರಿಕೆ ಎಲ್ಲದರಲ್ಲಿಯೂ ಈ ಮಕ್ಕಳು ಸೈ. ಈ ಕಾರಣಕ್ಕೆ ಶಾಲೆಗೆ ಪ್ರಥಮ ಸ್ಥಾನ.

ವನ್ಯಜೀವಿಗಳ ದರ್ಶನ ಸಾಮಾನ್ಯ: ಅರಣದ್ಯದಂಚಿನಲ್ಲಿರುವ ಕಾಫಿತೋಟದೊಳಗಿನ ಲೈನ್ ಮನೆ ಹಾಗೂ ಪೈಸಾರಿ ಜಾಗದ ಗುಡಿಸಲುಗಳಿಂದ ಬರುವ ಮಕ್ಕಳಿಗೆ ಆನೆ ಸೇರಿದಂತೆ, ಹುಲಿ, ಚಿರತೆ, ಕಾಡುಕೋಣಗಳ ದರ್ಶನ ಸಾಮಾನ್ಯ. ದಿನ ಬೆಳಗಾದರೆ ಇವುಗಳ ಮುಖ ನೋಡುವ ಪುಟ್ಟ ಮಕ್ಕಳಿಗೆ ಇಂಥ ವನ್ಯಜೀವಿಗಳ ಭಯವೂ ದೂರವಾಗಿದೆ. ಶಾಲೆಯ ಸುತ್ತಮುತ್ತಲಿನ ಹಳ್ಳಿಗಳಾದ 3 ಕಿ.ಮೀ ದೂರದ ಪಲ್ಲೇರಿ, ಆಲಂದೋಡು ಪೈಸಾರಿ, ಚೂರಿಕಾಡು ಪೈಸಾರಿ, 2 ಕಿ.ಮೀ ದೂರದ ಹೊಸಕೊಲ್ಲಿ ಮುಂತಾದ ಊರುಗಳಿಂದ ಈ ಮಕ್ಕಳು ನಡೆದುಕೊಂಡೇ ಬರುತ್ತಾರೆ. ಕೆಲವು ಕಾಫಿ ತೋಟದ ಮಾಲೀಕರು ತಮ್ಮ ತೋಟದ ಕಾರ್ಮಿಕರ ಈ ಮಕ್ಕಳನ್ನು ಆಟೊ ಮತ್ತಿತರ ವಾಹನಗಳಲ್ಲಿ ಕಳುಹಿಸಿ ಕೊಡುತ್ತಿದ್ದಾರೆ.

ರಜೆ ಬಂದರೆ ಮತ್ತೆ ಶಾಲೆಗೆ ಚಕ್ಕರ್: ‘ಮಳೆಗಾಲದಲ್ಲಿ ಅಥವಾ ಬೇರೆ ದಿನಗಳಲ್ಲಿ ಒಂದೆರೆಡು ದಿನ ಶಾಲೆಗೆ ರಜೆ ಘೋಷಿಸಿದರೆ ಸಾಕು. ಮತ್ತೆ ಶಾಲೆ ತೆರೆದರೂ ತರಗತಿಗೆ ಚಕ್ಕರ್ ಕೊಡುತ್ತಾರೆ. ಸ್ವಚ್ಛದವಾಗಿ ಹಾಡಿಗಳ ಮನೆ ಮುಂದೆ ತಮ್ಮದೇ ಕಾಡು ಬಿಲ್ಲಿನೊಂದಿಗೆ ಪಕ್ಷಿಗಳ ಭೇಟೆ, ಮರ ಹತ್ತುವ ಆಟವಾಡುವ ಇವರಿಗೆ ಶಾಲೆ ಎಂದರೆ ಬಂಧನ. ಹೀಗಾಗಿ, ಮರಳಿ ಅವರನ್ನು ಶಾಲೆಗೆ ಕರೆತರುವುದು ಕಷ್ಟದ ಕೆಲಸ. ಅದರೂ ನಾವು ಮನೆ ಮನೆಗೆ ತೆರಳಿ ಕರೆ ತರುತ್ತಿದ್ದೇವೆ’ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ.

ಉತ್ತಮ ಉದ್ಯಾನ: ಶಾಲೆಯು ಒಟ್ಟು 4.42 ಎಕರೆ ಜಾಗದಲ್ಲಿದೆ. 1954ರಲ್ಲಿ ಆರಂಭಗೊಂಡ ಶಾಲೆಯಲ್ಲಿ 10 ಕೊಠಡಿಗಳುಳ್ಳ ಉತ್ತಮ ಕಟ್ಟಡವಿದೆ. ಉಳಿದ ಜಾಗದಲ್ಲಿ ಕಾಫಿ ತೋಟ, ಹಣ್ಣಿನ ಗಿಡ, ಉದ್ಯಾನ ಮಾಡಲಾಗಿದೆ. ಪಂಚಾಯಿತಿಯಿಂದ ಉದ್ಯಾನ ನಿರ್ಮಿಸಿಕೊಟ್ಟಿದ್ದರು. ಅದನ್ನು ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ಉತ್ತಮಪಡಿಸಿದ್ದಾರೆ. ಹತ್ತಾರು ಬಗೆಯ ಹೂ ಗಿಡಗಳಿವೆ. ಹಲವು ವಿಧದ ಹಣ್ಣಿನ ಗಿಡಗಳಿವೆ. ಮಧ್ಯಾಹ್ನದ ಬಿಸಿ ಊಟಕ್ಕೆ ಶಾಲೆಯ ಆವರಣದಲ್ಲಿಯೇ ತರಕಾರಿ, ಸೊಪ್ಪು ಬೆಳೆದು ಕೊಳ್ಳುತ್ತಿದ್ದಾರೆ.

ಪಠ್ಯೇತರ ಚಟುವಟಿಕೆ: ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ವತಿಯಿಂದ ಅನುದಾನ ನೀಡಲಾಗಿದೆ. ಇದರಲ್ಲಿ ಉತ್ತಮ ವಿಜ್ಞಾನ ಪ್ರಯೋಗಾಲಯ, ಇಕೋಕ್ಲಬ್, ಕ್ರೀಡಾ ಸಂಘಗಳನ್ನು ಮಾಡಿ ಮಕ್ಕಳ ಪ್ರತಿಭಾ ಪ್ರಕಾಶನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಗೈರು ಹಾಜರಿ ತಪ್ಪಿಸುವುದಕ್ಕೆ ಹಾಜರಾತಿ ಬಹುಮಾನ ನೀಡುತ್ತಿದ್ದಾರೆ. ರಸಪ್ರಶ್ನೆ, ಪ್ರವಾಸ, ವಾರ್ಷಿಕೋತ್ಸವ ಮೊದಲಾದ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳುತ್ತಿದ್ದಾರೆ.

ಶಾಲೆಯ ಹಸಿರು ವಾತಾವರಣ
ಶಾಲೆಯ ಹಸಿರು ವಾತಾವರಣ
 ಚೂರಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
 ಚೂರಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
 ಚೂರಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಸಿರ ಅಂಗಳ
 ಚೂರಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಸಿರ ಅಂಗಳ
 ಚೂರಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೋಟಗಾರಿಕೆ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು
 ಚೂರಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೋಟಗಾರಿಕೆ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು
ಶಾಲೆಯಲ್ಲಿ 5 ಮಂದಿ ಕಾಯಂ ಶಿಕ್ಷಕರು ಮತ್ತು ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. ಪ್ರತಿ ವರ್ಷ ಶಾಲಾ ದಾನಿಗಳ ಸಹಕಾರದಿಂದ ವಾರ್ಷಿಕೋತ್ಸವ ಮತ್ತು ಕ್ರೀಡಾ ದಿನವನ್ನು ಅಚ್ಚುಕಟ್ಟಾಗಿ ಆಚರಿಸುತ್ತೇವೆ. ಸ್ಥಳೀಯ ಕಾಫಿ ಬೆಳೆಗಾರರು ಉತ್ತಮ ಸಹಾಯ ಮಾಡುತ್ತಾರೆ
ಜಯಲಕ್ಷ್ಮಿ ಮುಖ್ಯ ಶಿಕ್ಷಕಿ.

ಉತ್ತಮ ಪರಿಸರ ಶಾಲೆ ಪ್ರಶಸ್ತಿ

ಶಾಲೆಯ ಸುತ್ತ ತಡೆಗೋಡೆ ಇದ್ದು ಎಲ್ಲದಕ್ಕೂ ಸೂಕ್ತ ರಕ್ಷಣೆ ಇದೆ. ಬೇಸಿಗೆ ರಜೆಯಲ್ಲಿ ಶಿಕ್ಷಕರು ತಪ್ಪದೆ ಶಾಲೆಗೆ ತೆರಳಿ ನೀರು ಹಾಕಿ ಹೂ ಗಿಡಗಳನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಶಾಲೆಯ ಜಗುಲಿ ಮೇಲೆ ನೂರಾರು ಬಗೆಯ ಹೂ ಮತ್ತಿತರ ಗಿಡಗಳ ಹೂ ಚೆಟ್ಟಿ ಮಾಡಿಸಿ ಅಂದವಾಗಿ ಇಡಲಾಗಿದೆ. ಇದು ನೋಡುಗರ ಮನೆ ಸೆಳೆಯುತ್ತಿದೆ. ಇದರಿಂದಾಗಿ 4 ವರ್ಷದ ಹಿಂದೆ ಉತ್ತಮ ಪರಿಸರ ಶಾಲೆ ಪ್ರಶಸ್ತಿ ಲಭಿಸಿತ್ತು. ಈ ವರ್ಷವೂ ಕೂಡ ಮುದ್ದೇನಹಳ್ಳಿಯ ಅನ್ನಪೂರ್ಣ ಟ್ರಸ್ಟ್ ವತಿಯಿಂದ ರಾಜ್ಯ ಮಟ್ಟದ ಉತ್ತಮ ಹಸಿರುಶಾಲೆ ಪ್ರಶಸ್ತಿ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT