ಮಂಗಳವಾರ, ಜನವರಿ 21, 2020
29 °C

ವೈಜ್ಞಾನಿಕ ಪದ್ದತಿ ಅಳವಡಿಕೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ವೈಜ್ಞಾನಿಕ ಪದ್ದತಿ ಅಳವಡಿಕೆಯಿಂದ ರೈತರು ಉತ್ತಮ ಬೈವೊಲ್ಟಿನ್ ಗೂಡು ಉತ್ಪಾದನೆ ಮಾಡಬಹುದು’ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಪ್ರಭಾಕರ್ ತಿಳಿಸಿದರು.

ತಾಲ್ಲೂಕಿನ ಶಾನಬೋಗನಹಳ್ಳಿಯಲ್ಲಿ ರೇಷ್ಮೆ ಇಲಾಖೆಯಿಂದ ಆತ್ಮ ಯೋಜನೆಯಡಿ ಶನಿವಾರ ರೇಷ್ಮೆ ಬೆಳೆಗಾರರಿಗೆ ಹಮ್ಮಿಕೊಂಡಿದ್ದ ತರಬೇತಿ ಉದ್ಘಾಟಿಸಿ ಮಾತನಾಡಿ, ‘ಬಹುತೇಕ ರೈತರು ಹಿಂದಿನ ಪದ್ದತಿಯನ್ನೆ ಅಳವಡಿಸುತ್ತಿದ್ದಾರೆ, ವಾತಾವರಣಕ್ಕೆ ತಕ್ಕಂತೆ ಬೆಳೆ ಪದ್ದತಿಯನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ಉತ್ತಮ ಇಳುವರಿಗಳಿಸಬಹುದು’ ಎಂದು ಹೇಳಿದರು.

‘ವಿದೇಶಿ ರೇಷ್ಮೆ ಪೈಪೋಟಿ ಎದುರಿಸಲು ಆಮದು ಶುಲ್ಕ ಹೆಚ್ಚಿಸಬೇಕಾಗಿದೆ. ಇದರಿಂದ ರೈತರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಜತೆಗೆ ಗುಣಮಟ್ಟದ ಬೈವೊಲ್ಟಿನ್ ಗೂಡು ಬೆಳೆಯಲು ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

‘ನರೇಗಾ ಅನುಷ್ಟಾನದಲ್ಲಿ ಜಿಲ್ಲೆಯ ರೇಷ್ಮೆ ಇಲಾಖೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಹೊಸದಾಗಿ ಹಿಪ್ಪುನೇರಳ ಬೆಳೆ ನಾಟಿ ಮಾಡುವವರಿಗೆ ಮೊದಲ ವರ್ಷ ₨ 1 ಲಕ್ಷ ಹಾಗೂ ಎರಡು ವರ್ಷ ನಿರ್ವಹಣೆಗೆ ₨ 1.80,00 ಸಹಾಯಧನ ನೀಡಲಾಗುತ್ತಿದ್ದು, ಇದರ ಪ್ರಯೋಜನೆ ಪಡೆದುಕೊಳ್ಳಲು ರೈತರು ಮುಂದೆ ಬರಬೇಕು’ ಎಂದು ಕೋರಿದರು.

ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್‌ ಮಾತನಾಡಿ, ‘ರೇಷ್ಮೆ ಬೆಳೆಗಾರರು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿಕೊಂಡು ಬೈವೊಲ್ಟಿನ್ ಗೂಡು ಉತ್ಪಾದನೆಗೆ ಒತ್ತು ನೀಡಬೇಕು, ಇದರಿಂದ ಆರ್ಥಿಕವಾಗಿಯೂ ಸದೃಢರಾಗಲು ಸಹಕಾರಿಯಾಗುತ್ತದೆ’ ಎಂದು ಹೇಳಿದರು.

‘ರೈತರು ಬೈವೋಲ್ಟಿನ್ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ವಿಧಾನಗಳು ಹಾಗೂ ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಲಾಖೆ ನೀಡುತ್ತಿರುವ ಅರಿವು ಕಾರ್ಯಕ್ರಮಗಳ ಪ್ರಯೋಜನೆ ಪಡೆದುಕೊಳ್ಳಬೇಕು’ ಎಂದು ಕೋರಿದರು.

ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಮಾರಿಸನ್, ರೇಷ್ಮೆ ಸಹಾಯಕ ಅಧಿಕಾರಿಗಳಾದ ಕಲಾವತಿ, ಎಸ್.ಎನ್.ಶ್ರೀನಿವಾಸ್, ವಿಜ್ಞಾನಿಗಳಾದ ಶಶಿಧರ್, ಕಲ್ಯಾಣ್ ರಾಮ್, ವಿಸ್ತರಣಾಧಿಕಾರಿಗಳಾದ ಬೈರೇಗೌಡ, ಚಂದ್ರಶೇಖರ್, ನಾರಾಯಣಸ್ವಾಮಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು