ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ಅರ್ಧಕ್ಕೆ ಶಾಲೆಯಿಂದ ಹೊರಕ್ಕೆ

ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಕಳವಳ
Published 4 ಜುಲೈ 2023, 16:34 IST
Last Updated 4 ಜುಲೈ 2023, 16:34 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದಲ್ಲಿ ಶೇ 15ರಷ್ಟು ಮಕ್ಕಳು ಅರ್ಧಕ್ಕೆ ಶಾಲೆ ಬಿಡುತ್ತಿದ್ದಾರೆ. 8, 10ನೇ ತರಗತಿಗೇ ಶಿಕ್ಷಣ ಕೊನೆಗೊಳಿಸಿ ಹೊರ ಉಳಿಯುತ್ತಿದ್ದಾರೆ. ಇದಕ್ಕೆ ಕಾರಣ ತಿಳಿದುಕೊಳ್ಳಬೇಕು. ಈ ಸಂಖ್ಯೆಯನ್ನು ಕಡಿತಗೊಳಿಸಲು ಸರ್ಕಾರ, ವಿಶ್ವವಿದ್ಯಾಲಯ ಹಾಗೂ ತಜ್ಞರು ಕಾರ್ಯಪ್ರವೃತ್ತರಾಗಬೇಕು’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಸಲಹೆ ನೀಡಿದರು.

ನಗರ ಹೊರವಲಯದ ನಂದಿನಿ ಪ್ಯಾಲೇಸ್‍ನಲ್ಲಿ ಮಂಗಳವಾರ ನಡೆದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 3ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಹಾಗೂ ಚಿನ್ನದ ಪದಕ ಪ್ರದಾನ ಮಾಡಿ ಮಾತನಾಡಿದರು.

‘ದೇಶದಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದು, ದೇಶದ ಅಭಿವೃದ್ಧಿಯಲ್ಲಿ ತಾಂತ್ರಿಕ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತಿದೆ. ಗುಣಮಟ್ಟದ ಶಿಕ್ಷಣವು ಖಂಡಿತವಾಗಿಯೂ ಯುವಕರಿಗೆ ಕೌಶಲ ಒದಗಿಸುತ್ತದೆ. ಉದ್ಯೋಗ ಆಧಾರಿತ ಶಿಕ್ಷಣವನ್ನು ಒದಗಿಸಲು ವಿಶ್ವವಿದ್ಯಾಲಯಗಳು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯವಿದೆ. ಸ್ಥಳೀಯ ಮತ್ತು ಆತ್ಮನಿರ್ಭರ ಭಾರತಕ್ಕಾಗಿ ಧ್ವನಿ ನೀಡುವ ದಿಕ್ಕಿನಲ್ಲಿ ಮುನ್ನಡೆಯಬಬೇಕು’ ಎಂದರು.

‘ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಲ್ಪಾವಧಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಮತ್ತಷ್ಟು ಅಭಿವೃದ್ಧಿ ಕಾಣಬೇಕಿದೆ. ಇಲ್ಲಿ ಈಗ ಪದವಿ ಪಡೆದವರು ತಾವು ಕಲಿತ ಶಿಕ್ಷಣವನ್ನು ಇತರರಿಗೆ ನೀಡಬೇಕು. ಕಿರಿಯರು ನಿಮ್ಮಿಂದ ಸ್ಫೂರ್ತಿ ಪಡೆಯುವ ರೀತಿಯಲ್ಲಿ ಮುನ್ನಡೆಯಬೇಕು’ ಎಂದು ಹೇಳಿದರು. 

‘ಕೇಂದ್ರ ಸರ್ಕಾರ ಶಿಕ್ಷಣವನ್ನು ಕೌಶಲ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ ನವ ಭಾರತ, ಶ್ರೇಷ್ಠ ಭಾರತ, ಆತ್ಮನಿರ್ಭರ ಭಾರತ ಮಾಡಲು ಸಂಕಲ್ಪ ಮಾಡಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಕರೆ ನೀಡಿದರು.

‘ಸ್ವಾತಂತ್ರ್ಯದ 75ನೇ ವರ್ಷದಲ್ಲಿ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಆರ್ಥಿಕವಾಗಿ ಹೆಚ್ಚು ಬಲಗೊಂಡಿದೆ. ಭವ್ಯವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ಮುಂದಿನ 25 ವರ್ಷಗಳು ಅಮೃತ ಕಾಲ’ ಎಂದು ನುಡಿದರು.

ಉನ್ನತ ಸಿಕ್ಷಣ ಸಚಿವ ಡಾ.‌ಎಂ.ಸಿ.ಸುಧಾಕರ್‌ ಮಾತನಾಡಿ, ‘ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಪಠ್ಯದಲ್ಲಿ ಬದಲಾವಣೆ ತರುವ ಅಗತ್ಯವಿದೆ. ಕೌಶಲಾಭಿವೃದ್ಧಿಗೆ ಆದ್ಯತೆ ನೀಡಿದರೆ ವಿದ್ಯಾರ್ಥಿಗಳು ಭವಿಷ್ಯ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ತಜ್ಞರ ಜತೆ ಚರ್ಚಿಸಲಾಗುತ್ತಿದೆ. ದಿಢೀರನೆ ವ್ಯವಸ್ಥೆ ಬದಲಿಸುತ್ತೇವೆಂದು ಹೇಳಲಾಗದು. ಎಲ್ಲವನ್ನೂ ಪರಿಶೀಲಿಸಿ ದೇಶ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರಿಪಡಿಸುವ ಕೆಲಸ ಮಾಡಲಾಗುವುದು’ ಎಂದರು.

‘ಅಮರಾವತಿ ಗ್ರಾಮದ ಬಳಿ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಕಟ್ಟಡಗಳ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಳ್ಳಬೇಕಿದೆ. ಹಣ ಬಿಡುಗಡೆ ಆಗಿದೆ, ಕಾಮಗಾರಿ ಆರಂಭವಾಗಿಲ್ಲ. ಸಮಸ್ಯೆ ನಿವಾರಣೆ ಮಾಡಿ ಬೇಗನೇ ಕಟ್ಟಡ ಕಾಮಗಾರಿ ಆರಂಭಿಸಬೇಕು’ ಎಂದು ಸೂಚಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಸ್ವಾಗತಿಸಿದರು. ವಾರ್ಷಿಕ ವರದಿ ‌ಮಂಡಿಸಿದರು. 'ಸುವರ್ಣ ಗಂಗ' ಎಂದು ವಿಶ್ವವಿದ್ಯಾಲಯದ ಮಂಗಸಂದ್ರ ಕ್ಯಾಂಪಸ್‌ಗೆ ಮರುನಾಮಕರಣ ಮಾಡಲಾಗಿದೆ ಎಂದರು.

ಪರಿಸರ ಮತ್ತು ಅಭಿವೃದ್ಧಿ ಪತ್ರಕರ್ತ ‌ಪಿ.ಸಾಯಿನಾಥ್, ಕುಲಸಚಿವರಾದ ಪ್ರೊ.ಎನ್.ನರಸಿಂಹಮೂರ್ತಿ (ಆಡಳಿತ), ಡಾ.ಡೊಮಿನಿಕ್‌.ಡಿ (ಪರೀಕ್ಷಾಂಗ), ಸಿಂಡಿಕೇಟ್‌ ಸದಸ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 3ನೇ ಘಟಿಕೋತ್ಸವದಲ್ಲಿ ಮಂಗಳವಾರ ನೀತು ಆರ್‌ (ಎಂ.ಎಸ್ಸಿ–ಪ್ರಾಣಿ ವಿಜ್ಞಾನ) ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಚಿನ್ನದ ಪದಕ ಪ್ರದಾನ ಮಾಡಿದರು
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 3ನೇ ಘಟಿಕೋತ್ಸವದಲ್ಲಿ ಮಂಗಳವಾರ ನೀತು ಆರ್‌ (ಎಂ.ಎಸ್ಸಿ–ಪ್ರಾಣಿ ವಿಜ್ಞಾನ) ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಚಿನ್ನದ ಪದಕ ಪ್ರದಾನ ಮಾಡಿದರು

ಮೂವರಿಗೆ ಗೌರವ ಡಾಕ್ಟರೇಟ್: ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (ಸಾಂಸ್ಕೃತಿಕ ಕ್ಷೇತ್ರ) ದಲಿತ ಹೋರಾಟಗಾರ ಸಿ.ಎಂ.ಮುನಿಯಪ್ಪ (ಸಾಮಾಜಿಕ ಸೇವಾ ಕ್ಷೇತ್ರ) ಹಾಗೂ ಸೌರಶಕ್ತಿಯ ಮಹತ್ವ ಸಾರಿದ ಹರೀಶ್‌ ಹಂದೆ (ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ) ಅವರಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಗೌರವ ಡಾಕ್ಟರೇಟ್‌‌ ಪ್ರದಾನ ಮಾಡಿದರು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 3ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಮೂವರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT