ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಉತ್ತರ ವಿ.ವಿ: ವೆಬ್‌ಸೈಟ್‌ ಹ್ಯಾಕ್‌; ಅಂಕ ತಿದ್ದುಪಡಿ, ಉತ್ತೀರ್ಣ

ಯುಯುಸಿಎಂಎಸ್‌ ತಂತ್ರಾಂಶ; ಬೃಹತ್‌ ವಂಚನೆ ಜಾಲ ಸಾಧ್ಯತೆ
Published : 23 ಸೆಪ್ಟೆಂಬರ್ 2024, 4:25 IST
Last Updated : 23 ಸೆಪ್ಟೆಂಬರ್ 2024, 4:25 IST
ಫಾಲೋ ಮಾಡಿ
Comments

ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಯುಯುಸಿಎಂಎಸ್‌ ತಂತ್ರಾಂಶದ ವೆಬ್‌ಸೈಟ್‌ ಹ್ಯಾಕ್‌ ಮಾಡಿರುವ ಸಂಬಂಧ ಕೋಲಾರದ ಸೈಬರ್‌ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆಯಲ್ಲಿ (ಸೆನ್‌) ಪ್ರಕರಣ ದಾಖಲಾಗಿದೆ.

ಕೆಲ ವ್ಯಕ್ತಿಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಹಣ ಪಡೆದು ಯುಯುಸಿಎಂಎಸ್‌ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಅಂಕ ಬದಲಾವಣೆ ಮಾಡುವುದು ಹಾಗೂ ಅನುತ್ತೀರ್ಣರಾದವರನ್ನು ಉತ್ತೀರ್ಣ ಮಾಡಿಸುವ ಕೃತ್ಯದಲ್ಲಿ ತೊಡಗಿರುವುದು ಗೊತ್ತಾಗಿದೆ. ದೊಡ್ಡಮಟ್ಟದಲ್ಲಿ ವಂಚನೆ ನಡೆದಿರುವ ಸಾಧ್ಯತೆ ಬಗ್ಗೆ ಜಿಲ್ಲಾ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ನಡೆಸುತ್ತಿರುವ ಯುನಿಫೈಡ್‌ ಯೂನಿವರ್ಸಿಟಿ ಕಾಲೇಜ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ನ (ಯುಯುಸಿಎಂಎಸ್‌) ಅಧಿಕೃತ ಜಾಲತಾಣವನ್ನು ಉತ್ತರ ವಿಶ್ವವಿದ್ಯಾಲಯವು ಬಳಸುತ್ತಿದ್ದು, ಈ ತಂತ್ರಾಂಶದಡಿ ಆನ್‌ಲೈನ್‌ನಲ್ಲಿ ಪರೀಕ್ಷಾ ಚಟುವಟಿಕೆಗಳನ್ನು ನಡೆಸುತ್ತಿದೆ.

‘ಒಂದು ವಾರದಿಂದ ಕುಲಪತಿ (ಮೌಲ್ಯಮಾಪನ), ಉಪ ಕುಲಸಚಿವರು (ಮೌಲ್ಯಮಾಪನ) ಮತ್ತು ಪರೀಕ್ಷಾ ಸಂಯೋಜಕರ ಐಡಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪಾಸ್‌ವರ್ಡ್‌ಗಳನ್ನು ಯಾರೋ ಹ್ಯಾಕ್‌ ಮಾಡಿ ರಿಸೆಟ್‌ ಮಾಡಿದ್ದಾರೆ. ಯುಯುಸಿಎಂಸಿ ತಾಲತಾಣದ ಮುಖ್ಯಸ್ಥರ ಗಮನಕ್ಕೆ ತಂದಾಗ ಹ್ಯಾಕ್‌ ಆಗಿರುವ ಸಾಧ್ಯತೆ ಗೊತ್ತಾಗಿದೆ. ಈ ಬಗ್ಗೆ ಕ್ರಮ ವಹಿಸಬೇಕು’ ಎಂದು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಕೆ.ತಿಪ್ಪೇಸ್ವಾಮಿ ದೂರು ನೀಡಿದ್ದಾರೆ.

ಕೆಲ ದಿನಗಳಿಂದ ಯುಯುಸಿಎಂಎಸ್‌ ತಂತ್ರಾಂಶದಲ್ಲಿ ತಾಂತ್ರಿಕ ತೊಂದರೆ ಉಂಟಾಗಿತ್ತು. ಹೀಗಾಗಿ, ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳು 2024–25ನೇ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಲು ಪರದಾಡಿದ್ದರು. ಈ ಸಂಬಂಧ ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರದ ಭಾಗದ ವಿದ್ಯಾರ್ಥಿಗಳು ದೂರಿದ್ದರು. ವಿಶ್ವವಿದ್ಯಾಲಯವು ಎರಡು ಬಾರಿ ಅರ್ಜಿ ಸಲ್ಲಿಕೆ ಅವಧಿಯನ್ನು ಮುಂದೂಡಿತ್ತು.

ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ನೀಡಿರುವ ವೆಬ್‍ಸೈಟ್‌ ಲಿಂಕ್ (https://uucms.karnataka.gov.in/) ಬಳಸಿಯೇ ಅರ್ಜಿ ಸಲ್ಲಿಸಬೇಕಿದೆ.

ಭಾರತೀಯ ನೃತ್ಯ ಕಲಾ ಪರಿಷತ್
ನಿರಂಜನ ವಾನಳ್ಳಿ
ಭಾರತೀಯ ನೃತ್ಯ ಕಲಾ ಪರಿಷತ್ ನಿರಂಜನ ವಾನಳ್ಳಿ

ಅಂಕ ತಿದ್ದುಪಡಿ ಫೇಲ್‌ ಆದವರೂ ಪಾಸ್‌!

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಕೆಲ ವಿದ್ಯಾರ್ಥಿಗಳ ಅಂಕ ತಿದ್ದುಪಡಿ ಮಾಡಿ ಪಾಸ್‌ ಮಾಡುತ್ತಿರುವ ವಿಚಾರ ಗೊತ್ತಾಗಿದೆ. ಒಂದೊಂದು ವಿಷಯಕ್ಕೆ ತಲಾ ₹15 ರಿಂದ ₹ 20 ಸಾವಿರದಂತೆ ಬೇಡಿಕೆ ಇಟ್ಟಿದ್ದು ಹಣ ನೀಡಿದ ಅರ್ಧ ತಾಸಿನಲ್ಲಿ ಪರೀಕ್ಷೆ ಪಾಸ್‌ ಮಾಡಿಸಿ ಫಲಿತಾಂಶವನ್ನು ವಿಶ್ವವಿದ್ಯಾಲಯ ವೆಬ್‌ಸೈಟ್‌ಗೆ ಅಪಲೋಡ್‌ ಮಾಡುವ ಭರವಸೆ ನೀಡಿರುವುದು ತಿಳಿದು ಬಂದಿದೆ. ಅಂಕ ತಿದ್ದಿ ಉತ್ತೀರ್ಣಗೊಳಿಸಿದ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಸ್ಕ್ರೀನ್‌ ಷಾಟ್‌ ಅನ್ನು ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿರುವುದೂ ಗೊತ್ತಾಗಿದೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಲ್ಲಿ ಈಚೆಗೆ ವಿದ್ಯಾರ್ಥಿಗಳೇ ಯುವಕನೊಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉತ್ತರ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ತಲಮಾಕನಹಳ್ಳಿ ಗ್ರಾಮದ ವಿದ್ಯಾರ್ಥಿಯೊಬ್ಬನನ್ನು ಹಣ ಸಂಗ್ರಹಿಸಿಕೊಂಡು ಬರುವಂತೆ ವಿಜಯಪುರಕ್ಕೆ ಕಳಿಸಲಾಗಿತ್ತು. ಪ್ರಕರಣದ ಹಿಂದೆ ಹಲವರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣ ಕೋಲಾರ ಜಿಲ್ಲೆಗೆ ಹಸ್ತಾಂತರ

ವಿಜಯಪುರ/ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಪಾಸ್ ಮಾಡಿಸಿದ ವ್ಯಕ್ತಿಗಳ ಪರವಾಗಿ ಹಣ ಪಡೆಯಲು ಬಂದಿದ್ದ ಯುವಕನೊಬ್ಬನನ್ನು ವಿದ್ಯಾರ್ಥಿಗಳು ಹಿಡಿದು ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಪ್ರಕರಣವನ್ನು ಕೋಲಾರ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿರುವ ವಿಚಾರ ಹಣದ ವರ್ಗಾವಣೆ ಎಲ್ಲವೂ ಕೋಲಾರ ಜಿಲ್ಲಾ ಠಾಣೆಯ ವ್ಯಾಪ್ತಿಯಲ್ಲಿ ನಡೆದಿರುವ ಕಾರಣ ಕೋಲಾರದ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕೋಲಾರ ಪೊಲೀಸರು ಅಧಿಕೃತವಾಗಿ ಪ್ರಕರಣ ಹಸ್ತಾಂತರವಾಗಿರುವ ಮಾಹಿತಿ ತಮಗೆ ಇನ್ನೂ ಬಂದಿಲ್ಲ ಎಂದು ತಿಳಿಸಿದ್ದಾರೆ.

ಯುಯುಸಿಎಂಎಸ್ ಕೆಲಸವೇನು?

ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ದಾಖಲಾತಿ ನಮೂದು ಅಂಕಪಟ್ಟಿ ನಮೂದು ಫಲಿತಾಂಶ ಪ್ರಕಟ ಮಾಡುವ ಕೆಲಸವನ್ನು ಯುಯುಸಿಎಂಎಸ್‌ ತಂತ್ರಾಂಶ ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ಗೆ ಫಲಿತಾಂಶ ಹಾಗೂ ಅಂಕಪಟ್ಟಿ ಅಪ್‌ಲೋಡ್‌ ಮಾಡಲಾಗುತ್ತದೆ. ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳು ಹಾಗೂ ಸ್ವಾಯತ್ತ ಕಾಲೇಜುಗಳು ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಇದೇ ತಂತ್ರಾಂಶ ಬಳಸಿ ನಡೆಸುತ್ತಾರೆ. ಈ ತಂತ್ರಾಂಶದಿಂದ ಡಿಜಿ ಲಾಕರ್‌ಗೆ ಅಂಕಪಟ್ಟಿ ಅಪ್‌ಲೋಡ್‌ ಮಾಡಬಹುದಾಗಿದೆ. ‘ಯುಯುಸಿಎಂಎಸ್‌ ತಂತ್ರಾಂಶ ಅಭಿವೃದ್ಧಿಪಡಿಸಿದ ಮೂಲದಲ್ಲಿಯೇ ವೆಬ್‌ಸೈಟ್‌ ಮೇಲೆ ಸರಿಯಾದ ನಿಯಂತ್ರಣ ಇಲ್ಲ. ಈ ಬಗ್ಗೆ ಹಲವು ಬಾರಿ ದೂರು ನೀಡಲಾಗಿದೆ. ಪಾಸ್‌ವರ್ಡ್‌ ರಿಸೆಟ್‌ ಮಾಡಿ ಬೇರೆ ಕಡೆ ಓಪನ್‌ ಮಾಡಬಹುದು. ಫಲಿತಾಂಶ ಬದಲಾವಣೆ ಮಾಡಬಹುದು’ ಎಂದು ವಿಶ್ವವಿದ್ಯಾಲಯದ ಮಾಜಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ವಿಶ್ವವಿದ್ಯಾಲಯದ ಸಿಬ್ಬಂದಿ ಕೈವಾಡ ಇಲ್ಲದೆ ವೆಬ್‌ಸೈಟ್‌ ಯೂಸರ್‌ ಐಡಿ ಪಾಸ್‌ವರ್ಡ್‌ ಹೊರಗಿನವರ ಕೈಗೆ ಸಿಗಲ್ಲ. ಕುಲಸಚಿವರ ಮೊಬೈಲ್‌ಗೆ ತಂತ್ರಾಂಶ ಲಿಂಕ್‌ ಆಗಿದ್ದು ಓಟಿಪಿ ಹೋಗುತ್ತದೆ’ ಎಂದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ವೆಬ್‌ಸೈಟ್‌ ಹ್ಯಾಕ್‌ ಮಾಡಿ ವಂಚನೆ ಮಾಡುತ್ತಿರುವ ಬಗ್ಗೆ ದೂರು ದಾಖಲಾಗಿದೆ. ಈ ಸಂಬಂಧ ತನಿಖೆ ನಡೆಸುತ್ತಿದ್ದೇವೆ..
–ನಿಖಿಲ್‌ ಬಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೋಲಾರ
ಬೇರೆ ವಿ.ವಿಗಳಲ್ಲೂ ಈ ಸಮಸ್ಯೆ ಆಗಿರುವ ಮಾಹಿತಿ ಇದೆ. ದೂರು ನೀಡಿದ್ದು ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಪೊಲೀಸರ ತನಿಖಾ ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ.
–ಪ್ರೊ.ನಿರಂಜನ ವಾನಳ್ಳಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT