ಮಂಗಳವಾರ, ಜುಲೈ 14, 2020
28 °C
ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಹೇಳಿಕೆ

ಹೊಸದಾಗಿ 5 ಪ್ರಕರಣ ಪತ್ತೆ: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜ್ಯದಲ್ಲಿ ಶನಿವಾರ ಒಂದೇ ದಿನ 5 ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಕೋವಿಡ್‌–19 ಕುರಿತು ಇಲ್ಲಿ ಶನಿವಾರ ನಡೆದ ಜಾಗೃತಿ ಸಭೆಯಲ್ಲಿ ಮಾತನಾಡಿ, ‘ಶನಿವಾರ ಹೊಸದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ 1, ಮೈಸೂರಿನಲ್ಲಿ 1 ಹಾಗೂ ಬೆಂಗಳೂರಿನಲ್ಲಿ 3 ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿವೆ’ ಎಂದು ಹೇಳಿದರು.

‘20 ಪ್ರಕರಣಗಳಲ್ಲಿ 5 ಮಂದಿ ಗುಣಮುಖರಾಗಿದ್ದು, ಅವರನ್ನು ವಾರದ ನಂತರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತದೆ. ಕೊರೊನಾ ಸೋಂಕಿನಲ್ಲಿ ಭಾರತವು 2ನೇ ಹಂತದಲ್ಲಿದ್ದು, ಮುಂದಿನ ಹಂತಕ್ಕೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘20 ದಿನಗಳಿಂದ ಹೊರ ದೇಶಗಳಿಂದ ಬಂದವರನ್ನು ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ನಲ್ಲಿ ಇರಿಸಬೇಕು. ಅವರ ಪ್ರವಾಸದ ವಿವರ ಪ್ರಮುಖವಾಗಿದ್ದು, ಈ ಬಗ್ಗೆ ಜಾಗೃತಿ ವಹಿಸಬೇಕು. ಖಾಸಗಿ ವೈದ್ಯಕೀಯ ಕಾಲೇಜಿಗಳಲ್ಲೂ ತುರ್ತು ಪರಿಸ್ಥಿತಿ ನಿರ್ವಹಣೆಗೆ ಬೆಡ್‌ ಕಾದಿರಿಸಬೇಕು. ಪ್ರತಿ ಐಸೋಲೇಷನ್ ಬೆಡ್‌ನ ನಡುವೆ 1.5 ಮೀಟರ್ ಅಂತರವಿರಬೇಕು’ ಎಂದು ಸೂಚಿಸಿದರು.

‘ಅತಿ ಹೆಚ್ಚು ಜನಸಂದಣಿಯಿರುವ ಕಂದಾಯ ಇಲಾಖೆ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ ಹಾಗೂ ನ್ಯಾಯಾಲಯಗಳಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸುವಂತೆ ಆದೇಶಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಸೇವೆ ಮುಂದೂಡಿಕೆ: ‘ಆಸ್ಪತ್ರೆಗಳಲ್ಲಿ ತುರ್ತು ಸೇವೆ ಮಾತ್ರ ನೀಡಬೇಕು. 3 ವಾರದ ನಂತರ ನೀಡಬಹುದಾದ ವೈದ್ಯಕೀಯ ಸೇವೆ ಮುಂದೂಡಬೇಕು. ಬಾರ್ ಮತ್ತು ರೆಸ್ಟೋರೆಂಟ್‌ ಕಡ್ಡಾಯವಾಗಿ ಬಂದ್ ಮಾಡಬೇಕು. ಹೋಟೆಲ್‌ಗಳಲ್ಲಿ ಪಾರ್ಸಲ್ ಸೇವೆ ಮಾತ್ರ ನೀಡಬೇಕು. ಎಲ್ಲರೂ ಮುಖಗವಸು ಧರಿಸುವ ಅಗತ್ಯವಿಲ್ಲ. ರೋಗದ ಲಕ್ಷಣ ಕಂಡು ಬಂದವರು ಹಾಗೂ ಹೊರ ದೇಶದಿಂದ ಬಂದವರು ಮುಖಗವಸು ಧರಿಸಬೇಕು. ಕೋವಿಡ್–19 ದೃಢಪಟ್ಟವರು ಮಾತ್ರ ಎನ್-–95 ಮುಖಗವಸು ಧರಿಸಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು