ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾಲಿಸಿಸ್‌ ತಂತ್ರಜ್ಞರ ಮುಷ್ಕರ: ಚಿಕಿತ್ಸೆಗಾಗಿ ಡಯಾಲಿಸಿಸ್ ರೋಗಿಗಳ ಪರದಾಟ

Published 2 ಡಿಸೆಂಬರ್ 2023, 13:59 IST
Last Updated 2 ಡಿಸೆಂಬರ್ 2023, 13:59 IST
ಅಕ್ಷರ ಗಾತ್ರ

ಕೆಜಿಎಫ್‌: ’ಡಯಾಲಿಸಿಸ್‌ ಸೌಲಭ್ಯ ಎಲ್ಲೂ ಸಿಗುತ್ತಿಲ್ಲ. ಹೇಗಾದರೂ ಮಾಡಿ ಡಯಾಲಿಸಿಸ್‌ ಮಾಡಿ, ಇಲ್ಲವೇ ಇಲ್ಲೇ ಪ್ರಾಣ ಬಿಡುತ್ತೇವೆ’ ಎಂದು ಡಯಾಲಿಸಿಸ್‌ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆ ರೋಗಿಗಳು ಅಂಗಲಾಚುತ್ತಿದ್ದ ದೃಶ್ಯ ಕಂಡು ನೆರೆದಿದ್ದವರ ಕಣ್ಣಂಚಿನಲ್ಲಿ ನೀರು ತುಂಬಿತ್ತು.

ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ತಂತ್ರಜ್ಞರ ಮುಷ್ಕರದಿಂದಾಗಿ ಮೂರು ದಿನಗಳಿಂದ ಡಯಾಲಿಸಿಸ್ ಕೊಠಡಿಗೆ ಬೀಗ ಜಡಿದಿದ್ದು, ಬದಲಿ ವ್ಯವಸ್ಥೆಯಾದರೂ ದೊರಕಬಹುದು ಎಂಬ ಆಸೆಯಿಂದ ಡಯಾಲಿಸಿಸ್‌ ರೋಗಿಗಳು ಮತ್ತು ಅವರ ಸಂಬಂಧಿಗಳು ಶನಿವಾರ ಆಸ್ಪತ್ರೆಯ ಡಯಾಲಿಸಿಸ್‌ ಕೊಠಡಿ ಮುಂಭಾಗದಲ್ಲಿ ಮುಂಜಾನೆಯಿಂದಲೇ ಸೇರಿದ್ದರು.

ಮಧ್ಯಾಹ್ನ ಒಂದು ಗಂಟೆಯಾದರೂ ಕೋಣೆಯ ಬಳಿ ಯಾರೂ ಸುಳಿಯದಿದ್ದಾಗ ರೋಗಿಗಳು ಪರಿತಪಿಸಲಾರಂಭಿಸಿದರು. ಅವರ ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿಯನ್ನು ಭೇಟಿ ಮಾಡಿ ಚಿಕಿತ್ಸೆಗೆ ಏನಾದರೂ ಪರಿಹಾರ ಒದಗಿಸಿ ಎಂದು ಅಂಗಲಾಚುತ್ತಿರುವ ದೃಶ್ಯಗಳು ಕಂಡು ಬಂದವು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರು ಡಯಾಲಿಸಿಸ್ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿದಿನ ಕನಿಷ್ಠ ಹದಿನೈದು ರೋಗಿಗಳಿಗೆ ಡಯಾಲಿಸಿಸ್ ನೀಡಲಾಗುತ್ತಿತ್ತು. ಕೇಂದ್ರವನ್ನು ನಿರ್ವಹಿಸುತ್ತಿದ್ದ ಇಎಸ್‌ಕೆಎಎಜಿ ಸಂಜೀವಿನಿ ಸಂಸ್ಥೆಯ ಐವರು ಸಿಬ್ಬಂದಿಗೆ ಎರಡು ತಿಂಗಳ ನೀಡದೆ, ಎರಡು ವರ್ಷದಿಂದ ಇಎಸ್‌ಐ ಮತ್ತು ಪಿಎಫ್‌ ಹಣ ಬಾಕಿ ಉಳಿಸಿದ್ದು, ಅನುಭವದ ಆಧಾರದ ಮೇಲೆ ಸಂಬಳ ನಿಗದಿ ಮಾಡಿಲ್ಲ ಎಂಬ ಕಾರಣಕ್ಕಾಗಿ ಮುಷ್ಕರ ನಡೆಸಲಾಗುತ್ತಿದೆ ಎಂದು ಸಂಸ್ಥೆಯ ಐವರು ಸಿಬ್ಬಂದಿ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಪತ್ರ ಬರೆದು ಕೆಲಸಕ್ಕೆ ಗೈರು ಹಾಜರಾಗಿದ್ದಾರೆ. 

ಬದಲಿ ವ್ಯವಸ್ಥೆ ಮಾಡುವವರಿಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ರೋಗಿಗಳು ಮತ್ತು ಅವರ ಸಂಬಂಧಿಕರು ಪಟ್ಟು ಹಿಡಿದಾಗ, ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್‌ ಅವರೊಂದಿಗೆ ಮಾತನಾಡಿದರು. ಡಯಾಲಿಸಿಸ್‌ ಮಾಡುವವರು ತರಬೇತಿ ಹೊಂದಿದವರಾಗಿರಬೇಕು. ನಮ್ಮ ಆಸ್ಪತ್ರೆಯ ನರ್ಸ್‌ಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ತರಬೇತಿ ಪಡೆದಿಲ್ಲ. ಯಂತ್ರಗಳನ್ನು ಬಳಸುವ ಬಗೆಯನ್ನು ತಿಳಿದಿಲ್ಲ. ಈ ನಿಟ್ಟಿನಲ್ಲಿ ಅಸಹಾಯಕನಾಗಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡುತ್ತೇನೆ ಎಂದು ತಿಳಿಸಿದರು.

ನೆರೆಯ ಆಂಧ್ರದ ಕುಪ್ಪಂ ಪಿಇಎಸ್‌ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಸ್ಲಾಟ್ ಸಿಗುತ್ತಿಲ್ಲ. ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಕೂಡ ಚಿಕಿತ್ಸೆ ದೊರೆಯುತ್ತಿಲ್ಲ.  ಜಾಲಪ್ಪ ಆಸ್ಪತ್ರೆಯಲ್ಲಿ ಒಮ್ಮೆ ಡಯಾಲಿಸಿಸ್‌ ಮಾಡಿಸಲು ₹16 ಸಾವಿರ ಖರ್ಚಾಗುತ್ತೆ, ಅಷ್ಟೊಂದು ದುಡ್ಡು ಕೊಟ್ಟು ಡಯಾಲಿಸಿಸ್ ಮಾಡುವ ಆರ್ಥಿಕ ಸಾಮರ್ಥ್ಯ ನಮ್ಮಲ್ಲಿ ಇಲ್ಲ. ಮೂರು ದಿನಗಳಿಂದ ಡಯಾಲಿಸಿಸ್ ಸಿಗದೆ ರೋಗಿಗಳು ಸಾವನ್ನಪ್ಪುವ ಭೀತಿ ನಿರ್ಮಾಣವಾಗಿದೆ. ಹೇಗಾದರೂ ಮಾಡಿ ನಮ್ಮವರನ್ನು ಉಳಿಸಿಕೊಡಿ ಎಂದು ರೋಗಿಗಳ ಕುಟುಂಬದವರು ಅಂಗಲಾಚಿದರೂ, ಜಿಲ್ಲಾ ಶಸ್ತ್ರ ಚಿಕಿತ್ಸಕರು ನಿರುತ್ತರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT