ಸೋಮವಾರ, ಆಗಸ್ಟ್ 8, 2022
23 °C
ಮೊಟ್ಟೆ ಪ್ರಿಯರಿಗೆ ತಟ್ಟಿದ ಬೆಲೆ ಏರಿಕೆ ಕಾವು

ಕೋಳಿ ಮೊಟ್ಟೆ ದರ ದಾಖಲೆ ಏರಿಕೆ: ಕುಕ್ಕುಟ ಉದ್ಯಮಿಗಳಿಗೆ ಸಂತಸ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆ ದರವು ದಾಖಲೆಯ ಏರಿಕೆ ಕಂಡಿದ್ದು, ಕುಕ್ಕುಟ ಉದ್ಯಮಿಗಳ ಮೊಗದಲ್ಲಿ ಸಂತಸ ಮೂಡಿದೆ. ಮೊಟ್ಟೆ ಜತೆಗೆ ಕೋಳಿ ಮಾಂಸದ ಬೆಲೆಯು ಏರು ಗತಿಯಲ್ಲಿ ಸಾಗಿದ್ದು, ಮೊಟ್ಟೆ ಹಾಗೂ ಮಾಂಸ ಪ್ರಿಯರಿಗೆ ದರ ಏರಿಕೆ ಬಿಸಿ ತಟ್ಟಿದೆ.

10 ದಿನಗಳಿಂದ ಮೊಟ್ಟೆ ಬೆಲೆ ಹೆಚ್ಚುತ್ತಲೇ ಇದ್ದು, ಬೇಕರಿ, ಹೋಟೆಲ್‌, ಡಾಬಾ ಹಾಗೂ ಚಿಲ್ಲರೆ ಅಂಗಡಿ ಮಾಲೀಕರು ತತ್ತರಿಸಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಆಗಸ್ಟ್‌ನಲ್ಲಿ 100 ಮೊಟ್ಟೆಗಳ ಸಗಟು ದರ ₹ 380 ಇತ್ತು. ಈಗ ₹ 600 ಇದೆ. ಈ ಹಿಂದೆ ₹ 3.80 ಇದ್ದ ಪ್ರತಿ ಮೊಟ್ಟೆಯ ಚಿಲ್ಲರೆ ಮಾರಾಟ ದರ ಈಗ ₹ 6ಕ್ಕೆ ಏರಿದೆ. ಅದೇ ರೀತಿ ಕೋಳಿ ಮಾಂಸದ ಬೆಲೆ ಕೆ.ಜಿಗೆ ₹ 130ರಿಂದ ₹ 240ಕ್ಕೆ ಜಿಗಿದಿದೆ.

ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಎಲ್ಲೆಡೆ ತರಕಾರಿ ಮತ್ತು ಸೊಪ್ಪಿನ ಬೆಳೆಗಳು ನೆಲ ಕಚ್ಚಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಸೊಪ್ಪುಗಳ ಆವಕ ಕುಸಿದು ಬೆಲೆ ಗಗನಮುಖಿಯಾಗಿದ್ದು, ಮಾಂಸಹಾರಿಗಳು ಮೊಟ್ಟೆ ಮತ್ತು ಕೋಳಿ ಮಾಂಸದತ್ತ ಮುಖ ಮಾಡಿದ್ದಾರೆ. ಇದರಿಂದ ಸಹಜವಾಗಿಯೇ ಮೊಟ್ಟೆ ಮತ್ತು ಮಾಂಸಕ್ಕೆ ಬೇಡಿಕೆ ಹೆಚ್ಚಿದೆ.

ಕಾರ್ತಿಕ ಮತ್ತು ಶ್ರಾವಣ ಮಾಸವಾದ ನವೆಂಬರ್‌ನಲ್ಲಿ ಮೊಟ್ಟೆ ಮತ್ತು ಮಾಂಸದ ಬಳಕೆ ಕಡಿಮೆ ಇರುತ್ತದೆ. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಮೊಟ್ಟೆ ಮತ್ತು ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚುತ್ತದೆ. ಆದರೆ, ಈಗ ಸೊಪ್ಪು ಮತ್ತು ತರಕಾರಿಗಳು ತುಟ್ಟಿಯಾಗಿರುವುದರಿಂದ ಮಾಂಸಹಾರಿಗಳು ಮೊಟ್ಟೆ ಮತ್ತು ಮಾಂಸ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಉತ್ಪಾದನೆ ಕಡಿಮೆ: ಜಿಲ್ಲೆಯಲ್ಲಿ 611 ನೊಂದಾಯಿತ ಕೋಳಿ ಫಾರಂಗಳಿದ್ದು, ಬ್ರಾಯ್ಲರ್‌ (ಮಾಂಸದ ಉದ್ದೇಶದ್ದು) ಮತ್ತು ಲೇಯರ್‌ (ಮೊಟ್ಟೆಯ ಉದ್ದೇಶದ್ದು) ಕೋಳಿಗಳನ್ನು ಪ್ರಮುಖವಾಗಿ ಸಾಕಲಾಗುತ್ತಿದೆ. ಜಿಲ್ಲಾ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರದ ಮಾಹಿತಿ ಪ್ರಕಾರ ಜಿಲ್ಲೆಯ ಫಾರಂಗಳಲ್ಲಿ ಸುಮಾರು 19.98 ಲಕ್ಷ ಬ್ರಾಯ್ಲರ್‌ ಕೋಳಿ ಹಾಗೂ 35.95 ಲಕ್ಷ ಲೇಯರ್‌ ಕೋಳಿಗಳಿವೆ. ಕೆಲವೆಡೆ ಅಲ್ಪ ಪ್ರಮಾಣದಲ್ಲಿ ನಾಟಿ ಕೋಳಿಗಳನ್ನು ಸಾಕಲಾಗಿದೆ.

ಜಿಲ್ಲೆಯ ಬೇಡಿಕೆಗೆ ಹೋಲಿಸಿದರೆ ಕೋಳಿ ಮೊಟ್ಟೆ ಮತ್ತು ಮಾಂಸದ ಉತ್ಪಾದನೆ ಕಡಿಮೆ ಇದೆ. ಹೀಗಾಗಿ ತಮಿಳುನಾಡಿನ ನಾಮಕ್ಕಲ್‌, ಕರೂರು, ಕೃಷ್ಣಗಿರಿ ಮತ್ತು ಆಂಧ್ರಪ್ರದೇಶದಿಂದ ಜಿಲ್ಲೆಗೆ ಮೊಟ್ಟೆ ಮತ್ತು ಮಾಂಸವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಲಾಕ್‌ಡೌನ್‌ ಎಫೆಕ್ಟ್‌: ಕೋವಿಡ್‌–19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಯಾದ ವೇಳೆ ಸರಕು ಸಾಗಣೆ ವಾಹನ ಸೇವೆಯಲ್ಲಿ ವ್ಯತ್ಯಯವಾಯಿತು. ಇದರಿಂದ ಕೋಳಿ ಆಹಾರ ಪೂರೈಕೆ ಸ್ಥಗಿತಗೊಂಡಿತು. ಮತ್ತೊಂದೆಡೆ ಕೋಳಿ ಮಾಂಸ ಮತ್ತು ಮೊಟ್ಟೆ ಬೆಲೆ ಏಕಾಏಕಿ ಪಾತಾಳಕ್ಕೆ ಕುಸಿದಿತ್ತು. ಮೇವಿನ ಕೊರತೆ ಮತ್ತು ಬೆಲೆ ಕುಸಿತದ ಕಾರಣಕ್ಕೆ ಸಾಕಷ್ಟು ಫಾರಂ ಮಾಲೀಕರು ಕೋಳಿಗಳನ್ನು ಜೀವಂತ ಸಮಾಧಿ ಮಾಡಿದರು. ಹಲವೆಡೆ ಆಹಾರವಿಲ್ಲದೆ ಕೋಳಿಗಳು ಫಾರಂನಲ್ಲೇ ಮೃತಪಟ್ಟವು.

ಸಾಮಾನ್ಯವಾಗಿ ಲೇಯರ್‌ (ಮೊಟ್ಟೆ) ಕೋಳಿಗಳು ಬೆಳೆದು ಮೊಟ್ಟೆಯಿಡಲು 22 ವಾರದಿಂದ 23 ವಾರ ಕಾಲಾವಕಾಶ ಬೇಕು. ಲಾಕ್‌ಡೌನ್‌ ಅವಧಿಯಲ್ಲಿ ಕೋಳಿಗಳನ್ನು ಸಾಯಿಸಿದ್ದರಿಂದ ಇದೀಗ ಕೋಳಿ ಹಾಗೂ ಮೊಟ್ಟೆ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಮತ್ತೊಂದೆಡೆ ಕೋಳಿ ಮಾಂಸದ ಬೆಲೆ ನಿರೀಕ್ಷೆಗೂ ಮೀರಿ ಏರಿಕೆಯಾಗಿರುವುದರಿಂದ ಫಾರಂ ಮಾಲೀಕರು ಮೊಟ್ಟೆ ಕೋಳಿಗಳನ್ನೇ ಮಾರಾಟ ಮಾಡುತ್ತಿದ್ದು, ಮೊಟ್ಟೆ ಉತ್ಪಾದನೆ ಕುಸಿದಿದೆ.

ಮಾಲೀಕರಿಗೆ ಹೊರೆ: ಮಾಂಸಹಾರಿ ಹೋಟೆಲ್‌ ಮತ್ತು ಡಾಬಾಗಳಲ್ಲಿ ಎಗ್‌ ರೈಸ್, ಆಮ್ಲೆಟ್, ಎಗ್‌ ರೋಲ್‌, ಎಗ್‌ ಬುರ್ಜಿ ಸೇರಿದಂತೆ ವಿವಿಧ ಖಾದ್ಯಗಳಿಗೆ ಮೊಟ್ಟೆಯನ್ನು ಬಳಸಲಾಗುತ್ತದೆ. ಅದೇ ರೀತಿ ಬೇಕರಿಗಳಲ್ಲಿ ಎಗ್‌ ಪಪ್ಸ್‌ ಮತ್ತು ಕೇಕ್‌ ತಯಾರಿಕೆಗೆ ಮೊಟ್ಟೆ ಬೇಕೇಬೇಕು.

ಮೊಟ್ಟೆ ದರ ಏರಿಕೆಯಾಗಿರುವುದರಿಂದ ಹೋಟೆಲ್‌, ಡಾಬಾ ಮತ್ತು ಬೇಕರಿ ಮಾಲೀಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬಿದ್ದಿದೆ. ಈ ಕಾರಣಕ್ಕೆ ತಿಂಡಿ ತಿನಿಸುಗಳ ಬೆಲೆ ಏರಿಕೆ ಮಾಡಿದರೆ ವಹಿವಾಟು ಕುಸಿಯುವ ಸಾಧ್ಯತೆ ಇರುವುದರಿಂದ ಮಾಲೀಕರು ಬೆಲೆ ಪರಿಷ್ಕರಣೆ ಮಾಡಿಲ್ಲ. ಬೆಲೆ ಇಳಿಯಬಹುದೆಂಬ ನಿರೀಕ್ಷೆಯಲ್ಲೇ ವಹಿವಾಟು ಮುಂದುವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು