ಬುಧವಾರ, ಫೆಬ್ರವರಿ 19, 2020
24 °C

ದ್ವಿದಳ ಧಾನ್ಯ ಉತ್ಪಾದನೆಗೆ ಒತ್ತು ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರೈತರು ದ್ವಿದಳ ಧಾನ್ಯ ಉತ್ಪಾದನೆಗೆ ಒತ್ತು ನೀಡಿದರೆ ಆರ್ಥಿಕ ಲಾಭಗಳಿಸಲು ಸಹಕಾರಿಯಾಗುತ್ತದೆ’ ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ನಯಿಮ್ ಪಾಷ ತಿಳಿಸಿದರು.

ನಗರದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಕೃಷಿ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ದ್ವಿದಳ ಧಾನ್ಯಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ‘ಆಹಾರದ ಸಮತೋಲನೆ ಕಾಪಾಡುವ ಉದ್ದೇಶದಿಂದ ರೈತರು ದ್ವಿದಳ ಧಾನ್ಯ ಉತ್ಪಾದನೆಗೆ ಒತ್ತು ನೀಡಬೇಕು’ ಎಂದರು.

‘ಮಾರುಕಟ್ಟೆಯಲ್ಲಿ ಕಡಲೆ, ಒಣ ಬೀನ್ಸ್, ಬಟಾಣಿ ಮತ್ತು ಲುಪಿನ್‌ನ್ನು ಜಾಗತಿಕ ಆಹಾರವಾಗಿ ವಿಶ್ವ ಸಂಸ್ಥೆ ಗುರುತಿಸಿದೆ. ಇದನ್ನು 2019ರಿಂದ ಪ್ರತಿ ವರ್ಷ ಫೆ.10ರಂದು ಆಚರಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ಕಡಿಮೆ ಮಳೆಯಾಗುತ್ತಿದ್ದು, ಭೂಮಿಯಲ್ಲಿ ತೇವಾಂಶ ಇಲ್ಲದಂತಾಗಿದೆ. ಬರಗಾಲ, ಕೀಟ ರೋಗದ ಬಾಧೆಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ಆದರೆ ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಕೀಟ ರೋಗದ ಹಾವಳಿ ಕಡಿಮೆ ಇರುವುದರಿಂದ ಕಡಿಮೆ ವೆಚ್ಚ ಮಾಡಿ ಹೆಚ್ಚಿನ ಆದಾಯ ಪಡೆಯಬಹುದು’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ತರಕಾರಿ, ರಾಗಿ ಇತ್ಯಾದಿಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ದ್ವಿದಳ ಧಾನ್ಯ ಬೆಳೆಯುವವರ ಸಂಖ್ಯೆ ಕಡಿಮೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರೆ ರೈತರ ಆದಾಯ ವೃದ್ಧಿಯಾಗುತ್ತದೆ. ರೈತರು ಬೆಳೆಯುವ ದ್ವಿತಳಿ ಬಿತ್ತನೆ ಬೀಜಗಳನ್ನು ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಪಡೆದುಕೊಳ್ಳಬಹುದು’ ಎಂದು ಹೇಳಿದರು.

ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಬಿ.ಜಿ.ಪ್ರಕಾಶ್ ಮಾತನಾಡಿ, ‘ರಾಗಿ, ಗೋಧಿ, ಭತ್ತ ಸೇವನೆಯಿಂದ ಸಾಕಷ್ಟು ಪೋಷಕಾಂಶ ದೊರೆಯುವುದಿಲ್ಲ. ಸಲ್ಫರ್, ಜಿಂಕ್ ಅಂಶಗಳು ದ್ವಿದಳ ಧಾನ್ಯಗಳಲ್ಲಿ ಇರುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ತಿಳಿಸಿದರು.

‘ಹಸಿರು ಕ್ರಾಂತಿಯಿಂದ ಏಕದಳದ ಉತ್ಪಾದನೆ ಹೆಚ್ಚಾಗಿದ್ದು, ದ್ವಿದಳ ಧಾನ್ಯಗಳ ಉತ್ಪಾದನೆ ಕಡಿಮೆಯಾಗಿದೆ. ಇದರಿಂದಾಗಿ ರೈತರು ಜಾಗೃತರಾಗಿ ದ್ವಿದಳ ಧಾನ್ಯಗಳ ಉತ್ಪಾದನೆಗೆ ಹೆಚ್ಚು ಮಹತ್ವ ಕೊಡಬೇಕು’ ಎಂದು ಸಲಹೆ ನೀಡಿದರು.

ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಬಿ.ಟಿ.ಬಸವರಾಜು, ನಬಾರ್ಡ್ ವೃತ್ತ ಮಹಾಪ್ರಬಂಧಕ ಹುಲಗೂರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೆ.ತುಳಸಿರಾಮ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಸುಗುಟೂರು ಕೃಷಿ ಅಧಿಕಾರಿ ಸುನಿಲ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು