ಗುರುವಾರ , ಅಕ್ಟೋಬರ್ 29, 2020
26 °C

ಅಬಕಾರಿ ತೆರಿಗೆ ಸಂಗ್ರಹ: ಜಿಲ್ಲೆ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜ್ಯದಲ್ಲಿ ಜಿಲ್ಲೆಯು ಮದ್ಯದ ವಹಿವಾಟು ಮತ್ತು ಅಬಕಾರಿ ತೆರಿಗೆ ಗುರಿ ಸಾಧನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ’ ಎಂದು ಅಬಕಾರಿ ಇಲಾಖೆ ಜಂಟಿ ಆಯುಕ್ತ ಎಫ್‌.ಎಚ್‌.ಚಲಪತಿ ತಿಳಿಸಿದರು.

ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಮದ್ಯದಂಗಡಿ ಮಾಲೀಕರ ಜತೆ ಇಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಕೋವಿಡ್‌–19 ಮತ್ತು ಲಾಕ್‌ಡೌನ್‌ ಕಾರಣಕ್ಕೆ ರಾಜ್ಯದೆಲ್ಲೆಡೆ ಮದ್ಯದ ವಹಿವಾಟು ಕುಸಿದಿದೆ. ಆದರೆ, ಜಿಲ್ಲೆಯಲ್ಲಿ ವಹಿವಾಟು ಚೆನ್ನಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಪ್ರಸಕ್ತ ಅಬಕಾರಿ ವರ್ಷದಲ್ಲಿ ₹ 70 ಸಾವಿರ ಕೋಟಿ ಅಬಕಾರಿ ತೆರಿಗೆ ಸಂಗ್ರಹಣೆ ಗುರಿಯಿದೆ. ಲಾಕ್‌ಡೌನ್‌ ತೆರವು ಬಳಿಕ ದಿನದಿಂದ ದಿನಕ್ಕೆ ಮದ್ಯದ ವಹಿವಾಟು ಸುಧಾರಿಸುತ್ತಿದ್ದು, ಶೇ 65ರಷ್ಟು ವಹಿವಾಟು ನಡೆಯುತ್ತಿದೆ. ಖಂಡಿತ ತೆರಿಗೆ ಸಂಗ್ರಹಣೆ ಗುರಿ ಸಾಧನೆಯಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೋವಿಡ್‌–19 ಮದ್ಯದಂಗಡಿಗಳಲ್ಲಿ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ ಮತ್ತು ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಮದ್ಯದಂಗಡಿಗಳಿಗೆ ನಿಯಮಿತವಾಗಿ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.

‘ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಉತ್ಪಾದನೆ ಮಾಡುವ ಮದ್ಯದ ಗುಣಮಟ್ಟ ಚೆನ್ನಾಗಿದೆ. ಗೋವಾ, ಪುದುಚೆರಿ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಉತ್ಪಾದಿಸುವ ಮದ್ಯಕ್ಕಿಂತ ಕರ್ನಾಟಕದ ಮದ್ಯ ಗುಣಮಟ್ಟದಿಂದ ಕೊಡಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗಡಿ ಭಾಗದ ಗ್ರಾಮಗಳ ದಿನಸಿ ಅಂಗಡಿಗಳಲ್ಲಿ ನಿಯಮಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಸದ್ಯದಲ್ಲೇ ಶ್ರೀನಿವಾಸಪುರ ತಾಲ್ಲೂಕಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ. ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿರುವುದು ಸಾಬೀತಾದರೆ ಸಂಬಂಧ ಮದ್ಯದಂಗಡಿ ಮಾಲೀಕರ ಪರವಾನಗಿ ರದ್ದುಪಡಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಅಬಕಾರಿ ಇಲಾಖೆ ಉಪ ಆಯುಕ್ತ ವಿ.ರವಿಶಂಕರ್‌, ಡೆಪ್ಯೂಟಿ ಸೂಪರಿಂಟೆಂಡೆಂಟ್‌ ನಟರಾಜ್‌ ಹಾಗೂ ಮದ್ಯದಂಗಡಿ ಮಾಲೀಕರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು