ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಗಡಿಯಲ್ಲಿ ಆರೋಗ್ಯ ತಪಾಸಣೆ ಕೇಂದ್ರ, ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

Last Updated 17 ಮಾರ್ಚ್ 2020, 13:13 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್‌–19 ಆತಂಕದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಗಡಿ ಭಾಗದಲ್ಲಿ ಆರೋಗ್ಯ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಜಿಲ್ಲೆಗೆ ಬರುವ ವ್ಯಕ್ತಿಗಳ ಆರೋಗ್ಯ ತಪಾಸಣೆಗೆ ಮಾಡಲಾಗುತ್ತದೆ. ವಲಸೆ ವ್ಯಕ್ತಿಗಳಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದರೆ ಆರೋಗ್ಯ ಕೇಂದ್ರಗಳಲ್ಲಿ ಅವರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುತ್ತದೆ’ ಎಂದು ಹೇಳಿದರು.

‘ಕಫಾ ಮತ್ತು ರಕ್ತದ ಮಾದರಿಯ ವರದಿ ಬರುವವರೆಗೂ ಅಂತಹ ತನಕ ವ್ಯಕ್ತಿಗಳನ್ನು ಆಸ್ಪತ್ರೆಗಳ ನಿಗಾ ಘಟಕದಲ್ಲಿ ಇರಿಸಲಾಗುತ್ತದೆ. ಯಾವುದೇ ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟ ನಂತರ ವ್ಯಕ್ತಿಗಳನ್ನು ಮನೆಗೆ ಕಳುಹಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯ ನಂಗಲಿ, ರಾಯಲ್ಪಾಡು, ಮಾಲೂರು ಸೇರಿದಂತೆ ಗಡಿ ಭಾಗಗಳ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಒಳಗೊಂಡ ತಂಡ ರಚಿಸಿ ಆರೋಗ್ಯ ಕೇಂದ್ರಗಳಲ್ಲಿ ವಲಸೆ ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

ಮುಖಗವಸು ಧರಿಸಿ: ‘ಕೊರೊನಾ ಸೋಂಕಿನ ಅರಿವು ಪಡೆದ ಜನರು ಸಭೆ ಸಮಾರಂಭಗಳಲ್ಲಿ ಗುಂಪಾಗಿ ಸೇರುವುದನ್ನು ಬಿಡಬೇಕು. ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವವರು ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಮದುವೆ, ಗೃಹಪ್ರವೇಶ, ಬೀಗರ ಔತಣ ಕೂಟ, ನಾಮಕರಣ ಸೇರಿದಂತೆ ಶುಭ ಸಮಾರಂಭಗಳಿದ್ದರೆ ಪರಿಸ್ಥಿತಿಯ ಗಂಭೀರತೆ ಅರಿತು ಮುಂದೂಡಬೇಕು’ ಎಂದು ಮನವಿ ಮಾಡಿದರು.

‘ವಿದೇಶಕ್ಕೆ ಹೋಗಿ ಬಂದವರ ಬಗ್ಗೆ ಕುಟುಂಬ ಸದಸ್ಯರು ಅಥವಾ ನೆರೆಹೊರೆಯವರು ಮಾಹಿತಿ ಕೊಡಬೇಕು. ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದನ್ನು ನಿಯಂತ್ರಿಸಬೇಕು. ಸಾಮೂಹಿಕ ಪ್ರಾರ್ಥನೆಗೆ ಸ್ವಯಂಪ್ರೇರಿತರಾಗಿ ಕಡಿವಾಣ ಹಾಕಬೇಕು’ ಎಂದು ಹೇಳಿದರು.

‘ಸಾಂಕ್ರಾಮಿಕ ರೋಗ ಇರುವವರು, ಕೆಮ್ಮು, ಶೀತ ಮತ್ತು ಜ್ವರದಿಂದ ಬಳಲುತ್ತಿರುವವರು ಮುಖಗವಸು ಹಾಕಿಕೊಳ್ಳಬೇಕು. ಹೊರಗಡೆ ಎಲ್ಲೂ ಓಡಾಡದೆ ಮನೆಗಳಲ್ಲೇ ವಿಶ್ರಾಂತಿ ಪಡೆಯಬೇಕು. ಕಾಲಕಾಲಕ್ಕೆ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ನಿಷೇಧಾಜ್ಞೆ: ‘ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜನರ ಗುಂಪುಗೂಡುವಿಕೆ ತಡೆಯಲು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹಕರಿಸಬೇಕು’ ಎಂದು ಕೋರಿದರು.

‘ಕೊರೊನಾ ಸೋಂಕು ತಡೆಗೆ ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಡಿಯೋ ಸಂವಾದದಲ್ಲಿ ಮಾಹಿತಿ ನೀಡಲಾಗಿದೆ. ಜಿಲ್ಲೆಯಲ್ಲಿ ಸ್ವಚ್ಛ ದಿನ ಆಚರಣೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ತಿಂಗಳಲ್ಲಿ ಪ್ರತಿ 2 ಶನಿವಾರ ಸ್ವಚ್ಛ ದಿನ ಆಚರಣೆ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT