ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಅಭಿವೃದ್ಧಿಗೆ ಜೇನು ಸಾಕಣೆ ಪೂರಕ

ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಪ್ರಕಾಶ್ ಸಲಹೆ
Last Updated 21 ಮೇ 2020, 11:48 IST
ಅಕ್ಷರ ಗಾತ್ರ

ಕೋಲಾರ: ‘ರೈತರು ಕೃಷಿ ಅಥವಾ ತೋಟಗಾರಿಕೆ ಬೆಳೆಗಳ ಜತೆಗೆ ಆರ್ಥಿಕಾಭಿವೃದ್ಧಿಗೆ ಪೂರಕವಾದ ಜೇನು ಸಾಕಣೆ ಮಾಡಬೇಕು’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಬಿ.ಜಿ.ಪ್ರಕಾಶ್ ಸಲಹೆ ನೀಡಿದರು.

ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಜೇನು ನೊಣಗಳ ಪಾತ್ರ ವಿಷಯ ಕುರಿತು ರೈತರಿಗೆ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆನ್‌ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದ ಕಾರಣ ರೈತರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಬದಲಾಗುತ್ತಿರುವ ವಾತಾವರಣದಿಂದ ಬೆಳೆ ಕೈ ಕೊಡುತ್ತಿದೆ. ನೀರಿನ ಅಭಾವದಿಂದ ಜಿಲ್ಲೆಯಲ್ಲಿ ತೋಟಗಾರಿಕೆ, ಕೃಷಿ ಚಟುವಟಿಕೆ ನಿರ್ವಹಣೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ರೈತರು ಮನೆಯಂಗಳ ಹಾಗೂ ತೋಟದಲ್ಲಿ ಜೇನು ಸಾಕಾಣಿಕೆ ಮಾಡಿ ಆದಾಯ ಗಳಿಸಬಹುದು’ ಎಂದು ಕಿವಿಮಾತು ಹೇಳಿದರು.

‘ಜೇನು ಸಾಕಾಣಿಕೆಯಿಂದ ಪರಾಗ ಸ್ಪರ್ಶ ಹೆಚ್ಚಿ ಬೆಳೆಗಳ ಉತ್ಪಾದನೆ ಹೆಚ್ಚುತ್ತದೆ. ಜೇನು ಕೃಷಿಗೆ ಬೇರೆ ಬೆಳೆಗಳಂತೆ ಹೆಚ್ಚು ಶ್ರಮ ಮತ್ತು ಬಂಡವಾಳ ಬೇಕಿಲ್ಲ. ರೈತರು ಬಿಡುವಿನ ವೇಳೆಯಲ್ಲಿ ಜೇನು ಪೋಷಣೆ ಮಾಡಿಕೊಂಡು ಹೆಚ್ಚು ಲಾಭ ಗಳಿಸಬಹುದು’ ಎಂದು ತಿಳಿಸಿದರು.

ಪರಾಗ ಸ್ಪರ್ಶ: ‘ತೋಟಗಾರಿಕೆ ಬೆಳೆಗಳಲ್ಲಿ ಶೇ 80ರಷ್ಟು ಬೆಳೆಗಳು ಪರಾಗ ಸ್ಪರ್ಶದಿಂದ ಇಳುವರಿ ಕೊಡುತ್ತವೆ. ಜೇನು ನೊಣಗಳಿಂದಾಗುವ ಪರಾಗ ಸ್ಪರ್ಶ ನಿರ್ಣಾಯಕ. ಗುಣಮಟ್ಟದ ಹಣ್ಣು ಪಡೆಯಲು, ಬೀಜದ ಮೊಳಕೆ ವೃದ್ಧಿಸಲು, ಬದಲಾಗುತ್ತಿರುವ ವಾತಾವರಣಕ್ಕೆ ಹೊಂದಿಕೊಂಡು ಇಳುವರಿ ಹೆಚ್ಚಿಸಲು ಪರಾಗ ಸ್ಪರ್ಶ ಸಹಕಾರಿ’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಶ್ವತ್ಥ ನಾರಾಯಣರೆಡ್ಡಿ ವಿವರಿಸಿದರು.

‘ತರಕಾರಿ ಬೆಳೆಗಳಾದ ಟೊಮೆಟೊ, ಹಾಗಲಕಾಯಿ, ಸೌತೆ, ಕುಂಬಳ ಮತ್ತು ಸೀಮೆ ಬದನೆಯಲ್ಲಿ ಜೇನು ಕೃಷಿಯಿಂದ ಶೇ 30ರಷ್ಟು ಇಳುವರಿ ಪಡೆಯಬಹುದು. ದ್ರಾಕ್ಷಿ ಮತ್ತು ನಿಂಬೆ ಜಾತಿಯ ಬೆಳೆಗಳಲ್ಲಿ ಶೇ 40ರಷ್ಟು ಇಳುವರಿ ಹೆಚ್ಚಿಸಬಹುದು. ಕುಂಬಳ ಜಾತಿಯ ಗಿಡಗಳಲ್ಲಿ ಎಕರೆಗೆ 5 ಜೇನು ಪೆಟ್ಟಿಗೆ ಮತ್ತು ಹಣ್ಣಿನ ಬೆಳೆಗಳಾದ ಮಾವು, ಸೀಬೆ ಮತ್ತು ಪಪ್ಪಾಯದಲ್ಲಿ ಎಕರೆಗೆ 2 ಜೇನು ಪೆಟ್ಟಿಗೆ ಸಾಕಾಗುತ್ತದೆ’ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಆದಾಯ: ‘ತುಡುವೆ ಜೇನಿನಿಂದ ಆಯಾ ಪ್ರದೇಶಕ್ಕೆ ಅನುಗುಣವಾಗಿ ಜೇನು ಇಳುವರಿ 25 ಕಿಲೋ ಗ್ರಾಂ ಹಾಗೂ ಯುರೋಪಿಯನ್ ಜೇನಿನಿಂದ 35 ಕಿ.ಗ್ರಾಂ ಇಳುವರಿ ದೊರೆಯುತ್ತದೆ. ಪರೋಕ್ಷವಾಗಿ ಪರಾಗ ಸ್ಪರ್ಶ ಕ್ರಿಯೆಯಿಂದ ಬೆಳೆಗಳಲ್ಲಿ ಇಳುವರಿ ಹೆಚ್ಚಿ ರೈತರಿಗೆ ಹೆಚ್ಚಿನ ನಿವ್ವಳ ಆದಾಯ ಬರುತ್ತದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಕೆ.ಎಸ್‌.ನಾಗರಾಜ್ ಹೇಳಿದರು.

ಸಾವಯವ ಕೃಷಿಕರಾದ ಧರ್ಮಲಿಂಗಂ, ನೆನಮನಹಳ್ಳಿ ಚಂದ್ರಶೇಖರ್, ನೀಲಟೂರು ಚಂದ್ರಶೇಖರ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಿ.ಎಸ್‌.ಅಂಬಿಕಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT