ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿನ್ನರ ಲೋಕ ಸೃಷ್ಟಿ: ಡಿಡಿಪಿಐ ರತ್ನಯ್ಯ

Last Updated 7 ಫೆಬ್ರುವರಿ 2020, 15:05 IST
ಅಕ್ಷರ ಗಾತ್ರ

ಕೋಲಾರ: ‘ಪ್ರತಿಭಾ ಕಾರಂಜಿ ಸ್ಪರ್ಧೆಯು ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದ್ದು, ನಾಟಕ, ನೃತ್ಯ, ಭಾಷಣ ಮತ್ತಿತರ ಕಲೆ ಪ್ರದರ್ಶಿಸಿದ ಮಕ್ಕಳ ಸಾಧನೆ ಅದ್ಭುತವಾಗಿ ಅನಾವರಣಗೊಂಡು ಕಿನ್ನರ ಲೋಕವೇ ಸೃಷ್ಟಿಯಾಯಿತು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕೆ.ರತ್ನಯ್ಯ ಸಂತಸ ವ್ಯಕ್ತಪಡಿಸಿದರು.

ಇಲ್ಲಿ ಶುಕ್ರವಾರ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ‘ಮಕ್ಕಳು ಪ್ರತಿಭಾ ಪ್ರದರ್ಶನದಲ್ಲಿ ಒಬ್ಬರಿಗಿಂತ ಒಬ್ಬರು ಮೇಲು ಎಂಬಂತೆ ಪ್ರತಿಭೆ ಪ್ರದರ್ಶಿಸಿದರು. ಮಕ್ಕಳ ಸಂಭ್ರಮವು ಅತ್ಯಂತ ಮಧುರ ಕ್ಷಣ’ ಎಂದು ಹೇಳಿದರು.

‘ಕೋಲಾರ ಜಿಲ್ಲೆಗೆ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಸಲು ಅವಕಾಶ ನೀಡಿದಾಗ ಸ್ವಲ್ಪ ಆತಂಕವಾಯಿತು. ಆದರೆ, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೇ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು. ಇದಕ್ಕೆ ಎಲ್ಲಾ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದರು’ ಎಂದು ಸ್ಮರಿಸಿದರು.

‘ಮಕ್ಕಳಿಗೆ ವಸತಿ ಸೌಲಭ್ಯ, ಕಾಲಕಾಲಕ್ಕೆ ಊಟ, ತಿಂಡಿ ಮತ್ತು ಅವರ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಯಿತು. ದೂರದ ಜಿಲ್ಲೆಗಳಿಂದ ಬಂದಿದ್ದ ಚಿಣ್ಣರಿಗೆ ಪ್ರವಾಸೋದ್ಯಮದ ಮೂಲಕ ಜಿಲ್ಲೆಯ ತಾಣಗಳನ್ನು ಕಾಣಲು ಅವಕಾಶ ನೀಡಲಾಯಿತು. ಇಲಾಖೆ ಸಿಬ್ಬಂದಿ ಹಾಗೂ ನಗರಸಭೆ ಆಯುಕ್ತ ಶ್ರೀಕಾಂತ್‌ ಅವರ ಶ್ರಮದಿಂದ ಇಡೀ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು’ ಎಂದು ಧನ್ಯವಾದ ಸಲ್ಲಿಸಿದರು.

ನಿಷ್ಪಕ್ಷಪಾತ ತೀರ್ಪು

‘ತೀರ್ಪುಗಾರರು ನಿಷ್ಪಕ್ಷಪಾತವಾಗಿ ತೀರ್ಪು ನೀಡಿದ್ದಾರೆ. ಪ್ರತಿ ಮಗು ಉತ್ತಮ ಸಾಧನೆ ಮಾಡಿದೆ. ಪ್ರತಿ ಜಿಲ್ಲೆಯ ಚಿಣ್ಣರು ನಡೆಸಿಕೊಟ್ಟ ನಾಟಕ ಮೆಚ್ಚುವಂತದ್ದು. ಮಕ್ಕಳ ನಟನೆಗೆ ಸರಿಸಾಟಿಯಿಲ್ಲ. ಅಂತಿಮವಾಗಿ ಆಯ್ಕೆ ಅನಿವಾರ್ಯವಾಗಿದ್ದು, ಮೌಲ್ಯಮಾಪನದಲ್ಲಿ ಎಲ್ಲಾ ಆಯಾಮ ಗುರುತಿಸಿ ಬಹುಮಾನ ಪ್ರಕಟಿಸಲಾಗಿದೆ’ ಎಂದು ಕಾರ್ಯಕ್ರಮದ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಿವರಿಸಿದರು.

ಡಯಟ್ ಪ್ರಾಂಶುಪಾಲ ಜಯರಾಮರೆಡ್ಡಿ, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಎಸ್.ನಾಗರಾಜಗೌಡ, ಮಾಧವರೆಡ್ಡಿ, ಕೆಂಪಯ್ಯ, ಸಿದ್ದರಾಜು, ಉಮಾದೇವಿ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT