ಸೋಮವಾರ, ಮೇ 23, 2022
21 °C
ತೆರಿಗೆ ಹೆಚ್ಚಳಕ್ಕೆ–ನಗರದ ಅಭಿವೃದ್ಧಿಗೆ ಸದಸ್ಯರ ಸಲಹೆ

ನಗರಸಭೆ: ಉಳಿತಾಯ ಬಜೆಟ್‌ಗೆ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಗರಸಭೆ ಅಧ್ಯಕ್ಷೆ ಶ್ವೇತಾ ಗುರುವಾರ ಇಲ್ಲಿ ಮಂಡಿಸಿದ ₹ 2.94 ಕೋಟಿ ಮೊತ್ತದ ಉಳಿತಾಯ ಬಜೆಟ್‌ಗೆ ಸದಸ್ಯರು ಸರ್ವಾನುಮತದಿಂದ ಅನುಮೋದನೆ ನೀಡಿದರು.

ತಮ್ಮ ಅಧಿಕಾರಾವಧಿಯ ಎರಡನೇ ಬಜೆಟ್‌ ಮಂಡಿಸಿದ ಶ್ವೇತಾ, ‘ಹಿಂದಿನ ಹಣಕಾಸು ವರ್ಷದಲ್ಲಿ ₹ 36.66 ಕೋಟಿ ಅಖೈರು ಶಿಲ್ಕು ಇದೆ. 2022–23ನೇ ಹಣಕಾಸು ವರ್ಷದಲ್ಲಿ ವಿವಿಧ ತೆರಿಗೆ ಹಾಗೂ ಆದಾಯ ಮೂಲಗಳಿಂದ ₹ 98.12 ಕೋಟಿ ಆದಾಯ ನಿರೀಕ್ಷಿಸ ಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅಖೈರು ಶಿಲ್ಕು ಸೇರಿದಂತೆ ₹ 134.78 ಕೋಟಿ ಆದಾಯ ಸಂಗ್ರಹಣೆ ಗುರಿ ಇದೆ’ ಎಂದು ತಿಳಿಸಿದರು.

‘ಈ ಹಣಕಾಸು ವರ್ಷದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ನಿರೀಕ್ಷಿತ ಖರ್ಚು ₹ 131.84 ಕೋಟಿ ಎಂದು ಅಂದಾಜಿಸಲಾಗಿದೆ. ಅಂತಿಮವಾಗಿ ಖರ್ಚು ಕಳೆದು ₹ 2.94 ಕೋಟಿ ಉಳಿತಾಯದ ಗುರಿ ಹೊಂದಲಾಗಿದೆ’ ಎಂದು ವಿವರಿಸಿದರು.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ನಗರದ ನೈರ್ಮಲ್ಯಕ್ಕೆ ₹ 4.85 ಕೋಟಿ, ಬೀದಿ ದೀಪ ನಿರ್ವಹಣೆ ಮತ್ತು ವಿದ್ಯುತ್ ಬಿಲ್ ಪಾವತಿಗೆ ₹ 4.20 ಕೋಟಿ, ಘನ ತ್ಯಾಜ್ಯ ನಿರ್ವಹಣೆಗೆ ಅಗತ್ಯವಿರುವ ಸಲಕರಣೆಗಳ ಖರೀದಿಗೆ ₹ 25.78 ಲಕ್ಷ, ಹೊಸ ರಸ್ತೆಗಳ ನಿರ್ಮಾಣಕ್ಕೆ ₹ 2.61 ಕೋಟಿ, ಹೊಸ ಚರಂಡಿ ಮತ್ತು ಮಳೆ ನೀರು ಚರಂಡಿಗಳ ನಿರ್ಮಾಣಕ್ಕೆ
₹ 6.59 ಕೋಟಿ, ಗೃಹಭಾಗ್ಯ ಯೋಜನೆಗೆ ₹ 2 ಕೋಟಿ ಮೀಸಲಿಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಆಸ್ತಿ ತೆರಿಗೆಯಿಂದ ₹ 7.23 ಕೋಟಿ, ನಗರಸಭೆಯ ಮಳಿಗೆಗಳ ಬಾಡಿಗೆಯಿಂದ ₹ 64.15 ಲಕ್ಷ, ನೀರು ಬಳಕೆದಾರರ ಶುಲ್ಕದಿಂದ ₹ 98.18 ಲಕ್ಷ, ಕಟ್ಟಡ ಪರವಾನಗಿ ಶುಲ್ಕದಿಂದ ₹ 50 ಲಕ್ಷ, ಘನ ತ್ಯಾಜ್ಯ ನಿರ್ವಹಣೆ ಶುಲ್ಕದಿಂದ ₹ 55 ಲಕ್ಷ, ಜಾಹೀರಾತು ತೆರಿಗೆಯಿಂದ ₹ 7.68 ಲಕ್ಷ ಆದಾಯ ನಿರೀಕ್ಷಿಸಲಾಗಿದೆ’ ಎಂದು ವಿವರಿಸಿದರು.

‘ಸರ್ಕಾರದಿಂದ ರಾಜ್ಯ ಹಣಕಾಸು ಆಯೋಗ (ಎಸ್‌ಎಫ್‌ಸಿ) ನಿಧಿಯಲ್ಲಿ ₹ 2.06 ಕೋಟಿ, ವೇತನ ಅನುದಾನದಿಂದ ₹ 5.66 ಕೋಟಿ, ವಿದ್ಯುತ್‌ ಅನುದಾನ ₹ 19.39 ಕೋಟಿ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅನುದಾನ ₹ 10 ಲಕ್ಷ, ಸ್ವಚ್ಛ ಭಾರತ್‌ ಮಿಷನ್‌ನಲ್ಲಿ ₹ 60 ಲಕ್ಷ, ಎಸ್‌ಎಫ್‌ಸಿ ಬರ ಪರಿಹಾರ ನಿಧಿಯಿಂದ ₹ 10 ಲಕ್ಷ, 14ನೇ ಮತ್ತು 15ನೇ ಹಣಕಾಸು ಯೋಜನೆಯಿಂದ ₹ 5.41 ಕೋಟಿ, ಅಮೃತ್‌ ಯೋಜನೆ ಯಿಂದ ₹ 7.50 ಕೋಟಿ, ಗೃಹ ಭಾಗ್ಯ ಯೋಜನೆಯಲ್ಲಿ ₹ 12 ಕೋಟಿ ಅನುದಾನ ನಿರೀಕ್ಷಿಸಲಾಗಿದೆ’
ಎಂದರು.

ತೆರಿಗೆ ಹೆಚ್ಚಿಸಿ: ‘ನಗರದ ಅಭಿವೃದ್ಧಿಗೆ ಸರ್ಕಾರದಿಂದ ಬರುವ ಅನುದಾನವನ್ನೇ ನೆಚ್ಚಿ ಕೂರಬಾರದು. ನಗರಸಭೆ ಆದಾಯ ಹೆಚ್ಚಿಸಲು ಸಾಕಷ್ಟು ಅವಕಾಶಗಳಿವೆ. ನಗರಸಭೆಯ ಪ್ರಮುಖ ಆದಾಯದ ಮೂಲಗಳಾದ ವಾಣಿಜ್ಯ ಮಳಿಗೆಗಳು, ಕಲ್ಯಾಣ ಮಂಟಪಗಳು, ಹೋಟೆಲ್‌ಗಳು, ಮದ್ಯದಂಗಡಿಗಳಿಂದ ಕಾಲಕಾಲಕ್ಕೆ ಸಮರ್ಪಕವಾಗಿ ವಿವಿಧ ತೆರಿಗೆ ವಸೂಲಿ ಮಾಡಬೇಕು. ನೀರಿನ ತೆರಿಗೆ, ಘನತ್ಯಾಜ್ಯ ನಿರ್ವಹಣೆ ಶುಲ್ಕವನ್ನು ಹೆಚ್ಚಳ ಮಾಡಬೇಕು. ಇದರಿಂದ ನಗರಸಭೆಯ ಆದಾಯ ಹೆಚ್ಚುತ್ತದೆ’ ಎಂದು ಹಲವು ಸದಸ್ಯರು ಸಲಹೆ ನೀಡಿದರು.

ಶಾಸಕ ಕೆ. ಶ್ರೀನಿವಾಸಗೌಡ, ನಗರಸಭೆ ಉಪಾಧ್ಯಕ್ಷ ಎನ್‌.ಎಸ್‌.ಪ್ರವೀಣ್‌ಗೌಡ, ಪೌರಾಯುಕ್ತ ಪ್ರಸಾದ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು