ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಯಪ್ಪ, ಹಂದೆ, ಮುನಿವೆಂಕಟಪ್ಪಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್

Published 2 ಜುಲೈ 2023, 14:43 IST
Last Updated 2 ಜುಲೈ 2023, 14:43 IST
ಅಕ್ಷರ ಗಾತ್ರ

ಕೋಲಾರ: ದಲಿತ ಹೋರಾಟಗಾರ ಸಿ.ಎಂ.ಮುನಿಯಪ್ಪ (ಸಾಮಾಜಿಕ ಸೇವಾ ಕ್ಷೇತ್ರ), ಸೌರಶಕ್ತಿಯ ಮಹತ್ವ ಸಾರಿದ ಹರೀಶ್‌ ಹಂದೆ (ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ) ಹಾಗೂ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (ಸಾಂಸ್ಕೃತಿಕ ಕ್ಷೇತ್ರ) ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರಕಟಿಸಿದೆ.

‘ವಿಶ್ವವಿದ್ಯಾಲಯದ 3ನೇ ವಾರ್ಷಿಕ ಘಟಿಕೋತ್ಸವ ನಗರ ಹೊರವಲಯದ ನಂದಿನಿ ಪ್ಯಾಲೇಸ್‍ನಲ್ಲಿ ಮಂಗಳವಾರ (ಜುಲೈ 4) ನಡೆಯಲಿದ್ದು, ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಗೌರವ ಡಾಕ್ಟರೇಟ್‌ ಹಾಗೂ ಪದವಿ ಪ್ರದಾನ ಮಾಡಲಿದ್ದಾರೆ’ ಎಂದು ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಿ.ಎಂ.ಮುನಿಯಪ್ಪ
ಸಿ.ಎಂ.ಮುನಿಯಪ್ಪ

ನಾಲ್ಕು ದಶಕಗಳಿಂದ ದಲಿತ ಪರ ಹೋರಾಟದಲ್ಲಿ ತೊಡಗಿರುವ ಕೋಲಾರದ ಸಿ.ಎಂ.ಮುನಿಯಪ್ಪ ಸಂಚಿಕೆ ದಿನಪತ್ರಿಕೆಯ ಸಂಪಾದಕ ಕೂಡ. 1978 ರಿಂದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾಗಿ, ರಾಜ್ಯ ಸಂಚಾಲಕರಾಗಿ, ರಾಜ್ಯ ಸಮಿತಿ ಸದಸ್ಯರಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ದಲಿತ ಭೂ ಹೋರಾಟ, ಜೀತಪದ್ಧತಿ ನಿರ್ಮೂಲನೆ, ದಲಿತರ ಮೇಲಿನ ದೌರ್ಜನ್ಯ ತಡೆಗೆ ಹಾಗೂ ದಲಿತರ ಶೈಕ್ಷಣಿಕ ಉನ್ನತಿಗೆ ಶ್ರಮಿಸಿದ್ದಾರೆ.

ವಿದ್ಯುತ್ತಿನ ಬೇಡಿಕೆ ಹೆಚ್ಚಾದಂತೆ ಪರ್ಯಾಯ ಮೂಲಗಳ ಶೋಧನೆಯು ನಿರಂತರ ನಡೆದಿದೆ. ಈ ನಿಟ್ಟಿನಲ್ಲಿ ಬಡವರಿಗೆ ಕಡಿಮೆ ದರದಲ್ಲಿ ವಿದ್ಯುತ್ ಪೂರೈಕೆ ಮಾಡಬೇಕೆಂಬ ಕನಸನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡವರು ಸೆಲ್ಕೊ ಇಂಡಿಯಾದ ಹರೀಶ್ ಹಂದೆ. ಒಂದೂವರೆ ದಶಕದಲ್ಲಿ ರಾಜ್ಯದ 1.2 ಲಕ್ಷ ಬಡವರ ಗುಡಿಸಲು ಬೆಳಗಿಸಿದ್ದಾರೆ. ಉಡುಪಿ ಜಿಲ್ಲೆಯ ಕೋಟದ ಇವರು ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತರು.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತಮಟೆ ಕಲಾವಿದರು. ಸ್ಥಳೀಯ ಕಲಾ ಪ್ರಕಾರ ಉಳಿಸಿ ಬೆಳೆಸಿರುವ ಇವರು ಈಚೆಗೆ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದರು. ಕಲೆ, ಸಾಹಿತ್ಯ, ಸಾಂಸ್ಕೃತಿಕ ರಂಗಕ್ಕೆ ಇವರ ಕೊಡುಗೆ ಪರಿಗಣಿಸಿ ಗೌರವ ಡಾಕ್ಟರೇಟ್‌ ನೀಡುತ್ತಿದ್ದೇವೆ ಎಂದು ‌ವಾನಳ್ಳಿ ಹೇಳಿದರು.

‘ಪರಿಸರ ಮತ್ತು ಅಭಿವೃದ್ಧಿ ಪತ್ರಕರ್ತ ಪಿ.ಸಾಯಿನಾಥ್‌ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಪಾಲ್ಗೊಳ್ಳಲಿದ್ದಾರೆ. 44 ಅಭ್ಯರ್ಥಿಗಳಿಗೆ ಚಿನ್ನದ ಪದಕ ‍ಸೇರಿ ಒಟ್ಟು 20,324 ಮಂದಿಗೆ ಪದವಿ ಪ್ರದಾನ ಮಾಡಲಾಗುವುದು’ ಎಂದರು.

ಕುಲಸಚಿವರಾದ ಪ್ರೊ.ಎನ್.ನರಸಿಂಹಮೂರ್ತಿ (ಆಡಳಿತ), ಡಾ.ಡೊಮಿನಿಕ್‌.ಡಿ (ಪರೀಕ್ಷಾಂಗ), ಹಣಕಾಸು ಅಧಿಕಾರಿ ವಸಂತಕುಮಾರ್, ಸಿಂಡಿಕೇಟ್ ಸದಸ್ಯರಾದ ಪ್ರೊ.ಬಿ.ಆರ್‌.ಸುಪ್ರೀತ್‌ ಹಾಗೂ ಕೆ.ಬಿ.ಹನುಮಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT