ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿಗೆ ವಿರೋಧ: ಪ್ರತಿಭಟನೆ

Last Updated 21 ಜನವರಿ 2021, 15:38 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಬೈರಕೂರು ಗ್ರಾ.ಪಂ ಕಸ ವಿಲೇವಾರಿಗೆ ಇರಗಮುತ್ತನಹಳ್ಳಿ ಮತ್ತು ಕೋನಕುಂಟೆ ಗ್ರಾಮದ ಮಧ್ಯೆ ಜಾಗ ಗುರುತಿಸಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ಇರಗಮುತ್ತನಹಳ್ಳಿ ಮತ್ತು ಕೋನಕುಂಟೆ ಗ್ರಾಮದ ಬಳಿ ಕಸ ವಿಲೇವಾರಿ ಮಾಡಿದರೆ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತದೆ. ಜತೆಗೆ ಕೃಷಿ ಚಟುವಟಿಕೆಗೆ ಅಡ್ಡಿಯಾಗುತ್ತದೆ’ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

‘ಕಸ ವಿಲೇವಾರಿಗೆ ಗುರುತು ಮಾಡಿರುವ ಗೋಮಾಳದ ಜಾಗವು ಶಾಲೆಗಳ ಮಧ್ಯ ಭಾಗದಲ್ಲಿರುತ್ತದೆ. ಆ ಶಾಲೆಗಳಲ್ಲಿ ನೂರಾರು ಮಕ್ಕಳು ಕಲಿಯುತ್ತಿದ್ದಾರೆ. ಅಲ್ಲಿ ಕಸ ವಿಲೇವಾರಿ ಮಾಡಿದರೆ ಶಾಲಾ ಪರಿಸರ ಹಾಳಾಗುತ್ತದೆ. ಕಸದಿಂದ ಮಕ್ಕಳ ಹಾಗೂ ಗ್ರಾಮಸ್ಥರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ’ ಎಂದು ಸಂಘದ ಸದಸ್ಯ ವೀರಭದ್ರಸ್ವಾಮಿ ಆತಂಕ ವ್ಯಕ್ತಪಡಿಸಿದರು.

‘ಗ್ರಾಮಗಳ ಅಕ್ಕಪಕ್ಕ ರೈತರ ಜಮೀನುಗಳಿವೆ. ಎರಡೂ ಗ್ರಾಮಗಳಲ್ಲಿ ಸಾಕಷ್ಟು ರೈತರು ರೇಷ್ಮೆ ಸಾಕಾಣಿಕೆ ಮಾಡುತ್ತಿದ್ದಾರೆ. ಕೃಷಿಯಿಂದಲೇ ಅವರ ಜೀವನ ನಡೆಯುತ್ತಿದೆ. ಗ್ರಾಮ ಪಂಚಾಯಿತಿಯು ಆ ಭಾಗದಲ್ಲಿ ಕಸಿ ವಿಲೇವಾರಿ ಮಾಡಿ ರೈತರ ಬದುಕನ್ನೇ ನಾಶ ಮಾಡಲು ಹೊರಟಿದೆ’ ಎಂದು ಕಿಡಿಕಾರಿದರು.

ನೀರು ಕಲುಷಿತ: ‘ಶಾಲೆಗಳ ಬಳಿಯ ಜಾಗದಲ್ಲಿ ವಿಲೇವಾರಿ ಮಾಡುವ ಕಸವು ಕೊಳೆತು ದುರ್ನಾತ ಹೆಚ್ಚಲಿದೆ. ಕೊಳೆತ ಕಸದಲ್ಲಿನ ವಿಷಕಾರಿ ರಾಸಾಯನಿಕಗಳು ಅಂತರ್ಜಲ ಸೇರಿ ನೀರು ಕಲುಷಿತಗೊಳ್ಳುವ ಅಪಾಯವಿದೆ. ಗ್ರಾಮದ ಜಾನುವಾರುಗಳು ಕಸದ ರಾಶಿಯಲ್ಲಿನ ಪ್ಲಾಸ್ಟಿಕ್ ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ತಿಂದು ಮೃತಪಡುವ ಸಾಧ್ಯತೆಯಿದೆ’ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

‘ಅಧಿಕಾರಿಗಳು ಕಸ ವಿಲೇವಾರಿಯಿಂದ ಆಗುವ ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ನಡೆಸದೆ ತರಾತುರಿಯಲ್ಲಿ ಜಮೀನು ಗುರುತಿಸಿದ್ದಾರೆ. ಕಸ ರಾಶಿಯಿಂದ ನೊಣ, ಸೊಳ್ಳೆ, ಹಂದಿ, ನಾಯಿ ಕಾಟ ಹೆಚ್ಚಿ ಜನರು ಗ್ರಾಮಗಳಲ್ಲಿ ವಾಸ ಮಾಡುವುದೇ ಕಷ್ಟವಾಗುತ್ತದೆ. ಗೋಮಾಳದ ಜಾಗದಲ್ಲಿ ಕಸ ವಿಲೇವಾರಿ ನಿರ್ಧಾರ ಕೈಬಿಡದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT