ಸೋಮವಾರ, ಆಗಸ್ಟ್ 15, 2022
27 °C

ಖಾಸಗಿ ಶಾಲೆಗಳ ಲೇವಾದೇವಿ ವ್ಯವಹಾರ: ಸಚಿವ ಸುರೇಶ್ ಕುಮಾರ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಕೆಲ ಖಾಸಗಿ ಶಾಲೆ ಆಡಳಿತ ಮಂಡಳಿಯವರು ಫೈನಾನ್ಸ್‌ ಕಂಪನಿಯವರನ್ನು ಕೂರಿಸಿಕೊಂಡು ಶಾಲಾ ಶುಲ್ಕ ಕಟ್ಟಲು ಪೋಷಕರಿಗೆ ಸಾಲ ಕೊಡಿಸುವ ಲೇವಾದೇವಿ ವ್ಯವಹಾರ ನಡೆಸುತ್ತಿದ್ದಾರೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಖಾಸಗಿ ಶಾಲೆಗಳು ಲೇವಾದೇವಿದಾರರ ಜತೆ ಸೇರಿ ವಸೂಲಿಗೆ ಇಳಿದಿದ್ದು, ಈ ಸಂಗತಿ ನಮ್ಮ ಗಮನಕ್ಕೆ ಬಂದಿದೆ. ಇದು ತಾತ್ವಿಕವಾಗಿ ಯಾರೂ ಒಪ್ಪಿಕೊಳ್ಳದ ವಿಚಾರ. ಈ ರೀತಿಯ ಬೆಳವಣಿಗೆ ಎಲ್ಲೂ ಕಂಡಿರಲಿಲ್ಲ. ಆದರೆ, ನಡೆದಿದೆ. ಇದು ಆಗಬಾರದಾಗಿತ್ತು’ ಎಂದರು.

‘ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಯವರು ಪೋಷಕರು ಹಾಗೂ ಲೇವಾದೇವಿದಾರರನ್ನು ಶಾಲೆಗೆ ಕರೆಸಿಕೊಂಡು ಸಾಲ ಕೊಡಿಸುತ್ತಿರುವುದು ಗೊತ್ತಾಗಿ ಮುಖ್ಯಮಂತ್ರಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇಂತಹ ಬೆಳವಣಿಗೆಗೆ ಅವಕಾಶ ಕೊಡುವುದಿಲ್ಲ. ಸಂಬಂಧಪಟ್ಟ ಶಾಲೆಗಳಿಗೆ ನೋಟಿಸ್‌ ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ’ ಎಂದು ತಿಳಿಸಿದರು.

‘ಪೋಷಕರ ಆರ್ಥಿಕ ಪರಿಸ್ಥಿತಿ ಹಾಗೂ ಖಾಸಗಿ ಶಾಲಾ ಶಿಕ್ಷಕರಿಗೆ ವೇತನ ಪಾವತಿಯಾಗದ ಸಂಗತಿ ತಿಳಿದಿದೆ. ಈ ಎರಡೂ ವಿಚಾರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಿದೆ. ಹಿಂದಿನ ವರ್ಷ ಸರ್ಕಾರ ಜಾರಿ ಮಾಡಿದ ಶೇ 70ರ ಶುಲ್ಕ ಪಾವತಿ ಅದೇಶ ಒಪ್ಪದ ಕೆಲ ಸಂಘಟನೆಯವರು ಮತ್ತು ಖಾಸಗಿ ಶಾಲೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ವರ್ಷವೂ ಇದೆ ಪರಿಸ್ಥಿತಿಯಿದೆ. ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರೇ ಇದನ್ನು ಬಗೆಹರಿಸಿಕೊಳ್ಳುವುದು ಉತ್ತಮ’ ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು