ಗುರುವಾರ , ಮೇ 19, 2022
20 °C
ಕ್ರೀಡಾಕೂಟದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಭರವಸೆ

ಕೇಂದ್ರ ಸಮಾನ ವೇತನಕ್ಕೆ ಸಂಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜ್ಯ ಸರ್ಕಾರಿ ನೌಕರರಿಗೆ 2023ರೊಳಗೆ ಕೇಂದ್ರ ಸರ್ಕಾರದ ಸಮಾನ ವೇತನ ಕೊಡಿಸುವ ಸಂಕಲ್ಪ ಮಾಡಿದ್ದೇವೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಭರವಸೆ ನೀಡಿದರು.

ಇಲ್ಲಿ ಬುಧವಾರ ಆರಂಭಗೊಂಡ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ‘ನೌಕರರು ಕ್ರಿಯಾಶೀಲರಾಗಿ ಕೆಲಸ ಮಾಡಲು ದೇಹ, ಮನಸ್ಸು ಸದೃಢವಾಗಿಸಿಕೊಂಡು ಸಂಘಟನೆ ಬಲಪಡಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲು ದೇಹ ಸ್ಪಂದಿಸಬೇಕು. ಇದಕ್ಕೆ ನೌಕರರು ನಿರಂತರವಾಗಿ ಯೋಗ, ವ್ಯಾಯಾಮ ಮಾಡಬೇಕು. ಉತ್ತಮ ಆರೋಗ್ಯವಿದ್ದರೆ ಮಾತ್ರ ಉತ್ತಮ ಮನಸ್ಸು ಇರುತ್ತದೆ. ದಿನನಿತ್ಯದ ಕಾರ್ಯ ಒತ್ತಡದಿಂದ ಹೊರ ಬಂದು ಸಕ್ರಿಯವಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿ’ ಎಂದು ಸಲಹೆ ನೀಡಿದರು,

‘ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ಜಿಲ್ಲೆಯಲ್ಲಿ ನೌಕರರ ಕ್ರೀಡಾಕೂಟ ಆಯೋಜಿಸಲಾಗಿದೆ. 2,500ಕ್ಕೂ ಹೆಚ್ಚು ನೌಕರರು ಒಂದೆಡೆ ಸೇರಿರುವುದು ಸಂಘಟನೆ ಶಕ್ತಿಗೆ ಸಾಕ್ಷಿ. ಸರ್ಕಾರ ಈ ಹಿಂದೆ ಜಿಲ್ಲಾ ನೌಕರರ ಕ್ರೀಡಾಕೂಟಕ್ಕೆ ₹ 50 ಸಾವಿರ ನೀಡುತ್ತಿತ್ತು. ಈ ಮೊತ್ತವನ್ನು ಈಗ ₹ 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹಿಂದಿನ ವರ್ಷ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಸರ್ಕಾರ ₹ 1.20 ಕೋಟಿ ನೀಡಿತ್ತು. ಈ ಬಾರಿಯ ಕ್ರೀಡಾಕೂಟಕ್ಕೆ ₹ 2 ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಒಪ್ಪಿದ್ದಾರೆ’ ಎಂದರು.

‘ಸರ್ಕಾರಿ ನೌಕರರು ಕಾರ್ಯಾಂಗದ ಭಾಗವೆಂದು ಅರಿತು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರಿ ನೌಕರರ ದಿನ ಆಚರಿಸುವಂತೆ ಮಾಡಿದ್ದೇವೆ. ಈ ದಿನಾಚರಣೆಯಂದು ಡಿ ದರ್ಜೆ ನೌಕರರಿಂದ ಐಎಎಸ್‌ ಅಧಿಕಾರಿಗಳವರೆಗೂ ಸಾಧಕರನ್ನು ಕರೆದು ಗೌರವಿಸುತ್ತೇವೆ. ಸಂಘ ಸದಾ ನೌಕರರ ಜತೆಗಿದೆ. ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ಸಂದರ್ಭದಲ್ಲಿ ನೌಕರರ ಶೇ 40ರಷ್ಟು ವೇತನ ಕಡಿತಗೊಳಿಸಲಾಯಿತು. ಆದರೆ, ಕರ್ನಾಟಕದಲ್ಲಿ ಆ ರೀತಿ ಮಾಡಲಿಲ್ಲ’ ಎಂದು ವಿವರಿಸಿದರು.

ಸಿಂಥೆಟಿಕ್ ಟ್ರ್ಯಾಕ್‌: ‘ಪೋಷಕರು ತಮ್ಮ ಮಕ್ಕಳು ವೈದ್ಯರು, ಎಂಜಿನಿಯರ್, ಐಎಎಸ್ ಅಧಿಕಾರಿಗಳಾಗಬೇಕೆಂದು ಬಯಸುತ್ತಾರೆ. ಆದರೆ, ಉತ್ತಮ ಕ್ರೀಡಾಪಟುವಾಗಲಿ ಎಂದು ಯಾರೂ ಬಯಸುವುದಿಲ್ಲ. ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಹಣಕಾಸು ನೆರವು ನೀಡುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಹೇಳಿದರು.

‘ನೌಕರರಿಗೆ ದೈಹಿಕ ಆರೋಗ್ಯ ಮುಖ್ಯ. ಆರೋಗ್ಯ ಕಾಪಾಡಿಕೊಳ್ಳಲು ದಿನನಿತ್ಯ ಯೋಗ, ವ್ಯಾಯಾಮ ಮಾಡಿ. ಕ್ರೀಡೆಯು ಜೀವನದ ಭಾಗವಾಗಲಿ. ಮಹಿಳೆಯರಿಗೆ ಮನೆ ಕೆಲಸದ ಜತೆಗೆ ಕಚೇರಿ ಕೆಲಸದ ಒತ್ತಡ ಇರುತ್ತದೆ. ಎಲ್ಲಾ ಮರೆತು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಿ. ಸ್ವಸ್ಥ ಸಮಾಜ ನಿರ್ಮಿಸಲು ಶ್ರಮಿಸಿ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕಿವಿಮಾತು ಹೇಳಿದರು.

ಟಗರು ಬಹುಮಾನ: ‘ನಾನು ಕಬಡ್ಡಿ ಪಟುವಾಗಿದ್ದೇನೆ. ಕಬಡ್ಡಿಯಲ್ಲಿ ಗೆಲ್ಲುವ ತಂಡಕ್ಕೆ ಟಗರು ಬಹುಮಾನ ನೀಡುತ್ತೇನೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಘೋಷಿಸಿದರು.

ನಗರಸಭೆ ಅಧ್ಯಕ್ಷ ಶ್ವೇತಾ, ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶಗೌಡಪ್ಪ ಪಾಟೀಲ, ಖಜಾಂಚಿ ಶ್ರೀನಿವಾಸ್, ಗೌರವಾಧ್ಯಕ್ಷ ಶಿವರುದ್ರಯ್ಯ, ಜಂಟಿ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ಅಧ್ಯಕ್ಷ ಜಿ.ಸುರೇಶ್‌ಬಾಬು, ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಮಂಜುನಾಥ್‌ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.