ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌ | ಹೆಚ್ಚಿದ ಮರಳು ದಂಧೆ!

Published 17 ಜುಲೈ 2023, 7:12 IST
Last Updated 17 ಜುಲೈ 2023, 7:12 IST
ಅಕ್ಷರ ಗಾತ್ರ

ಕೃಷ್ಣಮೂರ್ತಿ

ಕೆಜಿಎಫ್: ತಾಲ್ಲೂಕಿನಲ್ಲಿ ಅವ್ಯಾಹತವಾಗಿ ಮರಳು ದಂಧೆ ನಡೆಯುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ, ಪಂಚಾಯಿತಿ, ಕಂದಾಯ ಮತ್ತು ಪೊಲೀಸ್ ಇಲಾಖೆಗಳು ಜಾಣ ಕುರುಡುತನ ತೋರಿಸುತ್ತಿವೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. 

ಕೆಜಿಎಫ್ ಪೊಲೀಸ್ ಜಿಲ್ಲೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿ ಭಾಗಕ್ಕೆ ಹೊಂದಿಕೊಂಡ ಜಾಗದಲ್ಲಿ ಸಾಕಷ್ಟು ಮರಳು ನಿಕ್ಷೇಪಗಳಿವೆ. ಬಹುತೇಕ ನಿಕ್ಷೇಪಗಳು ನಿರ್ಜನ ಪ್ರದೇಶದಲ್ಲಿದ್ದು, ಅಲ್ಲಿ ಜನಸಂಚಾರ ವಿರಳವಾಗಿದೆ. ಭೌಗೋಳಿಕ ಸನ್ನಿವೇಶವನ್ನು ದುರುಪಯೋಗ ಮಾಡಿಕೊಳ್ಳುವ ಮರಳು ದಂಧೆಕೋರರು ರಾತ್ರೋರಾತ್ರಿ ರಾಜ್ಯದ ಗಡಿ ಭಾಗದಲ್ಲಿರುವ ಮರಳನ್ನು ಕಳ್ಳಸಾಗಣಿಕೆ ಮೂಲಕ ನೆರೆಯ ರಾಜ್ಯಕ್ಕೆ ರವಾನಿಸುತ್ತಿದ್ದಾರೆ. 

ಈ ಎಲ್ಲ ವಿಚಾರಗಳ ಕುರಿತು ವಿವಿಧ ಇಲಾಖೆಗಳಿಗೆ ತಿಳಿದಿದ್ದರೂ, ಹಿರಿಯ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ ಎಂದು ಆರೋಪಿಸಲಾಗಿದೆ. 

ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಮರಳು ದಂಧೆ ನಡೆಯುತ್ತಿಲ್ಲ.
ಕೆ.ವಿಜಯಕುಮಾರ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಆಂಧ್ರಪ್ರದೇಶದ ಕುಪ್ಪಂ ತಾಲ್ಲೂಕಿನ ಗಡಿಗೆ ಹೊಂದಿಕೊಂಡಿರುವ ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದೆ. ಉತ್ಕೃಷ್ಟ ದರ್ಜೆಯ ಮರಳು ಇಲ್ಲಿ ಸಿಗುತ್ತಿದ್ದು, ದಂಧೆಕೋರರಿಗೆ ಹಬ್ಬವಾಗಿ ಪರಿಣಮಿಸಿದೆ. ಮರಗಳು ತುಂಬಿದ ಬೀಡು ಪ್ರದೇಶದಲ್ಲಿರುವ ಕೆರೆಗಳಲ್ಲಿ ಮರಳು ತೆಗೆದು, ಕೆಲವೇ ಅಂತರದಲ್ಲಿರುವ ನೆರೆಯ ಆಂಧ್ರಪ್ರದೇಶದ ರಾಜಪೇಟೆ ರೋಡ್‌ಗೆ ಸಾಗಿಸಲಾಗುತ್ತಿದೆ. ರಾಜಪೇಟೆ ರೋಡ್ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ರಸ್ತೆಯಾಗಿದ್ದು, ಕೆಲಭಾಗ ಕರ್ನಾಟಕದಲ್ಲಿ ಉಳಿದ ಭಾಗ ಆಂಧ್ರಪ್ರದೇಶದಲ್ಲಿದೆ. ಪರಿಸ್ಥಿತಿಯ ಪ್ರಯೋಜನ ಪಡೆಯುತ್ತಿರುವ ದಂಧೆಕೋರರು ಕರ್ನಾಟಕದಿಂದ ಸಾಗಿಸಿದ ಮರಳನ್ನು ಆಂಧ್ರಪ್ರದೇಶಕ್ಕೆ ಸೇರಿದ ಪ್ರದೇಶದಲ್ಲಿ ಶೇಖರಣೆ ಮಾಡಲಾಗುತ್ತಿದೆ ಎಂದು ಜನರು ದೂರಿದ್ದಾರೆ. 

ಪ್ರಸ್ತುತ ವರ್ಷದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಾಗಕುಪ್ಪ ಗ್ರಾಮದ ಬಳಿಯ ಅನಂತಪುರ ಕೆರೆಕಟ್ಟೆ ದುರಸ್ತಿ ಕಾಮಗಾರಿಯನ್ನು ಜಾರಿಗೊಳಿಸಲಾಗಿದೆ. ಅದಕ್ಕಾಗಿ ₹5 ಲಕ್ಷ ಮೀಸಲು ಇಡಲಾಗಿದೆ. ಕೆರೆಯಲ್ಲಿ ದುರಸ್ತಿ ಆಗದೆ ಇದ್ದರೂ, ಕೆರೆಯಲ್ಲಿ ಮರಳು ಸಿಗುವ ಜಾಗಕ್ಕೆ ರಸ್ತೆ ಮತ್ತು ಮರಳು ರಾಶಿಯನ್ನು ಸಾಗಾಣಿಕೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ.

ಇಲ್ಲಿ ತೆಗೆದ ಮರಳನ್ನು ರಾಜಪೇಟೆ ರೋ‍ಡ್‌ನ ದಾಬಾ ಒಂದರ ಬಳಿ ಶೇಖರಿಸಲಾಗಿದೆ. ಮರಳು ದಂಧೆ ನಡೆಯುತ್ತಿರುವುದು ಪಂಚಾಯಿತಿ ಅಧಿಕಾರಿಗಳಿಗೆ ತಿಳಿದಿದೆ. ಆದರೂ ಅವರು ಮೌಖಿಕವಾಗಿ ಸಮ್ಮತಿ ನೀಡಿದ್ದಾರೆ ಎಂದು ಕೆರೆಯಲ್ಲಿ ಮರ, ಗಿಡ ಬೆಳೆಸಲು ಹಕ್ಕುದಾರಿಕೆ ಪಡೆದಿರುವ ಕೃಷ್ಣಾರೆಡ್ಡಿ ಎಂಬುವರು ಈಚೆಗೆ ಕಂದಾಯ ಇಲಾಖೆಗೆ ದೂರು ಸಹ ನೀಡಿದ್ದಾರೆ.

ದೂರಿನ ಅನ್ವಯ ಸ್ಥಳಕ್ಕೆ ಭೇಟಿ ನೀಡಿದ್ದ ಕಂದಾಯ ಅಧಿಕಾರಿಗಳು ವರದಿಯನ್ನು ತಹಶೀಲ್ದಾರರಿಗೆ ನೀಡಿದ್ದಾರೆ. ಆದರೆ ಇದುವರೆವಿಗೂ ಯಾವುದೇ ಕ್ರಮ ಜರುಗಿಲ್ಲ. ದಂಧೆ ನಡೆಯುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ತಹಶೀಲ್ದಾರ್‌ಗೆ ವರದಿ ಸಲ್ಲಿಕೆ

ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿಯ ಸರ್ವೆ ನಂಬರ್ 38ರಲ್ಲಿ ಬರುವ ಕೆರೆಯಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ದೂರಿನ ಅನ್ವಯ ಸ್ಥಳಕ್ಕೆ ಮೂರು ದಿನಗಳ ಹಿಂದೆ ತಹಶೀಲ್ದಾರರಿಗೆ ಸಲ್ಲಿಸಲಾಗಿತ್ತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೌಖಿಕವಾಗಿ ಸಮ್ಮತಿ ನೀಡಿದ ಮೇಲೆ ಮರಳು ಸಾಗಾಣಿಕೆ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದು ತಹಶೀಲ್ದಾರರಿಗೆ ವರದಿ ನೀಡಲಾಗಿದೆ ಎಂದು ರೆವಿನ್ಯೂ ಇನ್‌ಸ್ಪೆಕ್ಟರ್ ಲೋಕೇಶ್ ತಿಳಿಸಿದ್ದಾರೆ.

ಮರಳು ಸಾಗಾಣಿಕೆ ಮಾಡಲು ಕೆರೆಯಲ್ಲಿ ತಾತ್ಕಾಲಿಕ ರಸ್ತೆ ಮಾಡಿರುವುದು
ಮರಳು ಸಾಗಾಣಿಕೆ ಮಾಡಲು ಕೆರೆಯಲ್ಲಿ ತಾತ್ಕಾಲಿಕ ರಸ್ತೆ ಮಾಡಿರುವುದು
ಕೆರೆಯ ಪಕ್ಕದ ಜಮೀನಿನಲ್ಲಿ ಮರಗಳ ಮರೆಯಲ್ಲಿ ಮರಳು ಸಂಗ್ರಹಿಸಿರುವುದು
ಕೆರೆಯ ಪಕ್ಕದ ಜಮೀನಿನಲ್ಲಿ ಮರಗಳ ಮರೆಯಲ್ಲಿ ಮರಳು ಸಂಗ್ರಹಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT