ಗುರುವಾರ , ಫೆಬ್ರವರಿ 20, 2020
27 °C
ಸಂವಾದದಲ್ಲಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ನಾಗೇಂದ್ರಪ್ರಸಾದ್ ಸಲಹೆ

ಎಸ್ಸೆಸ್ಸೆಲ್ಸಿ: ಪಬ್ಲಿಕ್‌ ಪರೀಕ್ಷೆಯ ಭಯ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಮುನ್ನ ಪ್ರತಿದಿನವೂ ಅಮೂಲ್ಯವಾದದ್ದು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ, ಗೊಂದಲಗಳಿದ್ದರೆ ಧೈರ್ಯವಾಗಿ ಪ್ರಶ್ನಿಸಿ ಪರಿಹರಿಸಿಕೊಳ್ಳಬೇಕು’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಗೊಂದಲ ನಿವಾರಣೆಗಾಗಿ ತಾಲ್ಲೂಕಿನ ಕೆಂಬೋಡಿ ಜನತಾ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿ, ‘ಎಸ್ಸೆಸ್ಸೆಲ್ಸಿಯು ವಿದ್ಯಾರ್ಥಿ ಜೀವನದ ಮೊದಲ ಪಬ್ಲಿಕ್ ಪರೀಕ್ಷೆ ಎಂಬ ಆತಂಕ ಬೇಡ. ಎಲ್ಲಾ ಪರೀಕ್ಷೆಗಳೂ ಒಂದೇ. ಕಲಿಕೆಯಲ್ಲಿ ಯಶಸ್ಸು ಸಾಧಿಸಿದ್ದರೆ ಪ್ರಶ್ನೆಗಳಿಗೆ ಉತ್ತರಿಸಲು ಭಯ ಬೇಕಿಲ್ಲ’ ಎಂದು ಹೇಳಿದರು.

‘ಪ್ರಶ್ನೆಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ ಸಿಗುವುದರಿಂದ ಆತಂಕವಿಲ್ಲದೆ ಶಾಂತ ಚಿತ್ತದಿಂದ ಪರೀಕ್ಷಾ ಕೊಠಡಿಯಲ್ಲಿ ಉತ್ತರ ಬರೆಯಬೇಕು. ಬರವಣಿಗೆ ಉತ್ತಮವಾಗಿದ್ದರೆ ಹೆಚ್ಚಿನ ಅಂಕ ಬರುವ ಸಾಧ್ಯತೆಯಿದೆ. ಬರವಣಿಗೆಯು ಮೌಲ್ಯಮಾಪಕರು ಓದುವಂತಿದ್ದರೆ ಅಂಕ ನೀಡಿಕೆಯಲ್ಲೂ ಅವರಲ್ಲಿ ಧಾರಾಳತನ ಇರುತ್ತದೆ’ ಎಂದರು.

‘ಶಾಲೆಗಳಲ್ಲಿ ಈಗಾಗಲೇ ಪಠ್ಯಕ್ರಮ ಪೂರ್ಣಗೊಂಡಿದೆ. ಇಲಾಖೆ ಕ್ರಿಯಾ ಯೋಜನೆಯಂತೆ ಚಟುವಟಿಕೆ ನಡೆಯುತ್ತಿವೆ. ಶೇ 100ರ ಫಲಿತಾಂಶದ ಗುರಿಯೊಂದಿಗೆ ಪರೀಕ್ಷೆಗೆ ಸಿದ್ಧರಾಗಬೇಕು. ಈ ಬಾರಿ ಜಿಲ್ಲಾವಾರು ಫಲಿತಾಂಶದಲ್ಲಿ ಒಟ್ಟಾರೆ ಉತ್ತೀರ್ಣರಾದವರ ಸಂಖ್ಯೆ ಪರಿಗಣಿಸದೆ ಗುಣಾತ್ಮಕ ಅಂಕಗಳ ಆಧಾರದಲ್ಲಿ ಜಿಲ್ಲೆಗೆ ರ್‍ಯಾಂಕ್ ನೀಡುವುದಾಗಿ ಇಲಾಖೆ ಹೇಳಿದೆ. ಆದ್ದರಿಂದ ಉತ್ತಮ ಅಂಕ ಗಳಿಕೆಗೆ ಒತ್ತು ಕೊಡಿ’ ಎಂದು ಕಿವಿಮಾತು ಹೇಳಿದರು.

‘ಸಂಪನ್ಮೂಲ ವ್ಯಕ್ತಿಗಳು ಪರೀಕ್ಷೆಗೆ ಅಗತ್ಯ ಮಾಹಿತಿ ನೀಡುತ್ತಿದ್ದು, ಗೊಂದಲ ಪರಿಹರಿಸಿಕೊಳ್ಳಿ. ಸಮಸ್ಯೆಗಳಿದ್ದರೆ ಧೈರ್ಯದಿಂದ ಶಿಕ್ಷಕರ ಬಳಿ ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳಿ. ಈ ಕ್ಷಣದಿಂದಲೇ ಪರೀಕ್ಷೆಗೆ ಸಿದ್ಧತೆ ನಡೆಸಿ. ಗುಂಪು ಚರ್ಚೆ, ಸಂವಾದ, ಪುನರ್‌ ಮನನದ ಮೂಲಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ’ ಎಂದು ಸಲಹೆ ನೀಡಿದರು.

ಉಚಿತ ಶಿಕ್ಷಣ: ‘ಶಿಕ್ಷಣವು ಕತ್ತಲಿಂದ ಬೆಳಕಿನೆಡೆಗೆ ದಾರಿ ತೋರುತ್ತದೆ. ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು ಎಂಬುದು ಸರ್ಕಾರದ ಉದ್ದೇಶ. ಈ ಕಾರಣಕ್ಕಾಗಿ ಬಿಸಿಯೂಟ, ಕ್ಷೀರಭಾಗ್ಯ,ಉಚಿತ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಿ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ’ ಎಂದು ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ತಿಳಿಸಿದರು.

‘7ನೇ ತರಗತಿವರೆಗೂ ಅನುತ್ತೀರ್ಣ ಮಾಡುವಂತಿಲ್ಲ. ಆದರೆ, ಈ ಬಾರಿ ವಿಭಾಗ ಮಟ್ಟದಲ್ಲಿ ಸಾಮಾನ್ಯ ಪ್ರಶ್ನೆಪತ್ರಿಕೆ ನೀಡಿ ಮಕ್ಕಳಿಂದ ಉತ್ತರ ಬರೆಸುವ ಮೂಲಕ ಸರ್ಕಾರ ಸುಧಾರಣೆ ತಂದಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪಠ್ಯಪುಸ್ತಕ ಓದುವುದಕ್ಕೂ ಹೆಚ್ಚು ಒತ್ತು ಕೊಡಬೇಕು’ ಎಂದು ಸೂಚಿಸಿದರು.

ಮೊಬೈಲ್ ಯುಗ: ‘ಇದು ಮೊಬೈಲ್ ಯುಗ. ಮೊಬೈಲ್‌ ಬಳಕೆಯ ಗೀಳಿನಿಂದ ಹೊರಬಂದು ಧ್ಯಾನ, ಯೋಗದ ಮೂಲಕ ಮನಸ್ಸನ್ನು ಕಲಿಕೆಯತ್ತ ಕೇಂದ್ರೀಕರಿಸಿ. ಸಂಪೂರ್ಣ ಪರಿಶ್ರಮವಿದ್ದರೆ ಮಾತ್ರ ಉತ್ತಮ ಅಂಕ ಗಳಿಕೆ ಸಾಧ್ಯ’ ಎಂದು ಜನತಾ ಪ್ರೌಢ ಶಾಲೆ ಕಾರ್ಯದರ್ಶಿ ಬಿಸಪ್ಪಗೌಡ ಅಭಿಪ್ರಾಯಪಟ್ಟರು.

‘ಏಕಾಗ್ರತೆ, ಆಸಕ್ತಿ, ಶ್ರದ್ಧೆಯಿದ್ದರೆ ಕಲಿಕೆಯಲ್ಲಿ ಸಾಧನೆ ಮಾಡುವುದು ಸುಲಭ. ಮಕ್ಕಳಲ್ಲಿ ಸ್ವಯಂ ಕಲಿಕೆಯ ಮನೋಭಾವ ಬರಬೇಕು. ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಧ್ಯಾನ ಮತ್ತು ಯೋಗದಿಂದ ಮನಸ್ಸನ್ನು ಓದಿನತ್ತ ಕೇಂದ್ರೀಕರಿಸಲು ಸಾಧ್ಯ. ಪರೀಕ್ಷೆಗೆ ಇರುವ ದಿನಗಳನ್ನು ಸದ್ಬಳಕೆ ಮಾಡಿಕೊಂಡು ಸಕಲ ರೀತಿಯಲ್ಲೂ ಸಿದ್ಧರಾಗಿ’ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಜಿಲ್ಲಾ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಿ.ರುದ್ರಪ್ಪ, ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ಆರ್.ಶ್ರೀನಿವಾಸನ್, ಮುಖ್ಯ ಶಿಕ್ಷಕ ಸುಬ್ರಮಣಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು