ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಕ್ಕಳ ಸುರಕ್ಷತೆ ಮುಖ್ಯ

Last Updated 12 ಜುಲೈ 2021, 13:52 IST
ಅಕ್ಷರ ಗಾತ್ರ

ಕೋಲಾರ: ‘ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಮಕ್ಕಳ ಸುರಕ್ಷತೆ ಅತಿ ಮುಖ್ಯ. ಪರೀಕ್ಷಾ ಕೇಂದ್ರಗಳಲ್ಲಿನ ಕೊಠಡಿಗಳ ಸ್ವಚ್ಛತೆ ಹಾಗೂ ಸ್ಯಾನಿಟೈಸ್ ಮಾಡಲು ಗ್ರಾಮ ಪಂಚಾಯಿತಿ, ನಗರಸಭೆ ಸಹಕಾರ ಪಡೆಯಿರಿ’ ಎಂದು ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಜಂಟಿ ನಿರ್ದೇಶಕಿ ಗಾಯತ್ರಿದೇವಿ ಸೂಚಿಸಿದರು.

ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿನ ಸಿದ್ಧತೆ ಪರಿಶೀಲನೆಗಾಗಿ ತಾಲ್ಲೂಕಿನ ಬೆಗ್ಲಿಹೊಸಹಳ್ಳಿ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿ, ‘ಪರೀಕ್ಷೆ ನಡೆಯುವ 2 ದಿನವೂ ಶಾಲಾ ಕೊಠಡಿ, ಆವರಣ ಸ್ಯಾನಿಟೈಸ್ ಆಗಬೇಕು’ ಎಂದು ತಿಳಿಸಿದರು.

‘ಪರೀಕ್ಷಾ ಕೇಂದ್ರಗಳಲ್ಲಿನ ಶೌಚಾಲಯ ಸ್ವಚ್ಛವಾಗಿರಬೇಕು. ಶಾಲಾ ಆವರಣ, ಕೊಠಡಿಗಳಲ್ಲಿ ಸ್ವಚ್ಛತೆ, ಗಾಳಿ ಬೆಳಕು ಇರುವಂತೆ ವ್ಯವಸ್ಥೆ ಮಾಡಿ. ಪ್ರತಿ ವಿದ್ಯಾರ್ಥಿಗೊಂದು ಡೆಸ್ಕ್ ಒದಗಿಸುವಂತೆ ಸೂಚಿಸಿರುವುದರಿಂದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇತರೆ ಶಾಲೆಗಳಿಂದಲೂ ಡೆಸ್ಕ್ ತರಿಸಿಕೊಳ್ಳಿ. ಮಕ್ಕಳನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಕೂರಿಸ ಪರೀಕ್ಷೆ ಬರೆಸಬಾರದು’ ಎಂದು ಹೇಳಿದರು.

‘ಮಕ್ಕಳಿಗೆ ಒಎಂಆರ್ ಪ್ರಶ್ನೆಪತ್ರಿಕೆ ಇದೇ ಮೊದಲಾಗಿದ್ದು, ಗೊಂದಲವಾಗದಂತೆ ಇಲಾಖೆಯು ಈಗಾಗಲೇ ಒಎಂಆರ್ ಪ್ರಶ್ನೆಪತ್ರಿಕೆ ಬಿಡುಗಡೆ ಮಾಡಿದೆ. ಇದನ್ನು ಮಕ್ಕಳಿಂದ ಅಭ್ಯಾಸ ಮಾಡಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಕೋವಿಡ್ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಈ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಿ’ ಎಂದರು.

117 ಕೇಂದ್ರ: ‘ಜಿಲ್ಲೆಯಲ್ಲಿ 20,525 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ. ಹಿಂದಿನ ವರ್ಷ 72 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಬಾರಿ ಕೋವಿಡ್ ಸುರಕ್ಷತಾ ನಿಯಮಗಳಡಿ ಕೇಂದ್ರಗಳ ಸಂಖ್ಯೆಯನ್ನು 117ಕ್ಕೆ ಹೆಚ್ಚಿಸಲಾಗಿದೆ. ಪರೀಕ್ಷೆಗೆ ಬರುವ ಮಕ್ಕಳು ಪರೀಕ್ಷೆ ಮುಗಿದ ನಂತರ ಗುಂಪುಗೂಡದಂತೆ ಅರಿವು ಮೂಡಿಸಿ. ಪರೀಕ್ಷಾ ಕೇಂದ್ರಗಳಿಗೆ ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರ ನೇಮಕ, ಪೊಲೀಸರ ನಿಯೋಜನೆ ಸಂಬಂಧ ಕೇಂದ್ರಗಳ ಮುಖ್ಯ ಅಧೀಕ್ಷಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ’ ಎಂದು ತಿಳಿಸಿದರು.

‘ಪರೀಕ್ಷಾ ಕೇಂದ್ರಗಳಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಿ. ಮಕ್ಕಳ ಸುರಕ್ಷತೆ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ, ಗೊಂದಲಕ್ಕೆ ಅವಕಾಶ ನೀಡದೆ ಪರೀಕ್ಷೆ ಸುಗಮವಾಗಿ ನಡೆಸಿ’ ಎಂದು ಕಿವಿಮಾತು ಹೇಳಿದರು.

ಬೆಗ್ಲಿ ಹೊಸಹಳ್ಳಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಮಹದೇವಪ್ರಸಾದ್, ಶಿಕ್ಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT