ಬುಧವಾರ, ಜುಲೈ 28, 2021
21 °C

ಶ್ರೀನಿವಾಸಪುರ: ಭಾರಿ ಮಳೆಯಿಂದ ಸಂಚಾರ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಪಟ್ಟಣದ ಸುತ್ತ ಮುತ್ತ ಸೋಮವಾರ ರಾತ್ರಿ ಭಾರಿ ಮಳೆ ಸುರಿಯಿತು.

ಪಟ್ಟಣದ ಚಿಂತಾಮಣಿ ರಸ್ತೆಯ ಕೆಳಸೇತುವೆಯಲ್ಲಿ ನೀರು ತುಂಬಿಕೊಂಡ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಚಿಂತಾಮಣಿ ಕಡೆಯಿಂದ ಬಂದ ಹಾಗೂ ಚಿಂತಾಮಣಿಗೆ ಹೋಗಬೇಕಾದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪಟ್ಟಣದಿಂದ ನಂಬಿಹಳ್ಳಿಗೆ ಹೋಗುವ ರಸ್ತೆಯಲ್ಲಿ ನೀರು ನಿಂತು ಪ್ರಯಾಣಿಕರು ಪರದಾಡಿದರು.

ಚಿಂತಾಮಣಿ ಮಾರ್ಗದಲ್ಲಿ ಪ್ರಯಾಣಿಸಬೇಕಾದ ವಾಹನಗಳು ಸುಮಾರು 10 ಕಿ.ಮೀ ವರ್ತುಲ ರಸ್ತೆ ಬಳಸಿಕೊಂಡು ಹೋದವು. ನೀರಿನಲ್ಲಿ ಸಿಲುಕಿದ್ದ ವಾಹನಗಳು ಮಂಗಳವಾರ ಬೆಳಿಗ್ಗೆವರೆಗೆ ಅಲ್ಲೇ ಉಳಿದಿದ್ದವು.

ಪಟ್ಟಣದ ಇಂದಿರಾ ನಗರದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿನ 150 ಮಾವಿನ ಮಂಡಿಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ, ರೈತರು ತಂದಿದ್ದ ಕಾಯಿ ನೀರಿನಲ್ಲಿ ಮುಳುಗಿತ್ತು. ಬಹಳಷ್ಟು ಕಾಯಿ ರಭಸವಾಗಿ ಹರಿಯುವ ನೀರಿನಲ್ಲಿ ಕೊಚ್ಚಿಹೋಗಿ ರೈತರಿಗೆ ನಷ್ಟ ಉಂಟಾಯಿತು. ತೋಟಗಳಿಂದ ತಡವಾಗಿ ಮಂಡಿಗಳಿಗೆ ಕಾಯಿ ಹೊತ್ತು ತಂದ ಟ್ರಾಕ್ಟರ್‌ಗಳಿಂದ ಕಾಯಿ ಇಳಿಸಲು ಸಾಧ್ಯವಾಗಲಿಲ್ಲ. ಇಳಿಸಿದ್ದ ಕಾಯಿ ಮಳೆಗೆ ಸಿಕ್ಕಿ ಆಕರ್ಷಣೆ ಕಳೆದುಕೊಂಡಿತ್ತು.

ಪಟ್ಟಣದ ಹೊರ ವಲಯದಲ್ಲಿನ ಕ್ರಿಡಾಂಗಣದಲ್ಲಿ ಮಳೆ ನೀರು ತುಂಬಿಕೊಂಡು ಕೆರೆಯಂತೆ ಕಾಣುತ್ತಿತ್ತು. ಚರಂಡಿಗಳು ತುಂಬಿ ಹರಿದವು. ಕೆಲವು ಬಡಾವಣೆಗಳಲ್ಲಿನ ತಗ್ಗು ಪ್ರದೇಶಗಳಿಗೆ ನೀರು ತುಂಬಿ ಜನ ಪರದಾಡುವಂತಾಯಿತು. ಕಟ್ಟೆ ಕೆಳಗಿನ ಪಾಳ್ಯ, ಸಂತೆ ಮೈದಾನ, ಇಂದಿರಾ ನಗರ ಸೇರಿದಂತೆ ಕೆಲವು ಕಡೆಗಳಲ್ಲಿ ಮಳೆ ಮನೆಗಳಿಗೆ ನುಗ್ಗಿತ್ತು.

‘ಎಪಿಎಂಸಿಯ ಮಾವಿನ ಕಾಯಿ ಮಂಡಿಗಳಿಗೆ ನೀರು ನುಗ್ಗಿದ ಪರಿಣಾಮ ಕಾಯಿ ತಂದಿದ್ದ ರೈತರಿಗೆ ಭಾರಿ ನಷ್ಟ ಉಂಟಾಗಿದೆ. ಇದಕ್ಕೆ ಎಪಿಎಂಸಿ ಆಡಳಿತ ಮಂಡಳಿ ಹಾಗೂ ಮಂಡಿ ಮಾಲೀಕರು ಕಾರಣರಾಗಿದ್ದಾರೆ. ವರ್ತಕರು ಮಾವು ಬೆಳೆಗಾರರಿಂದ ಶೇ 10ರಷ್ಟು ಕಮಿಷನ್‌ ಪಡೆಯುತ್ತಾರೆ. ಎಪಿಎಂಸಿ ಆಡಳಿತ ಮಂಡಳಿ ಅಥವಾ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮಾರುಕಟ್ಟೆಯಲ್ಲಿ ಚರಂಡಿ ವ್ಯವಸ್ಥೆ ಮಾಡಿದ್ದಲ್ಲಿ ಮಳೆ ನೀರು ಮಂಡಿಗಳಿಗೆ ನುಗ್ಗುತ್ತಿರಲಿಲ್ಲ’ ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು