ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಗಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅಸ್ತು

₹20 ಕೋಟಿ ವೆಚ್ಚದಲ್ಲಿ ಶೀಘ್ರ ಕಾಮಗಾರಿ ಆರಂಭಕ್ಕೆ ಸಿದ್ಧತೆ; ರಾಜಕಾಲುವೆ, ದಾಸೋಹ ಭವನ, ರಸ್ತೆ ವಿಸ್ತರಣೆ
Last Updated 21 ಏಪ್ರಿಲ್ 2021, 5:37 IST
ಅಕ್ಷರ ಗಾತ್ರ

ಕೊಪ್ಪಳ: ಪೌರಾಣಿಕ ಮತ್ತು ಧಾರ್ಮಿಕ ಪ್ರಸಿದ್ಧ ಕ್ಷೇತ್ರ ಮುಜರಾಯಿ ಇಲಾಖೆಯ ಎ- 1 ಶ್ರೇಣಿ ಹೊಂದಿರುವ ತಾಲ್ಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಜರಾಯಿ ಇಲಾಖೆ ಮತ್ತು ಜಿಲ್ಲಾಡಳಿತದ ನೇತೃತ್ವದಲ್ಲಿ ₹20 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಶೀಘ್ರದಲ್ಲಿ ಶಂಕುಸ್ಥಾಪನೆ ನೆರೆವೇರಲಿದೆ.

ದೇವಸ್ಥಾನಕ್ಕೆ ಬಂದ ಆದಾಯದಿಂದ 40 ಕೋಟಿ ಹಣ ಸಂಗ್ರಹಿಸಿಡಲಾಗಿದ್ದು, ಈಗ ₹20 ಕೋಟಿ ವೆಚ್ಚದಲ್ಲಿ ಗರ್ಭಗುಡಿ ನವೀಕರಣ ಮತ್ತು ದೇವಸ್ಥಾನ, ರಾಜಗೋಪುರ, ರಾಜಕಾಲುವೆ, ದಾಸೋಹ ಭವನ, ಪಾರ್ಕಿಂಗ್, ರಸ್ತೆ ವಿಸ್ತರಣೆ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮುಂದಿನ ಹಂತವಾಗಿ ಉಳಿದ ಹಣದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ನಿರ್ಧರಿಸಲಾಗಿದೆ.

ಸಾರ್ವಜನಿಕ ಶೌಚಾಲಯ, ಶುದ್ಧ ಕುಡಿಯುವ ನೀರು, ಸ್ನಾನ ಘಟ್ಟ ಸೇರಿದಂತೆ ಆಧುನಿಕ ಮತ್ತು ಕಲಾತ್ಮಕ ಶೈಲಿಯಲ್ಲಿ ಪುನರ್‌ ನಿರ್ಮಾಣ ಕಾರ್ಯ ಮಾಡಲಾಗುತ್ತದೆ. ತಮಿಳುನಾಡು ಶೈಲಿಯ ಬಣ್ಣ, ಬಣ್ಣದ ಮೂರ್ತಿ ಮತ್ತು ಗೋಪುರ ಶೈಲಿಗಳನ್ನು ಬಿಟ್ಟು ಕನ್ನಡ ಶೈಲಿಯ ಹೊಯ್ಸಳ ಮತ್ತು ಚಾಲುಕ್ಯ ಶೈಲಿಯ ಕಲ್ಲುಗಳಿಂದಲೇ ದೇವಸ್ಥಾನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ

ನೂತನ ಕಟ್ಟಡ ಹೇಗೆ ಇರಲಿದೆ: ಜುಲೈ 2017ರಲ್ಲಿ ಅಷ್ಟಮಂಗಲ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಉಡುಪಿಯ ತಂತ್ರಿಗಳ ತಂಡ ಭಾಗವಹಿಸಿ, ಭಕ್ತರ ಪ್ರಶ್ನೆಗಳಿಗೆ ಉತ್ತರ ನೀಡಿತ್ತು. ದೇವಾಲಯದ ಗರ್ಭಗುಡಿ ಹೊರತುಪಡಿಸಿ, ಗೋಪುರ ಬದಲಾವಣೆಗೆ ತಂತ್ರಿಗಳ ತಂಡದ ವಾಸ್ತು ತಜ್ಞರು ಸಲಹೆ ನೀಡಿದ್ದರು.

ದೇವಾಲಯದ ಮಧ್ಯ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ವಾಸ್ತುಶಿಲ್ಪ ಬದಲಿಸಲು ಯೋಜಿಸಲಾಗಿದೆ. ಐದು ಮಾರ್ಗಗಳು, ವಿಐಪಿ ದ್ವಾರ ಮತ್ತು ಎದ್ದು ಕಾಣುವಂತೆ ರಾಜಗೋಪುರ, ವಿಶಾಲವಾದ ರಾಜಾಂಗಳ, ಸುಂದರವಾದ ಚಾಲುಕ್ಯ, ಹೊಯ್ಸಳ ಶೈಲಿಯ ಗೋಪುರ, ವಿವಿಧ ವಿಗ್ರಹಗಳನ್ನು ಒಳಗೊಂಡ ಸುಂದರ ದೇಗುಲ ನಿರ್ಮಾಣವಾಗಲಿದೆ.

ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಹೆಚ್ಚುವರಿ ಜಿಲ್ಲಾಧಿಕಾರಿ ಮಾರುತಿ.ಎಂ.ಪಿ ಭಾಗವಹಿಸಿ ದೇವಸ್ಥಾನದ ಸಂಪೂರ್ಣ ನೀಲನಕ್ಷೆಯನ್ನು ಪರಿಶೀಲಿಸಿ ಅಭಿವೃದ್ಧಿ ಕಾರ್ಯಕ್ಕೆ ಒಪ್ಪಿಗೆ ನೀಡಿದ್ದಾರೆ. ಅಂದುಕೊಂಡಂತೆ ನಡೆದರೆ ಒಂದು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಕೂಡಾ ತಿಳಿಸಿದೆ.

ಸಂಪ್ರದಾಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಐತಿಹಾಸಿಕ ಮತ್ತು ಆಧುನಿಕ ಶೈಲಿಯಲ್ಲಿ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ದೇವಸ್ಥಾನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈಚೆಗೆ ಸಾಮೂಹಿಕ ವಿವಾಹಗಳು ನಡೆಯುತ್ತಿದ್ದು, ಎಲ್ಲ ಸೌಕರ್ಯ ಕಾಲಮಿತಿಯೊಳಗೆ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಮತ್ತು ತೆಲಂಗಾಣದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಿದ್ದು, ಎಲ್ಲಮ್ಮನಗುಡ್ಡದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯದ ಮಾದರಿಯಲ್ಲಿ ಹುಲಿಗೆಮ್ಮದೇವಿ ದೇವಸ್ಥಾನ ಅಭಿವೃದ್ಧಿಗೊಳ್ಳುತ್ತಿರುವುದು ಭಕ್ತರಲ್ಲಿ ಸಂತಸ
ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT